ತಾವು ಒಪ್ಪಿಕೊಳ್ಳುವ ಸಿನಿಮಾಗಳಿಗೆ ತಕ್ಕಂತೆ ತಮಗಿರುವ ಪಾತ್ರಕ್ಕೆ ಅನುಸಾರವಾಗಿ ಸೆಲೆಬ್ರೆಟಿಗಳು ತೂಕ ಹೆಚ್ಚಿಸಿಕೊಳ್ಳುವ, ಇಳಿಸಿಕೊಳ್ಳುವ, ಕೆಲವೊಮ್ಮೆ ಫಿಟ್ ನೆಸ್ ಪಾಲಿಸುವ ಸಂಪ್ರದಾಯವನ್ನು ಕಠಿಣವಾಗಿ ಫಾಲೋ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಬ್ಯುಸಿ ಲೈಫಿಗೆ ನಮ್ಮ ದೇಹ ಸಪೋರ್ಟ್ ಮಾಡದೇ ಕಾರಣವಿಲ್ಲದೆಯೇ ನಮ್ಮ ದೇಹದ ತೂಕ ಏರಿಕೆಯಾಗುವ, ತೀರಾ ಇಳಿಯುವ ಸಾಧ್ಯತೆಯೂ ಹೆಚ್ಚಿರುತ್ತದೆ.
ಇತ್ತೀಚಿಗೆ ತಮ್ಮನ್ನು ದಪ್ಪ ಆಗಿದ್ದೀರಾ ಎಂದು ಟ್ರೋಲ್ ಮಾಡುತ್ತಿದ್ದ ಕಮೆಂಟಿಗರಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಖ್ಯಾತನಟಿ ನಿತ್ಯಾ ಮೆನನ್ ಖಡಕ್ ವಾರ್ನಿಂಗ್ ಕೂಡ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ನಿತ್ಯಾ ಮೆನನ್, ಟ್ರೋಲ್ ಮಾಡುವವರಿಗೆ ಖಾರವಾಗಿಯೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. “ದಪ್ಪಾ ಆಗಿದ್ದೀರಾ ಎಂದು ಹೇಳುವ ಜನರನ್ನು ಅಜ್ಞಾನಿಗಳೆಂದು ಭಾವಿಸುತ್ತೇನೆ. ತೂಕದ ಸಮಸ್ಯೆಗಳನ್ನು ಹೊಂದಿದ್ದರೆ, ಸೋಮಾರಿ ಆಗಿದ್ದಾರೆ, ತುಂಬಾ ತಿನ್ನುತ್ತಾರೆ ಎಂದು ತಿಳಿಯುತ್ತಾರೆ. ಸೋಮಾರಿಗಳಾಗುವುದರಿಂದ, ಅತಿಯಾಗಿ ತಿನ್ನುವುದರಿಂದ ಯಾರೂ ತೂಕ ಹೆಚ್ಚಿಸಿಕೊಳ್ಳುವುದಿಲ್ಲ. ಸಿನಿಮಾ ತಾರೆಯರು ಸೋಮಾರಿಗಳಲ್ಲವೆಂಬುದು ನಿಮ್ಮ ಅರಿವಿನಲ್ಲಿರಲಿ. ವೈಜ್ಞಾನಿಕವಾಗಿ ಹಾರ್ಮೋನ್ ಸಮಸ್ಯೆಯಿಂದ ಅಥವಾ ಮತ್ತಿತರ ಸಮಸ್ಯೆಗಳಿಂದ ತೂಕ ಹೆಚ್ಚಾಗುತ್ತದೆ. ನಿಮ್ಮ ಆಲೋಚನೆಗೆ ಬುದ್ದಿಕೊಟ್ಟು ಬಾಯಿಗೆ ಬಂದಂತೆ ಟ್ರೋಲ್ ಮಾಡಿ ಸಂಬಂಧಪಟ್ಟವರಿಗೆ ನೋವಾಗುವಂತೆ ಮಾಡುವುದನ್ನು ನಿಲ್ಲಿಸಿ ಎಂದು ತಿಳಿಸಿದ್ದಾರೆ.