ʻʻಅವೆಲ್ಲಾ ನೆನ್ನೆ ಮೊನ್ನೆ ಆದಂತೆ ಅನಿಸುತ್ತೆ… ಏನೆಲ್ಲಾ ಘಟಿಸಿಬಿಡ್ತು… ಇನ್ನೂ ಆ ದಿನಗಳು ಕಣ್ಣಲ್ಲೇ ಇವೆ…ʼʼ ಹೀಗೆ ಹಳೇದನ್ನು ನೆನಪು ಮಾಡಿಕೊಂಡು ಯಾರು ತಾನೆ ನಿಟ್ಟುಸಿರು ಬಿಡೋದಿಲ್ಲ ಹೇಳಿ. ಒಬ್ಬೊಬ್ಬರ ಬದುಕಿನ ಇತಿಹಾಸದ ಪುಟಗಳಲ್ಲಿ ಮುಚ್ಚಿಹೋದ ಪುಟಗಳನ್ನೆಲ್ಲಾ ತೆರೆದಿಟ್ಟಿರುವ ಚಿತ್ರ ನೋಡದ ಪುಟಗಳು.
ಈಗೆಲ್ಲಾ ಮೊಬೈಲು, ಸೋಷಿಯಲ್ ಮೀಡಿಯಾಗಳಿವೆ. ಶಾಲೆ, ಕಾಲೇಜು ಬಿಟ್ಟ ನಂತರವೂ ಮಕ್ಕಳು ಸಂಪರ್ಕದಲ್ಲಿರುತ್ತಾರೆ. ತೊಂಭತ್ತರ ದಶಕದದಲ್ಲಿ ಸ್ಕೂಲು, ಕಾಲೇಜು ಓದಿದವರು ಕಳೆದುಕೊಂಡ ಸಹಪಾಠಿಗಳನ್ನು ಹುಡುಕುವ ಪ್ರಕ್ರಿಯೆಯನ್ನು ನಿರಂತರ ಚಾಲನೆಯಲ್ಲಿಟ್ಟಿರುತ್ತಾರೆ. ಅಚಾನಕ್ಕಾಗಿ ಎಲ್ಲರೂ ಭೇಟಿಯಾದಾಗ ಹಳೆಯದ್ದನ್ನೆಲ್ಲಾ ಒಮ್ಮೆಲೇ ಕಣ್ಮುಂದೆ ತಂದುಕೊಳ್ಳುತ್ತಾರೆ. ಹೈಸ್ಕೂಲ್ ಕಾಲಘಟ್ಟ ಬದುಕಿನ ಮಹತ್ವದ ಘಟ್ಟ. ಆಗಷ್ಟೇ ರೆಕ್ಕೆ ಬಿಚ್ಚಿ ಹಾರುವ ಹೊತ್ತು. ಯಾವುದು ತಪ್ಪು, ಯಾವುದು ಸರಿ ಅಂತಾನೂ ಗೊತ್ತಾಗದ, ಹಿಡಿತಕ್ಕೆ ಸಿಗದ ವಯಸ್ಸು. ಆ ಹೊತ್ತಲ್ಲಿ ಮಕ್ಕಳ ನಡುವೆ ನಡೆಯುವ ಪ್ರೀತಿ, ಪ್ರೇಮ, ಕಾಮ, ಚೇಷ್ಟೆಗಳನ್ನೆಲ್ಲಾ ಅದೇ ಹುಡುಗರು ದೊಡ್ಡವರಾದ ಮೇಲೆ ನೆನಪಿಸಿಕೊಳ್ಳೋದೇ ಚೆಂದ.
1982ರ ಸಮಯದಲ್ಲಿ ಹುಟ್ಟಿ, 1998ರ ಲ್ಲಿ ಎಸ್ಸೆಲ್ಸಿ ಮುಗಿಸಿದ ವಿದ್ಯಾರ್ಥಿಗಳ ಬದುಕಿನ ಕತೆ ಹೊಂದಿರುವ ಸಿನಿಮಾ ನೋಡದ ಪುಟಗಳು. ಆ ಕಾಲಘಟ್ಟದಲ್ಲಿ ನಡೆದ ಘಟನೆಯೊಂದಕ್ಕೆ ಒಂದಿಷ್ಟು ರೂಪಕಗಳನ್ನು ಸೇರಿಸಿ ಚೆಂದದ ಸಿನಿಮಾವೊಂದನ್ನು ಕಟ್ಟಿಕೊಟ್ಟಿದ್ದಾರೆ. ಎಸ್.ವಸಂತ್‌ಕುಮಾರ್ ಸಿನಿಮಾಕ್ಕೆ ರಚನೆ,ನಿರ್ದೇಶನ ಮಾಡಿದ್ದಾರೆ. ಒಂಚೂರು ಸಿನಿಮಾ ಗ್ರಾಮರನ್ನು ಅಳವಡಿಸಿದ್ದಿದರೆ ಚಿತ್ರದ ತೂಕ ಹೆಚ್ಚುತ್ತಿತ್ತು. ನಾಯಕ ಪ್ರೀತಂಮಕ್ಕಿಹಳ್ಳಿ ಸೀರಿಯಲ್ ನಟನೆಯಿಂದ ಹೊರಬಂದು ಸಿನಿಮಾಗೆ ಬೇಕಿರುವ ಮಾರ್ಪಾಟು ಮಾಡಿಕೊಳ್ಳಬೇಕು. ನಾಯಕಿ ಕಾವ್ಯರಮೇಶ್ ನೋಡಲು ಮಾತ್ರವಲ್ಲ, ನಟನೆಯಲ್ಲೂ ಚೆಂದ ಅನ್ನಿಸುತ್ತಾರೆ. ಹಾಡುಗಳು ಬರಬೇಕಿದ್ದ ಜಾಗದಲ್ಲಿ ಬರಿಯ ಹಿನ್ನೆಲೆ ಸಂಗೀತವನ್ನಷ್ಟೇ ಉಳಿಸಿದ್ದಾರೆ. ಛಾಯಾಗ್ರಹಣ ಒಂದೊಂದು ಕಡೆ ಕೈ ಕೊಟ್ಟಿದೆ. ಹೊಸಬರ ಈ ಹೊಸ ಪ್ರಯತ್ನದಲ್ಲಿ ಒಂದಿಷ್ಟು ದೋಷಗಳಿದ್ದರೂ ಒಂದು ಸಲ ನೋಡಲು ಯಾವುದೇ ತಕರಾರಿಲ್ಲ!
Leave a Reply
You must be logged in to post a comment.