ಬಾಲಿವುಡ್ ನಟಿ ಸನ್ನಿ ಲಿಯೋನ್ಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈ ಹಿಂದೆ, ಅವರು ‘ಡಿಕೆ’ ಮತ್ತು ‘ಲವ್ ಯೂ ಆಲಿಯಾ’ ಚಿತ್ರಗಳ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು. ಬೆಂಗಳೂರಿಗೆ ಬಂದು, ಇಲ್ಲಿ ನಡೆದ ಚಿತ್ರೀಕರಣದಲ್ಲಿ ಕುಣಿದು ಹೋಗಿದ್ದರು. ಈಗ ಬರೋಬ್ಬರಿ ಏಳು ವರ್ಷಗಳ ಬಳಿಕ ಅವರು ಚಾಂಪಿಯನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ವಾಪಸ್ಸು ಬಂದಿದ್ದಾರೆ.
ಸಚಿನ್ ಧನಪಾಲ್ ನಾಯಕನಾಗಿರುವ ‘ಚಾಂಪಿಯನ್’ ಚಿತ್ರದಲ್ಲಿ ಸನ್ನಿ ಲಿಯೋನ್, ‘ಡಿಂಗರ್ ಬಿಲ್ಲಿ’ಯಾಗಿ ಸೊಂಟ ಬಳುಕಿಸಿದ್ದಾರೆ. ಈ ಹಾಡಿನ ಚಿತ್ರೀಕರಣದಲ್ಲಿ ಬಾಗವಹಿಸುವಾಗಲೇ, ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ತಮಗೆ ಅವಕಾಶ ಕೊಡಬೇಕು ಎಂದು ಹೇಳಿದ್ದರಂತೆ. ಅದರಂತೆ ಕೆಲವು ತಿಂಗಳುಗಳ ಹಿಂದೆ, ಅವರು ಬೆಂಗಳೂರಿಗೆ ಬಂದು ಚಿತ್ರದ ಹಾಡುಗಳನ್ನು ಖುದ್ದು ತಾವೇ ಬಿಡುಗಡೆ ಮಾಡಿ ಹೋಗಿದ್ದಾರೆ.

‘ಚಾಂಪಿಯನ್’ ಚಿತ್ರದ ‘ಡಿಂಗರ್ ಬಿಲ್ಲಿ’ ಹಾಡು, ಸನ್ನಿಗಿಂತ ಅವರ ಮಕ್ಕಳಿಗೆ ಬಹಳ ಇಷ್ಟವಂತೆ. ಈ ಕುರಿತು ಮಾತನಾಡಿದ್ದ ಅವರು, ‘ನನ್ನ ಮಕ್ಕಳಿಗೆ ಈ ಹಾಡು ತುಂಬ ಇಷ್ಟ. ಹಲವು ವಾರಗಳ ಕಾಲ ಈ ಹಾಡನ್ನು ಕೇಳಿಕೊಂಡು ಮನೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದರು’ ಎಂದು ಹೇಳಿಕೊಂಡಿದ್ದರು. ಇನ್ನು ಉತ್ತರ ಕರ್ನಾಟಕ ಶೈಲಿಯಲ್ಲಿರುವ ‘ಡಿಂಗರ್ ಬಿಲ್ಲಿ’ ಹಾಡಿಗೆ ‘ಚುಟು ಚುಟು’ ಖ್ಯಾತಿಯ ಶಿವು ಭೇರ್ಗಿ ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಶಶಾಂಕ್ ಮತ್ತು ಇಂದು ನಾಗರಾಜ್ ಈ ಹಾಡಿಗೆ ಧ್ವನಿಯಾಗಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯಸಂಯೋಜನೆ ಮಾಡಿದ್ದಾರೆ.

‘ಚಾಂಪಿಯನ್’ ಚಿತ್ರವು ಅ. 14ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಈ ಚಿತ್ರದಲ್ಲಿ ಸಚಿನ್ ಧನಪಾಲ್, ಅದಿತಿ ಪ್ರಭುದೇವ, ದೇವರಾಜ್, ಸುಮನ್, ಅವಿನಾಶ್, ರಂಗಾಯಣ ರು, ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ. ದಿವಂಗತ ಶಾಹುರಾಜ್ ಶಿಂಧೆ ನಿರ್ದೇಶಿಸಿರುವ ಈ ಚಿತ್ರವನ್ನು ಶಿವಾನಂದ್ ಎಸ್. ನೀಲಣ್ಣನವರ್ ನಿರ್ಮಿಸಿದ್ದಾರೆ.
No Comment! Be the first one.