ನಿವೇತಾ ಪೇತುರಾಜ್ ’ಒರು ನಾಲ್ ಕೂತು’ ತಮಿಳು ಚಿತ್ರದೊಂದಿಗೆ ನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದವರು. ಕಳೆದ ವರ್ಷ ’ಟಿಕ್ ಟಿಕ್ ಟಿಕ್’ ತಮಿಳು ಚಿತ್ರದಲ್ಲಿನ ವಿಶಿಷ್ಟ ಪಾತ್ರದಲ್ಲಿ ಗಮನಸೆಳೆದಿದ್ದರು. ಮತ್ತೊಂದು ಸಿನಿಮಾ ’ತಿಮಿರು ಪುಡಿಚವನ್’ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಸದ್ಯ ವಿಜಯ್ ಸೇತುಪತಿ ಚಿತ್ರವಲ್ಲದೆ ಮತ್ತೆರೆಡು ಚಿತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಕಾಲಿವುಡ್, ಟಾಲಿವುಡ್ ನಂತರ ಅವರೀಗ ಹಾಲಿವುಡ್ನತ್ತ ದೃಷ್ಟಿ ನೆಟ್ಟಿದ್ದಾರೆ. ಹಾಲಿವುಡ್ ಚಿತ್ರದಲ್ಲಿ ನಟಿಸಬೇಕೆನ್ನುವುದು ತಮ್ಮ ಅಂತಿಮ ಗುರಿ ಎಂದು ಹಲವಾರು ಬಾರಿ ಅವರು ಹೇಳಿಕೊಂಡಿದ್ದರು.
ಮೂಲಗಳ ಪ್ರಕಾರ ನಿವೇತಾ ಹಾಲಿವುಡ್ ಚಿತ್ರದಲ್ಲಿ ನಟಿಸುವುದು ದಿಟವಾಗಿದೆ. ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್ ಅವರು ನಿರ್ಮಿಸಲಿರುವ ಚಿತ್ರವೊಂದರ ಆಡಿಷನ್ನಲ್ಲಿ ಅವರು ಭಾಗಿಯಾಗಿದ್ದಾರೆ. ಫೈನಲ್ ಹಂತದ ಆಡಿಷನ್ನಲ್ಲಿರುವ ಅವರು ಪಾತ್ರವನ್ನು ಗಿಟ್ಟಿಸಿಕೊಳ್ಳುವ ಭರಪೂರ ಭರವಸೆಯಲ್ಲಿದ್ದಾರೆ. ’ಅವೆಂಜರ್ಸ್ ಎಂಡ್ ಗೇಮ್’, ಸ್ಪೈಡರ್ಮ್ಯಾನ್ ಫಾರ್ ಫ್ರಂ ಹೋಮ್’ ನಂತರ ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್ನ ಮತ್ತೆ ಕೆಲವು ಚಿತ್ರಗಳ ಘೋಷಣೆಯಾಗಿವೆ. ’ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ ೩’, ’ಬ್ಲ್ಯಾಕ್ ವಿಡೋ’, ’ದಿ ಎಟರ್ನಲ್ಸ್’, ಬ್ಲ್ಯಾಕ್ ಪ್ಯಾಂಥರ್ ೨’ ಅವರ ಕೆಲವು ಸಿನಿಮಾಗಳು. ಇವುಗಳ ಪೈಕಿ ಒಂದ ಸಿನಿಮಾದಲ್ಲಿ ನಿವೇತಾ ಪಾತ್ರ ಪಡೆಯುವ ಸಂಭವವಿದೆ.