ಅದು ಅಂತಿಂಥಾ ಪುಸ್ತಕವಲ್ಲ. ನೂರಾರು ವರ್ಷಗಳ ಹಿಂದೆ ಚೀನಿ ಮಾಂತ್ರಿಕನೊಬ್ಬ ಬರೆದಿಟ್ಟ ಬೃಹತ್ ಗ್ರಂಥ. ಯಾರೂ ಅದನ್ನು ತೆರೆಯದಂತೆ ಜೋಪಾನ ಮಾಡಲಾಗಿರುತ್ತದೆ. ಒಂದು ವೇಳೆ ಆ ಪುಸ್ತಕವನ್ನು ಯಾರಾದರೂ ತೆರೆದರೆ ಅವರ ಕತೆ ಮುಗಿದಂತೆ. ಇವೆಲ್ಲದರ ಅರಿವಿಲ್ಲದ ಹುಡುಗಿ ಆ ಪುಸ್ತಕವನ್ನು ತೆಗೆದುಕೊಂಡು ಬಂದು ತನ್ನ ಮನೆಯಲ್ಲೇ ಇಟ್ಟುಕೊಳ್ಳುತ್ತಾಳೆ. ಅಲ್ಲಿಂದ ಶುರುವಾಗುತ್ತದೆ ಪುಸ್ತಕದ ಸೈಡ್ ಎಫೆಕ್ಟು, ಸ್ಪೆಷಲ್ ಎಫೆಕ್ಟು ಎಲ್ಲವೂ…. ಘಳಿಗೆ ಘಳಿಗೆಗೂ ತಿರುವುಗಳನ್ನು ನೀಡುತ್ತಾ ಸಾಗುತ್ತದೆ. ಪುಸ್ತಕದಿಂದ ಎದ್ದು ಬಂದ ಆತ್ಮ ಯಾರನ್ನೆಲ್ಲಾ ಆಪೋಶನ ತೆಗೆದುಕೊಳ್ಳುತ್ತದೆ? ಕಡೆಗೆ ಎಷ್ಟು ಮಂದಿ ಬದುಕುಳಿಯಬಹುದು? ಹಾಗೆ ಜೀವ ಉಳಿಸಿಕೊಂಡವರ ಪಾಡೇನಾಗುತ್ತದೆ? ಉಳಿಸಲು ಬರುವವರು ಯಾರು? ಅನ್ನೋದು ಒಟ್ಟೂ ಚಿತ್ರದ ತಿರುಳು.
ಇದು ಕಳೆದ ಮೂರು ವಾರಗಳ ಹಿಂದೆ ತೆರೆಗೆ ಬಂದ ʻಓʼಹೆಸರಿನ ಚಿತ್ರದ ಕಥಾವಸ್ತುವಿದು. ಇದು ಔಟ್ ಅಂಡ್ ಔಟ್ ಹಾರರ್ ಸಿನಿಮಾ. ಪ್ರೇಕ್ಷಕರನ್ನು ಬೆಚ್ಚಿಬೀಳಿಸುವುದನ್ನೇ ಪರಮೋದ್ದೇಶವನ್ನಾಗಿಸಿಕೊಂಡು ರೂಪಿಸಿರುವ ಚಿತ್ರ ಓ. ಮಹೇಶ್ ಅಮ್ಮಲಿದೊಡ್ಡಿ ನಿರ್ದೇಶನದ ಈ ಸಿನಿಮಾದಲ್ಲಿ ಮಿಲನ ನಾಗರಾಜ್ ಮತ್ತು ಅಮೃತಾ ಅಯ್ಯಂಗಾರ್ ಒಟ್ಟಿಗೇ ನಟಿಸಿದ್ದಾರೆ. ಸಿದ್ದು ಮೂಲಿಮನಿ, ಸಂಗೀತಾ ಅನಿಲ್, ರಮೇಶ್ ಪಂಡಿತ್, ವಿನಯ್ ಕೃಷ್ಣಸ್ವಾಮಿ ಮತ್ತು ಸುಚೇಂದ್ರ ಪ್ರಸಾದ್ ಎಲ್ಲರೂ ಮೆಚ್ಚುವಂತೆ ಅಭಿನಯಿಸಿದ್ದಾರೆ. ನಿರ್ದೇಶಕ ಜೋಗಿ ಪ್ರೇಮ್ ಅವರ ಪಾಳಯದಲ್ಲಿ ಹೆಚ್ಚು ಗುರುತಿಸಿಕೊಂಡಿರುವ ದಶಾವರ ಚಂದ್ರು ʻಓʼ ಚಿತ್ರದಲ್ಲಿ ವಿಲಕ್ಷಣ ಮುದುಕಿಯ ಪಾತ್ರದಲ್ಲಿ ನಟಿಸಿ ಅಚ್ಛರಿ ಮೂಡಿಸಿದ್ದಾರೆ. ಬಾಲ ನಟ ಆಪಾಪ್ ಕೂಡಾ ಅಷ್ಟೇ ಮನೋಜ್ಞವಾಗಿ ನಟಿಸಿದ್ದಾನೆ. ಮಿಲನ ಮತ್ತು ಅಮೃತಾ ಥರದ ಕಲಾವಿದೆಯರು ಒಟ್ಟಿಗೆ ಸೇರಿದರೆ ಸುಮ್ಮನೇ ಮಾತಾ? ನಾನಾ? ನೀನಾ ಅಂತಾ ಕಾಂಪಿಟೇಶನ್ನಿಗಿಳಿದು ನಟಿಸಿದ್ದಾರೆ.
ದೇಶ, ರಾಜ್ಯಗಳ ಗಡಿಯಾಚೆಗೆ ಪುರಾತನ ಮಾಂತ್ರಿಕನೊಬ್ಬ ಸೃಷ್ಟಿಸಿದ ಆತ್ಮ-ಪ್ರೇತಗಳೆಲ್ಲಾ ತಲೆಮಾರುಗಳ ನಂತರವೂ ಹೇಗೆ ತಮ್ಮ ಪ್ರಭಾವ ಬೀರುತ್ತವೆ ಅನ್ನೋದು ಓ ಚಿತ್ರದ ಮೂಲ ಧಾತು. ಎಲ್ಲಿಂದಲೋ ಆರಂಭಿಸಿ, ಇನ್ನೆಲ್ಲೋ ಓಡಾಡಿಸಿ ಕಡೆಗೆ ಮತ್ತೊಂದು ಜಾಗದಲ್ಲಿ ಕೊನೆಗೊಳ್ಳುವ ಕಥೆ ಇದರಲ್ಲಿದೆ.
ಹೋಂ ಸ್ಟೇ, ಟೂರಿಸ್ಟ್ ಪ್ಲೇಸುಗಳಲ್ಲೇ ಇತ್ತೀಚೆಗೆ ದೆವ್ವದ ಸಿನಿಮಾ ಕತೆಗಳು ಗಿರಕಿ ಹೊಡೆಯುತ್ತವೆ. ಓ ಚಿತ್ರ ಆ ಥರದ ಸಿನಿಮಾ ಅಲ್ಲ. ಇಲ್ಲೂ ಬಂಗಲೆಯಲ್ಲಿ ದೆವ್ವ ಆಟ ತೋರಿಸುತ್ತದಾದರೂ, ದೆವ್ವದ ಮೂಲಸ್ಥಾನ ಗ್ರಂಥದಲ್ಲಿದೆ. ಅದು ಯಾಕೆ? ಹೇಗೆ ಅನ್ನೋದೆಲ್ಲಾ ಸಿನಿಮಾದಲ್ಲೇ ನೋಡಬೇಕು. ಇನ್ನು ಚಿತ್ರದ ತಂಬಾ ಬರೀ ದೆವ್ವದ ಕೃತ್ಯಗಳನ್ನೇ ವೈಭವೀಕರಿಸಿಲ್ಲ. ಒಂದೇ ಕಾಲೇಜಿನಲ್ಲಿ ಓದುವ ಅಕ್ಕ-ತಂಗಿ. ಇಬ್ಬರ ಜೊತೆಗೂ ಚೆಲ್ಲಾಟವಾಡುವ ಹುಡುಗ. ವಾಮಾಚಾರ, ಮಂತ್ರವಿದ್ಯೆಗಳ ಕುರಿತಾಗಿಯೂ ವಿವರಿಸಿದ್ದಾರೆ. ಮೂರು ವಾರಗಳ ನಂತರವೂ ಚಿತ್ರಮಂದಿರಗಳಲ್ಲಿ ಉಳಿದಿರುವ ʻಓʼವನ್ನು ನೋಡಿ ನೀವೂ ಒಮ್ಮೆ ʻಓಹ್ʼ ಅನ್ನಿ!
No Comment! Be the first one.