ನಮ್ ಜೊತೆಲಿರೋರನ್ನ ನಾವ್ ಚನ್ನಾಗ್ ನೋಡ್ಕೊಂಡ್ರೆ ಮೇಲ್ಗಡೆ ಇರೋನು ನಮ್ಮನ್ನ ಚನ್ನಾಗ್ ನೋಡ್ಕಂತಾನೆ… ಅಧಿಕಾರ ಅನ್ನೋದು ಇವತ್ತು ಒಬ್ರತ್ರ ಇದ್ರೆ, ನಾಳೆ ಇನ್ನೊಬ್ರತ್ರ ಇರತ್ತೆ. ಆದ್ರೆ, ಅನ್ನ ಹಾಕೋ ರೈತನಿಗೆ ಮೋಸ ಆದ್ರೆ ನಾನ್ ಸುಮ್ನೆ ಇರೋದಿಲ್ಲ…
ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರದ ಟ್ರೇಲರಿನಲ್ಲಿರುವ ಡೈಲಾಗು!
ಒಡೆಯ ಸಿನಿಮಾವನ್ನು ಎಲ್ಲ ವರ್ಗದ ಪ್ರೇಕ್ಷಕರಿಗಾಗಿಯೇ ರೂಪಿಸಿದಂತೆ ಕಾಣುತ್ತಿದೆ. ದರ್ಶನ್ ಅವರ ಅಭಿಮಾನಿಗಳ ಜೊತೆಗೆ ಫ್ಯಾಮಿಲಿ ಪ್ರೇಕ್ಷಕರನ್ನೂ ಸೆಳೆಯುವಂತಾ ಅಂಶಗಳು ಟ್ರೇಲರಿನಲ್ಲಿವೆ. ಅಭಿಮಾನಿಗಳ ಜೊತೆಗೆ ಉಳಿದ ಪ್ರೇಕ್ಷಕರೂ ಥಿಯೇಟರಿಗೆ ಬಂದರೆ ಸಿನಿಮಾ ಅತ್ಯದ್ಭುತ ಯಶಸ್ಸು ಕಾಣುತ್ತದೆ. ದರ್ಶನ್ ಅವರಿಗೆ ಮಹಿಳೆಯರು ಮತ್ತು ಮಕ್ಕಳು ಕೂಡಾ ಅಪಾರವಾಗಿ ಅಭಿಮಾನಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಟ್ರೇಲರು ನೋಡಿದ ಯಾರೇ ಆದರೂ ‘ಒಮ್ಮೆ ಸಿನಿಮಾವನ್ನು ನೋಡಬೇಕು ಅನ್ನಿಸುವಂತಿದೆ. ಜೊತೆಗೆ ಅಲ್ಪಸಂಖ್ಯಾತರು ಮತ್ತು ರೈತರನ್ನು ಸೆಳೆಯುವ ಪ್ರಯತ್ನ ಕೂಡಾ ಒಡೆಯ ಟ್ರೇಲರಿನಲ್ಲಾಗಿದೆ. ಇನ್ನೂ ಹೆಚ್ಚಿನ ವಿಚಾರ ತಿಳಿದುಕೊಳ್ಳಲು ಒಮ್ಮೆ ಒಡೆಯನ ಟ್ರೇಲರು ನೋಡಲೇಬೇಕು..
ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎನ್.ಸಂದೇಶ್ ಅವರು ನಿರ್ಮಿಸಿರುವ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಡಿಸೆಂಬರ್ ೧೨ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಸಂದೇಶ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಹಲವು ವಿಶೇಷಗಳ ಸಂಗಮ. ಈ ಹಿಂದೆ ಸಂದೇಶ್ ಪ್ರೊಡಕ್ಷನ್ಸ್ನಿಂದ ದರ್ಶನ್ ಅವರು ಅಭಿನಯಿಸಿದ್ದ ‘ಪ್ರಿನ್ಸ್ ಹಾಗೂ ‘ಐರಾವತ ಚಿತ್ರಗಳನ್ನು ನಿರ್ಮಿಸಲಾಗಿತ್ತು. ದರ್ಶನ್ ಅವರ ಅಭಿನಯದಲ್ಲಿ ಈ ಸಂಸ್ಥೆ ನಿರ್ಮಿಸಿರುವ ಮೂರನೇ ಚಿತ್ರ ‘ಒಡೆಯ. ಹಾಗೂ ನಿರ್ದೇಶಕ ಎಂ.ಡಿ.ಶ್ರೀಧರ್ ಈ ಹಿಂದೆ ದರ್ಶನ್ ಅವರ ನಟನೆಯಲ್ಲಿ ‘ಬುಲ್ಬುಲ್ ಹಾಗೂ ‘ಪೊರ್ಕಿ ಚಿತ್ರಗಳನ್ನು ನಿರ್ದೇಶಿಸಿದ್ದರು. ಶ್ರೀಧರ್ ಹಾಗೂ ದರ್ಶನ್ ಅವರ ಕಾಂಬಿನೇಶನ್ನಲ್ಲಿ ಮೂದಿಬರುತ್ತಿರುವ ಮೂರನೇ ಚಿತ್ರ ‘ಒಡೆಯ. ಇದೇ ವರ್ಷದಲ್ಲಿ ದರ್ಶನ್ ಅವರು ಅಭಿನಯಿಸಿದ್ದ ‘ಕುರುಕ್ಷೇತ್ರ ಹಾಗೂ ‘ಯಜಮಾನ ಚಿತ್ರಗಳು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದು, ‘ಒಡೆಯ ಚಿತ್ರ ಕೂಡ ಇದೇ ಡಿಸೆಂಬರ್ ೧೨ಕ್ಕೆ ಬಿಡುಗಡೆಯಾಗುತ್ತಿದ್ದು, ದರ್ಶನ್ ಅವರ ಒಟ್ಟು ಮೂರು ಚಿತ್ರಗಳು ಈ ವರ್ಷದಲ್ಲೇ ಬಿಡುಗಡೆಯಾದಂತಾಗುತ್ತದೆ.
ಎಂ.ಡಿ.ಶ್ರೀಧರ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಜಯಂತ ಕಾಯ್ಕಿಣಿ, ಡಾ||ವಿ.ನಾಗೇಂದ್ರಪ್ರಸಾದ್, ಕವಿರಾಜ್ ಹಾಗೂ ಬಹದ್ದೂರ್ ಚೇತನ್ ಕುಮಾರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಕೆ.ಕೃಷ್ಣಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಕಲೈ ನೃತ್ಯ ನಿರ್ದೇಶನ ಹಾಗೂ ವಿಜಯ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ರಾಘವಿ ತಿಮ್ಮಯ್ಯ ಅಭಿನಯಿಸಿದ್ದಾರೆ. ಯಶಸ್ ಸೂರ್ಯ, ಪಂಕಜ್, ನಿರಂಜನ್, ಸಮರ್ಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.