ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ‘ಒಡೆಯ ಸಿನಿಮಾದ ಪೋಸ್ಟರೊಂದು ರಿಲೀಸಾಗಿದೆ. ಈ ಚಿತ್ರದಲ್ಲಿ ದರ್ಶನ್ ಮಗುವನ್ನು ಮೇಲಕ್ಕೆತ್ತಿ ಮುದ್ದಾಡುತ್ತಿದ್ದಾರೆ. ಈ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೇ ದರ್ಶನ್ ಅವರ ಅಭಿಮಾನಿಗಳೂ ಸಹ ಅವರಂತೆಯೇ ಮಕ್ಕಳನ್ನು ಎತ್ತಿಕೊಂಡು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ!
ಒಡೆಯನ ಪೋಸ್ಟರಿನ ಎಫೆಕ್ಟು ಈಗ ಎಳೇ ಮಕ್ಕಳಿಗೆ ಎಲ್ಲಿಲ್ಲದ ವ್ಯಾಲ್ಯೂ ತಂದುಕೊಟ್ಟಿದೆ. ತಮ್ಮ ಮನೆಯಲ್ಲಿ ಮಕ್ಕಳಿಲ್ಲದಿದ್ದರೂ ಊರೆಲ್ಲಾ ಹುಡುಕಿಯಾದರೂ, ಪುಟ್ಟ ಮಕ್ಕಳನ್ನು ತಲಾಷು ಮಾಡಿ ಫೋಟೋ ತೆಗೆಸಿಕೊಂಡು ತಮ್ಮ ಫೇಸ್ ಬುಕ್, ಟ್ವಿಟರ್, ವಾಟ್ಸಾಪ್ ಸ್ಟೇಟಸ್ ಸೇರಿದಂತೆ ಎಲ್ಲೆಡೆ ಟ್ಯಾಗ್ ಮಾಡುತ್ತಿದ್ದಾರೆ. ವಿಶೇಷವೆಂದರೆ ದರ್ಶನ್ ಅವರ ಮಹಿಳಾ ಅಭಿಮಾನಿಗಳೂ ಸಹ ಈ ಫೋಟೋವನ್ನು ಅನುಕರಿಸುತ್ತಿರುವುದು.
ಸಂದೇಶ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಎನ್. ಸಂದೇಶ್ ನಿರ್ಮಾಣದ ‘ಒಡೆಯ ಚಿತ್ರವನ್ನು ಎಂ.ಡಿ. ಶ್ರೀಧರ್ ನಿರ್ದೇಶಿಸಿದ್ಧಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ದರ್ಶನ್ ಅವರ ಸಿನಿಮಾಗಳೂ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಸಂಸ್ಥೆ ಸಂದೇಶ್ ಪ್ರೊಡಕ್ಷನ್. ಎಂ.ಡಿ. ಶ್ರೀಧ್ ಕೂಡಾ ಈ ಹಿಂದೆ ದರ್ಶನ್ ಅವರ ಸಿನಿಮಾಗಳನ್ನು ನಿರ್ದೇಶಿಸಿರುವವರು. ಹಿಟ್ ಕಾಂಬಿನೇಷನ್ ‘ಒಡೆಯನ ಜೊತೆ ಒಂದಾಗಿದೆ. ಒಡೆಯ ಎನ್ನುವ ಹೆಸರಿಗೆ ಹೇಳಿಮಾಡಿಸಿದಂತಾ ದರ್ಶನ್ ಅವರ ಲುಕ್ಕು ಈಗಾಗಲೇ ಎಲ್ಲರನ್ನೂ ಸೆಳೆದಿದೆ. ಈಗ ಪೋಸ್ಟರ್ ಟ್ರೆಂಡ್ ಕ್ರಿಯೇಟ್ ಮಾಡಿದೆ. ಬಿಡುಗಡೆಯಾಗಲಿರುವ ಹಾಡುಗಳು ಮತ್ತು ಸಿನಿಮಾ ಕೂಡಾ ಇದೇ ಹಾದಿ ಹಿಡಿಯುವಂತಾಗಲಿ..