ಒಡೆಯ ಸಿನಿಮಾ ತೆರೆಗೆ ಬಂದಿದೆ. ಈ ಚಿತ್ರದ ಕುರಿತಾಗಿ ದರ್ಶನ್ ಅವರ ಅಭಿಮಾನಿಗಳೂ ಸೇರಿದಂತೆ ಸಾಕಷ್ಟು ಕುತೂಹಲವಿತ್ತು. ಯಾಕೆಂದರೆ ಇದು ದರ್ಶನ್ ಮತ್ತು ಸಂದೇಶ್ ಸಂಸ್ಥೆಯ ಮೂರನೇ ಸಿನಿಮಾ. ಎಂ.ಡಿ. ಶ್ರೀಧರ್ ಜೊತೆಗೆ ದರ್ಶನ್ ಮೂರನೇ ಸಿನಿಮಾ. ಅಷ್ಟು ಮಾತ್ರವಲ್ಲದೆ ಯಜಮಾನ ಮತ್ತು ಕುರುಕ್ಷೇತ್ರದ ಗೆಲುವಿನ ನಂತರ ಬಿಡುಗಡೆಯಾಗುತ್ತಿರುವ ಸಿನಿಮಾ ಇದಾಗಿದೆ. ತಮಿಳಿನ ವೀರಂ ಚಿತ್ರದ ರಿಮೇಕ್ ಒಡೆಯ. ಮೂಲ ಚಿತ್ರಕ್ಕಿಂತಾ ಒಡೆಯ ಹೇಗೆ ಭಿನ್ನವಾಗಿರಲಿದೆ? ಯಥಾವತ್ತು ಹಾಗೇ ಮರುಸೃಷ್ಟಿಸಿದ್ದಾರಾ? ಅಜಿತ್ ಅಬ್ಬರಿಸಿದ್ದ ಪಾತ್ರದಲ್ಲಿ ದರ್ಶನ್ ಹೇಗೆ ಕಾಣಬಹುದು ಅನ್ನೋ ಕ್ಯೂರಿಯಾಸಿಟಿಗಳಿಗೆಲ್ಲಾ ಇಂದು ಉತ್ತರ ದೊರೆತಿದೆ.

ಮನೆಗೆ ಬಂದವರಿಗೆ ಧಾರಾಳವಾಗಿ ಸಹಾಯ ನೀಡುವ, ಸಹೋದರರನ್ನು ಪ್ರೀತಿಯಿಂದ ಪೊರೆಯುವ, ಸದಾ ಸಮಾಧಾನದಿಂದಲೇ ಎಲ್ಲರೊಂದಿಗೆ ವ್ಯವಹರಿಸುವ ವ್ಯಕ್ತಿ ಒಡೆಯ. ಆದರೆ, ತಪ್ಪು ಅನ್ನಿಸಿದರೆ ಮಾತ್ರ, ನೆಲಕ್ಕೆ ಅದುಮಿ ಗದುಮುವ ದೈತ್ಯ. ಸದಾ ಶಾಂತಚಿತ್ತನಾದ ಒಡೆಯ ಯಾಕೆ ರೆಬೆಲ್ ಆಗುತ್ತಾನೆ? ಒಡೆಯ ಸಿಡಿದು ನಿಲ್ಲುವುದು ಯಾರ ವಿರುದ್ಧ ಅನ್ನೋದು ಸಿನಿಮಾದ ಪ್ರಮುಖ ಅಂಶ.

ಅಣ್ಣನೆಂದರೆ ಅಪಾರವಾಗಿ ಪ್ರೀತಿಸುವ ಸಹೋದರರು, ಬರುವವಳು ತಮ್ಮ ಜೇನುಗೂಡಿನಂಥಾ ಮನೆ, ಮನಗಳ ಬಾಂಧವ್ಯ ಕದಡಿಬಿಡುತ್ತಾಳೋ ಅನ್ನೋ ಭಯದಲ್ಲಿ ಯಾರೊಬ್ಬರೂ ಮದುವೆಯಾಗಲು ತಯಾರಿರೋದಿಲ್ಲ. ಆದರೆ ಒಳಗೊಳಗೇ ಗುಪ್ತವಾದ ಪ್ರೀತಿ ಮಾತ್ರ ಚಾಲನೆಯಲ್ಲಿ ಇದ್ದೇ ಇರುತ್ತದೆ. ಈ ನಡುವೆ ನಾಯಕಿಯ ಎಂಟ್ರಿಯಾಗುತ್ತದೆ. ಹೀರೋಗೂ ಭೂಗತ ಜಗತ್ತಿಗೂ ಕನೆಕ್ಷನ್ನಿದೆ ಅಂತಾ ಗೊತ್ತಾದ ಮೇಲೆ ಆಕೆಯ ಪ್ರತಿಕ್ರಿಯೆ ಏನಾಗಿರುತ್ತದೆ? ನಾಯಕಿಯ ಆಗಮನದಿಂದ ಸಹೋದರರ ನಡುವೆ ಏನಾದರೂ ಬದಲಾವಣೆಗಳು ಉಂಟಾಗುತ್ತದಾ? ಇಂಥ ಸಾಕಷ್ಟು ಪ್ರಶ್ನೆಗಳಿಗೆ ಚಿತ್ರ ಉತ್ತರ ನೀಡುತ್ತದೆ. ಒಡೆಯನಾಗಿ ದರ್ಶನ್ ನಟನೆ ಅಮೋಘ. ಮನೆಯ ಹಿರಿಯಣ್ಣನಾಗಿ, ಪಾತ್ರವೇ ತಾವಾಗಿ ದರ್ಶನ ನೀಡಿದ್ದಾರೆ. ಮೊದಲ ಭಾಗದಲ್ಲಿ ಚಿಕ್ಕಣ್ಣ ಮತ್ತು ದ್ವಿತೀಯಾರ್ಧದಲ್ಲಿ ಸಾಧು ರಂಜಿಸುತ್ತಾರೆ.

ಅಬ್ಬರವಿಲ್ಲದ ಅರ್ಜುನ್ ಜನ್ಯ ಮ್ಯೂಸಿಕ್ಕು ಕಥೆಗೆ ಪೂರಕವಾಗಿದೆ. ಸಾಮಾನ್ಯವಾಗಿ ದರ್ಶನ್ ಅವರ ಸಾಕಷ್ಟು ಸಿನಿಮಾಗಳಿಗೆ ಕೃಷ್ಣಕುಮಾರ್ ಛಾಯಾಗ್ರಹಣವಿರುತ್ತದೆ. ಆದರಿಲ್ಲಿ ಕೆ.ಕೆ. ಕ್ಯಾಮೆರಾ ಮತ್ತಷ್ಟು ಹೊಸ ಹೊಸ ಕೋನಗಳಲ್ಲಿ ಕೆಲಸ ಮಾಡಿದೆ. ನಾಯಕಿ ಸನಾ ತಿಮ್ಮಯ್ಯಗೆ ಇದು ಮೊದಲ ಸಿನಿಮಾವಾದರೂ ಮಾಗಿದ ನಟನೆ ನೀಡಿದ್ದಾರೆ. ಪೋಷಕ ಪಾತ್ರಗಳಲ್ಲಿ ದೇವರಾಜ್, ರವಿಶಂಕರ್, ಸಾಧುಕೋಕಿಲ, ಶರತ್ ಲೋಹಿತಾಶ್ವ, ಚಿಕ್ಕಣ್ಣ, ಯಶಸ್ ಸೂರ್ಯ, ಪಂಕಜ್, ನಿರಂಜನ್, ಸಮರ್ಥ್ ಸೇರಿದಂತೆ ಸಾಕಷ್ಟು ಜನರಿದ್ದರೂ ಪ್ರತಿಯೊಬ್ಬರೂ ಅವರವರ ಪಾತ್ರಗಳನ್ನು ಸಲೀಸಾಗಿ ನಿಭಾಯಿಸಿದ್ದಾರೆ.

ಒಟ್ಟಾರೆ ಹೇಳಬೇಕೆಂದರೆ, ಒಡೆಯ ಫ್ಯಾಮಿಲಿ ಮತ್ತು ಮಾಸ್ ಎರೂ ಅಂಶಗಳನ್ನು ಬೆರೆಸಿ ಮಾಡಿರುವ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ಇದು ದರ್ಶನ್ ಅವರ ಅಭಿಮಾನಿಗಳು ಮಾತ್ರವಲ್ಲದೆ, ಹೆಣ್ಮಕ್ಕಳು, ವಯಸ್ಸಾದವರೂ ಇಷ್ಟಪಡುವ ಕಥೆ ಹೊಂದಿದೆ. ಪ್ರತಿಯೊಬ್ಬರೂ ನೋಡಬಹುದಾದ ಸಿನಿಮಾ ಒಡೆಯ!

CG ARUN

ಎಲ್ಲೆಲ್ಲೂ ಒಡೆಯನ ಆಗಮನದ ಅಬ್ಬರ!

Previous article

ಶ್ರೀಮನ್ನಾರಾಯಣನ ಹಾಡು ಬಂತು ನೋಡಿ!

Next article

You may also like

Comments

Leave a reply

Your email address will not be published. Required fields are marked *