ದರ್ಶನ್ ಅವರ ಹುಟ್ಟುಹಬ್ಬದ ದಿನದಂದೇ ಒಡೆಯರ್ ಚಿತ್ರದ ಟೈಟಲ್ ಲಾಂಚ್ ಆಗಿತ್ತು. ಅವರ ಅಭಿಮಾನಿಗಳೆಲ್ಲ ಈ ಟೈಟಲ್ ಕೇಳಿ ಥ್ರಿಲ್ ಆಗಿದ್ದರು. ಆದರೆ ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಈ ಟೈಟಲ್ ವಿರುದ್ಧದ ಕೂಗು ಕೇಳಿ ಬಂದಿತ್ತು. ಕೆಲ ಸಂಘಟನೆಗಳಂತೂ ನಿರ್ಮಾಪಕರು ಮತ್ತು ನರ್ದೇಶಕರ ವಿರುದ್ಧ ದೂರು ದಾಖಲಿಸಿ ರಾಜಮನೆತನದ ಗೌರವ ಸಾರುವ ಈ ಟೈಟಲ್ ಅನ್ನು ಇಡಲೇ ಕೂಡದೆಂಬಂತೆ ಪಟ್ಟು ಹಿಡಿದಿದ್ದವು.
ಇದೀಗ ಚಿತ್ರ ತಂಡ ಟೈಟಲ್ಲು ಬದಲಾಯಿಸಿಕೊಂಡಿದೆ. ಈ ಚಿತ್ರಕ್ಕೆ ಒಡೆಯ ಎಂಬ ಮರು ನಾಮಕರಣವಾಗಿದೆ!
ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವವರು ಸಂದೇಶ್ ನಾಗರಾಜ್. ಎಂ.ಡಿ ಶ್ರೀಧರ್ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಚಿತ್ರ ಅದೇಕೋ ಟೈಟಲ್ ಕಾರಣದಿಂದ ಆರಂಭದಲ್ಲೇ ವಿವಾದದ ಗೂಡಾಗಿತ್ತು. ಈಗ ಟೈಟಲ್ ಬದಲಾವಣೆ ಮಾಡಿಕೊಂಡು ನಿರಾಳವಾಗಿರುವ ಚಿತ್ರತಂಡ ಅಂದುಕೊಂಡಂತೆಯೇ ಮುಹೂರ್ತ ನಡೆಸಲು ತೀರ್ಮಾನಿಸಿದೆ.
ಒಡೆಯನಿಗೆ ಇದೇ ಆಗಸ್ಟ್ ಹದಿನಾರರಂದು ಮುಹೂರ್ತ ನಡೆಯಲಿದೆ. ಅಂದು ನಿರ್ಮಾಪಕ ಸಂದೇಶ್ ನಾಗರಾಜ್ ಹುಟ್ಟಿದಹಬ್ಬ. ಅವರ ಮನೆಯಲ್ಲಿ ನಡೆಯಲಿರೋ ಸಮಾರಂಭದಲ್ಲಿ ಈ ಚಿತ್ರಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ. ಆ ದಿನ ಸತ್ಯನಾರಾಯಣ ಪೂಜೆಯೊಂದಿಗೇ ಈ ಮುಹೂರ್ತ ಸಮಾರಂಭವೂ ನಡೆಯಲಿದೆ. ಈ ಸಮಾರಂಭಕ್ಕೆ ರೆಬೆಲ್ ಸ್ಟಾರ್ ಅಂಬರೀಶ್, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ನಾನಾ ಗಣ್ಯರು ಆಗಮಿಸಲಿದ್ದಾರೆ.
#
No Comment! Be the first one.