ಒಟ್ಟಾರೆ ನನ್ನ ವೃತ್ತಿಬದುಕಿನಲ್ಲಿ ಓಂ ಎನ್ನುವ ಅಧ್ಯಾಯವನ್ನು ನಾನು ಯಾವತ್ತಿಗೂ ಮರೆಯುವಂಥದ್ದಲ್ಲ. ಇವತ್ತು ಈ ಸಿನಿಮಾ ರಿಲೀಸಾಗಿ ಇಪ್ಪತ್ತೈದು ವರ್ಷಗಳು ಕಳೆದಿವೆ ಅಂದರೆ ನಂಬಲು ಸಾಧ್ಯವಾಗುತ್ತಿಲ್ಲ. ನೆನ್ನೆ ಮೊನ್ನೆ ಬಿಡುಗಡೆಯಾದಂತಿದೆ. ಇಷ್ಟು ಬೇಗ ವರ್ಷಗಳು ಉರುಳುಹೋಗಿವೆ. ಆದರೂ ಜನ ಓಂ ಸಿನಿಮಾವನ್ನು ಮರೆತಿಲ್ಲ ಅನ್ನೋದೇ ಖುಷಿ…
ಸಿನಿಮಾ ಶೂಟಿಂಗ್ ಅಂದರೆ ಪಿಕ್ನಿಕ್ಗೆ ಹೋದಂತೆ ಹೋಗಿಬರೋದು ನನಗೆ ಅಭ್ಯಾಸವಾಗಿಬಿಟ್ಟಿತ್ತು. ಆದರೆ, ಓಂ ಸಿನಿಮಾದ ಚಿತ್ರೀಕರಣ ನನಗೆ ಬೇರೆಯದ್ದೇ ಆದ ಅನುಭವ ನೀಡುತ್ತಿತ್ತು. ಪ್ರತಿದಿನ ರಿಯಲ್ ಲೈಫಿನಲ್ಲಿ ರೌಡಿ ಎನಿಸಿಕೊಂಡವರ ಜೊತೆಗೆ ಬೆರೆಯುತ್ತಿದ್ದೆ. ನನಗೆ ಎಷ್ಟು ಆಶ್ಚರ್ಯವಾಗುತ್ತಿತ್ತು ಎಂದರೆ, ಅಲ್ಲಿ ಬರುತ್ತಿದ್ದ ಪ್ರತಿಯೊಬ್ಬರೂ ಅಪ್ಪಾಜಿಯ ಅಭಿಮಾನಿಗಳಾಗಿದ್ದರು. ನಿಜಕ್ಕೂ ಎಲ್ಲ ವರ್ಗದವರನ್ನೂ ನನ್ನ ಅಪ್ಪಾಜಿ ಸೆಳೆದಿದ್ದರು ಅನ್ನೋ ವಿಚಾರ ನನಗಲ್ಲಿ ತಿಳಿಯಿತು. ನನ್ನೊಂದಿಗಂತೂ ತೀರಾ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು. ನಿಜಕ್ಕೂ ಇವರು ಕ್ರೈಂ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರಾ? ನಿಜಕ್ಕೂ ಇವರು ಜೈಲು, ಕೇಸುಗಳನ್ನೆಲ್ಲಾ ಅನುಭವಿಸಿದ್ದಾರಾ? ಎನ್ನುವ ಅನುಮಾನ ಮೂಡಿತ್ತಿತ್ತು.
ಭೂಗತ ಪಾತಕಿ, ರೌಡಿ, ಕೊಲೆಗಡುಕರು ಅಂತೆಲ್ಲಾ ಅನ್ನಿಸಿಕೊಂಡವರ ಬಗ್ಗೆ ನಮಗೆ ನೂರೆಂಟು ರೀತಿಯ ಕಲ್ಪನೆಗಳಿರುತ್ತವೆ. ಆದರೆ ಅವರ ಅಸಲೀ ಬದುಕು ಬೇರೆಯದ್ದೇ ರೀತಿ ಇರುತ್ತದೆ. ಇವರುಗಳು ಸೆಟ್ಗೆ ಬರೋ ಮುಂಚೆ ಹಿಂದೆ ಮುಂದೆ ಎರಡೆರಡು ಕಾರುಗಳು ಬರುತ್ತಿದ್ದವು. ಯಾವ ಮಿನಿಸ್ಟರುಗಳಿಗೂ ಕಮ್ಮಿ ಇಲ್ಲದಂತೆ ಲೈಫ್ ಲೀಡ್ ಮಾಡುವವರನ್ನೂ ಕಣ್ಣಾರೆ ಕಂಡಿದ್ದೇನೆ. ಪರಸ್ಪರ ವಿರೋಧಿಗಳು ಎನಿಸಿಕೊಂಡವರೂ ಓಂ ಚಿತ್ರದಲ್ಲಿ ಒಟ್ಟಿಗೇ ನಟಿಸುವ ಸಂದರ್ಭ ಸೃಷ್ಟಿಯಾಗಿತ್ತು. ಅವರ ನಡುವಿನ ವಿರೋಧಗಳು ಏನೇ ಇದ್ದರೂ ಚಿತ್ರೀಕರಣಕ್ಕೆ ಒಂದಿಷ್ಟೂ ಚಿತ್ರ ತೊಂದರೆಯಾಗದಂತೆ ನೋಡಿಕೊಂಡರು. ನಾನು ಗಮನಿಸಿದಂತೆ ಸಾಕಷ್ಟು ಜನರಿಗೆ ಸಾಕಪ್ಪಾ ಈ ಫೀಲ್ಡಿನ ಸಾವಾಸ ಅನ್ನುವಂತಾಗಿತ್ತು. ಥನ್ವೀರ್ ಅಂತೂ ಈ ಸಂಪರ್ಕಗಳಿಂದ ಹೊರಬಂದು ಹೊಸ ಬದುಕು ಕಟ್ಟಿಕೊಳ್ಳಬೇಕು ಅಂತಾ ಹೇಳಿಕೊಳ್ಳುತ್ತಿದ್ದರು. ಅವರ ಹಿನ್ನೆಲೆಗಳನ್ನೆಲ್ಲಾ ನನ್ನ ಜೊತೆ ಮುಚ್ಚೂಮರೆ ಇಲ್ಲದೆ ಹೇಳಿಕೊಳ್ಳುತ್ತಿದ್ದರು. ಹೀಗೆ ಓಂ ಚಿತ್ರದ ಸಂದರ್ಭದಲ್ಲಿ ಭೂಗತ ಜಗತ್ತಿನೊಂದಿಗೆ ನಂಟು ಹೊಂದಿದ್ದವರನ್ನು ಹತ್ತಿರದಿಂದ ಕಂಡು, ಬೆರೆತಿದ್ದು ಒಬ್ಬ ನಟನಾಗಿ ನನಗೆ ಸಾಕಷ್ಟು ಸಹಾಯ ಮಾಡಿದೆ. ಜೋಗಿ ಸೇರಿದಂತೆ ಇನ್ನಿತರ ರೌಡಿಸಂ ಸಬ್ಜೆಕ್ಟಿನ ಸಿನಿಮಾಗಲ್ಲಿ ನಟಿಸುವಾಗ ನಾನು ಕಂಡಿದ್ದ ಮ್ಯಾನರಿಸಂಗಳು ನಟನೆಯ ಸಹಾಯ ಮಾಡಿದವು.
ಓಂ ಚಿತ್ರದ ಯಶಸ್ಸು ಸಂಪೂರ್ಣವಾಗಿ ಆ ಚಿತ್ರದ ನಿರ್ದೇಶಕ ಉಪೇಂದ್ರ ಅವರಿಗೆ ಸಲ್ಲಬೇಕು, ತೀರಾ ರಿಯಲಿಸ್ಟಿಕ್ ಆಗಿ ಸಿನಿಮಾ ರೂಪಿಸಿದ್ದರು ಉಪ್ಪಿ. ಎಷ್ಟೇ ಕಷ್ಟವಾದರೂ ಅವರು ಅಂದುಕೊಂಡಿದ್ದು ಬರುವ ತನಕ ಬಿಡುತ್ತಿರಲಿಲ್ಲ. ಸುದೀಪ್ ಅವರ ತಂದೆಯ ಸರೋವರ್ ಹೋಟೇಲಿನಲ್ಲಿ ಬಾಟೆಲ್ ಫೈಟ್ ಶೂಟ್ ಮಾಡಿದ್ವಿ. ಅದು ಮುಗಿಯೋ ಹೊತ್ತಿಗೆ ಇಡೀ ಹೊಟೇಲು ಗಾಜಿನ ಚೂರುಗಳಿಂದ ತುಂಬಿತ್ತು. ಸಿನಿಮಾ ತೆರೆ ಮೇಲೆ ಬಂದಾಗ ನಿಜಕ್ಕೂ ಆಶ್ಚರ್ಯವಾಗುವಂತೆ ಮೂಡಿಬಂದಿತ್ತು. ಆ ದೃಶ್ಯವನ್ನು ಅಪ್ಪಾಜಿ ನೋಡಿ ತುಂಬಾ ಮೆಚ್ಚಿಕೊಂಡಿದ್ದರು. ‘’ಎಷ್ಟು ಚೆನ್ನಾಗಿ ಸ್ಟಂಟ್ ಮಾಡಿದ್ದೀಯಲ್ಲಾ ಕಂದಾ? ನಿನಗೆ ಶೂಟಿಂಗ್ ಸಂದರ್ಭದಲ್ಲಿ ಹೆದರಿಕೆ ಆಗಲಿಲ್ವಾ?’’ ಅಂತಾ ಕೇಳಿದ್ದರು. ಸೋಮೇಶ್ವರ ದೇವಸ್ಥಾನದ ಮುಂದೆ ಲಾಂಗು ಹಿಡಿದು ಅಟ್ಟಾಡಿಸಿಕೊಂಡು ಹೋಗುವ ದೃಶ್ಯ ಕೂಡಾ ನೈಜವಾಗಿ ಮೂಡಿಬಂದಿತ್ತು.
ಈ ಸಿನಿಮಾ ರಿಲೀಸ್ ಆದಾಗ ಮೊದಲ ಆರು ವಾರ ಎಲ್ಲ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ಆಮೇಲೂ ಸಿನಿಮಾ ವರ್ಷವಿಡೀ ಪ್ರದರ್ಶನಗೊಂಡಿತು. ನಮ್ಮ ಸಂಸ್ಥೆಯಿಂದ ಮಾತ್ರವಲ್ಲ ನನಗೆ ತಿಳಿದಿರುವಂತೆ ಇಡೀ ಭಾರತೀಯ ಸಿನಿಮಾ ರಂಗದಲ್ಲಿ ನೂರಾರು ಸಲ ಮರು ಬಿಡುಗಡೆಯಾದ ಸಿನಿಮಾ ಇದಾಗಿದೆ. ಓಂ ಹಿಟ್ ಅಂತಾ ಗೊತ್ತಾಗುತ್ತಿದ್ದಂತೆ ತಮಿಳು, ತೆಲುಗಿನಲ್ಲೂ ರಿಮೇಕ್ ಮಾಡಲು ಅಲ್ಲಿನ ನಿರ್ಮಾಪಕರು ಮುಂದೆ ಬಂದರು. ಬಹುತೇಕರು ನಾನೇ ಅಲ್ಲೂ ನಟಿಸಬೇಕು ಅಂತಾ ಕೇಳಿದರು. ಅದು ಸಾಧ್ಯವಾಗಲಿಲ್ಲ. ತೆಲುಗಿನಲ್ಲಿ ಈ ಚಿತ್ರದ ನನ್ನ ಪಾತ್ರವನ್ನು ರಾಜಶೇಖರ್ ನಿರ್ವಹಿಸಿದರು. ಓಂಕಾರಂ ಸಿನಿಮಾವನ್ನು ಸ್ವತಃ ಉಪೇಂದ್ರ ಡೈರೆಕ್ಟ್ ಮಾಡಿದರು.
ಒಟ್ಟಾರೆ ನನ್ನ ವೃತ್ತಿಬದುಕಿನಲ್ಲಿ ಓಂ ಎನ್ನುವ ಅಧ್ಯಾಯವನ್ನು ನಾನು ಯಾವತ್ತಿಗೂ ಮರೆಯುವಂಥದ್ದಲ್ಲ. ಇವತ್ತು ಈ ಸಿನಿಮಾ ರಿಲೀಸಾಗಿ ಇಪ್ಪತ್ತೈದು ವರ್ಷಗಳು ಕಳೆದಿವೆ ಅಂದರೆ ನಂಬಲು ಸಾಧ್ಯವಾಗುತ್ತಿಲ್ಲ. ನೆನ್ನೆ ಮೊನ್ನೆ ಬಿಡುಗಡೆಯಾದಂತಿದೆ. ಇಷ್ಟು ಬೇಗ ವರ್ಷಗಳು ಉರುಳುಹೋಗಿವೆ. ಆದರೂ ಜನ ಓಂ ಸಿನಿಮಾವನ್ನು ಮರೆತಿಲ್ಲ ಅನ್ನೋದೇ ಖುಷಿ…