ಸಿನಿಮಾರಂಗವೇ ಹಾಗೆ.. ಇಲ್ಲಿ ಕೊನೆಯಲ್ಲಿ ಬಂದವರ ಹೆಸರಿರುತ್ತದೆ. ಆದರೆ ಆರಂಭದಲ್ಲೇ ಸಿನಿಮಾಗೊಂದು ರೂಪ ನೀಡುವ ಎಷ್ಟೋ ಜನರ ಹೆಸರು ಕೂಡಾ ಎಲ್ಲೂ ದಾಖಲಾಗುವುದಿಲ್ಲ. ಚಿತ್ರದ ಶೀರ್ಷಿಕೆ ಅಂತಿಮವಾಗುತ್ತಿದ್ದಂತೇ ಅದು ಮೊದಲು ಗೊತ್ತಾಗುವುದು ಪೋಸ್ಟರ್ ವಿನ್ಯಾಸಕರಿಗೆ. ಅದನ್ನವರು ಶೀರ್ಷಿಕೆ ವಿನ್ಯಾಸ ಮಾಡುವವರಿಗೆ ಕೊಟ್ಟು ಥರಹೇವಾರಿ ಶೈಲಿಯಲ್ಲಿ ಬರೆಸುತ್ತಾರೆ. ಅದರಲ್ಲಿ ಯಾವುದು ಸಿನಿಮಾಗೆ ಹೆಚ್ಚು ಸೂಕ್ತವೋ ಅಂಥದ್ದನ್ನು ಅಂತಿಮಗೊಳಿಸಿ ಡಿಸೈನುಗಳಿಗೆ ಬಳಸಲಾಗುತ್ತದೆ.

ಹಾಗೆ ಸಿನಿಮಾ ಟೈಟಲ್ಲುಗಳನ್ನು ಬರೆಯಲೆಂದೇ ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆ ವಿನ್ಯಾಸ ಕಲಾವಿದರಿದ್ದಾರೆ. ತೀರಾ ಕಡಿಮೆ ಸಂಖ್ಯೆಯ ಕಲಾವಿದರಲ್ಲಿ ಸದ್ಯ ಚಾಲ್ತಿಯಲ್ಲಿರುವ ಹೆಸರು ಓಂ ಗಿರೀಶ್. ಕೆಲವೇ ವರ್ಷಗಳಲ್ಲಿ ಗಿರೀಶ್ ಬರೆದಿರುವ ಸಿನಿಮಾ ಶೀರ್ಷಿಕೆಗಳ ಸಂಖ್ಯೆ ಬರೋಬ್ಬರಿ ಸಾವಿರದ ನೂರಕ್ಕೂ ಅಧಿಕ ಅಂದರೆ ನಂಬಲೇಬೇಕು!

ಮಾಗಡಿಯಲ್ಲಿ ಹುಟ್ಟಿ ಬೆಳೆದ ಗಿರೀಶ್ ನಂತರ ಓದಿ ಬೆಳೆದದ್ದೆಲ್ಲಾ ಸುಂಕದ ಕಟ್ಟೆಯ ದೊಡ್ಡಣ್ಣ ಶಾಲೆಯಲ್ಲಿ. ಆಗಿನ್ನೂ ಏಳನೇ ಕ್ಲಾಸು ಓದುವ ಹೊತ್ತಿಗೆ ಗಿರೀಶ್ ಅವರಿಗೆ ತಮ್ಮ ಪುಸ್ತಕಗಳ ಮೇಲೆ ಬಗೆಬಗೆಯ ಶೈಲಿಯಲ್ಲಿ ಹೆಸರು ಬರೆಯೋ ಗೀಳು ಶುರುವಾಯಿತು. ಅದು ಹಾಗೇ ಮುಂದುವರೆದು ಶಾಲೆಯಲ್ಲಿರುವವರಿಗೂ ಗೊತ್ತಾಗಿ ಬೋರ್ಡಿನ ಮೇಲೆ ಶುಭಾಷಿತ ಬರೆಸಲು ‘ಗಿರೀಶ್ ಕೈಲಿ ಬರೆಸಿ ಚನ್ನಾಗಿ ಬರೆಯುತ್ತಾನೆ’ ಎನ್ನುವಷ್ಟರ ಮಟ್ಟಿಗಾಯಿತು. ಒಂಭತ್ತನೇ ಕ್ಲಾಸು ಮುಗಿಸೋ ಹೊತ್ತಿಗೆ ಅವರ ತಂದೆ ತೀರಿಕೊಂಡಿದ್ದರು. ಬೆಂಗಳೂರು ಡೈರಿಯಲ್ಲಿ ದಿನಗೂಲಿ ಕೆಲಸಗಾರರಾಗಿ ದುಡಿಯುತ್ತಿದ್ದ ಗಿರೀಶ್ ಅವರ ತಂದೆ ನಾಗರಾಜ್ ಹಠಾತ್ತನೆ ಕ್ಯಾನ್ಸರ್ ಕಾಯಿಲೆಗೀಡಾಗಿ ಪ್ರಾಣ ಬಿಟ್ಟರು. ಇಡೀ ಕುಟುಂಬ ಮುಂದೇನು ಅನ್ನೋದು ತೋಚದೇ ಕಂಗಾಲಾಗಿತ್ತು. ಸ್ಕೂಲ್ ಫೀಸು ಕಟ್ಟಲೂ ಹಣವಿಲ್ಲದ ಸಂದರ್ಭದಲ್ಲಿ ಇವರ ತಾಯಿ ಮನೆಯಲ್ಲಿದ್ದ ದೀಪಾಲೆಕಂಬವನ್ನು ಅಡ ಇಟ್ಟು ಎಸ್ಸೆಲ್ಸಿಗೆ ಸೇರಿಸಿದ್ದರು. ಹತ್ತನೇ ಕ್ಲಾಸಿನಲ್ಲಿ ಫಸ್ಟ್ ಕ್ಲಾಸಲ್ಲಿ ಪಾಸಾಗಿ, ಐಟಿಐ ಸೇರುವ ಕನಸಿಟ್ಟುಕೊಂಡು ಅಪ್ಲಿಕೇಷನ್ ತಂದಿದ್ದೂ ಆಗಿತ್ತು. ಆದರೆ ಮನೆಯಲ್ಲಿನ ಪರಿಸ್ಥಿತಿ ಅದನ್ನು ಮುಂದುವರೆಸಲು ಬಿಡಲಿಲ್ಲ. ಓದನ್ನು ಅರ್ಧಕ್ಕೇ ನಿಲ್ಲಿಸಿ ಸುಂಕದಕಟ್ಟೆಯಲ್ಲೇ ಇದ್ದ ಮದನ್ ಆರ್ಟ್ಸ್ ಎನ್ನುವ ಸೈನ್ ಬೋರ್ಡು ಬರೆಯುವ ಅಂಗಡಿಗೆ ಕೆಲಸಕ್ಕೆ ಸೇರಿದರು. ಅಮೃತಾ ಮೆಲೋಡಿಸ್ ಮಾಲೀಕರಾದ ರಾಜು ಎಂಬುವವರು ಗಿರೀಶ್ ಅವರನ್ನು ಕರೆದುಕೊಂಡು ಹೋಗಿ ಅಲ್ಲಿ ಪರಿಚಯಿಸಿದ್ದು. ಆರಂಭದಲ್ಲಿ ಬಣ್ಣ ತೆಗೆದುಕೊಡುವುದು, ಗೆರೆ ಹಾಕುವ ಕೆಲಸ ಮಾಡುತ್ತಿದ್ದ ಗಿರೀಶ್ ಅವರ ಕೈಚಳಕ ನೋಡಿದ ಅದರ ಮಾಲೀಕ ಮದನ್ ಕ್ರಮೇಣ ಬೋರ್ಡು ಬರೆಯೋ ಕೆಲಸ ಹಚ್ಚಿದರು. ಹಾಗೆ ಕಸುಬು ಶುರು ಮಾಡಿದ ಗಿರೀಶ್ ಆಟೋ, ಲಾರಿ ಮುಂತಾದ ವಾಹನ, ಅಂಗಡಿಗಳ ಮುಂದಿನ ಬೋರ್ಡುಗಳನ್ನು ಬರೆಯುತ್ತಾ ಸಾಗಿದರು.

ಗಿರೀಶ್ ಮಾತ್ರವಲ್ಲ ಅವರ ಇಡೀ ಕುಟುಂಬಕ್ಕೆ ಡಾ.ರಾಜ್ ಕುಮಾರ್ ಅಂದರೆ ಪ್ರಾಣ. ಗಿರೀಶ್ ಅವರಿಗೆ ಶಿವರಾಜ್ ಕುಮಾರ್ ಅಂದರೆ ಜೀವ. ಓಂ ಸಿನಿಮಾ ಮತ್ತು ಶಿವಣ್ಣನ ಮೇಲಿನ ಅಭಿಮಾನಕ್ಕಾಗಿ ತಾವೇ ಸ್ವಂತವಾಗಿ ಶುರು ಮಾಡಿದ ಅಂಗಡಿಗೆ ಓಂ ಆರ್ಟ್ಸ್ ಅಂತಲೇ ಹೆಸರಿಟ್ಟರು. ಅಲ್ಲಿಂದ ಸುಂಕದಕಟ್ಟೆ, ನಾಗರಬಾವಿ ಸುತ್ತಮುತ್ತಲಿನ ಅಂಗಡಿ, ಅಫೀಸುಗಳ ಬೋರ್ಡು, ಬ್ಯಾನರುಗಳನ್ನು ಬರೆಯುತ್ತಾ ಜೀವನ ಕಟ್ಟಿಕೊಂಡರು. ವಾಹನಗಳ ಮೇಲೆ ಥರಹೇವಾರಿ ಅಕ್ಷರ ವಿನ್ಯಾಸ ಮಾಡುತ್ತಾ ಫೇಮಸ್ಸಾದರು. ಅದೇ ಹೊತ್ತಿಗೆ ಸರ್ವ ಶಿಕ್ಷಣ ಅಭಿಯಾನದ ಕೆಲಸ ವಹಿಸಿಕೊಂಡು, ಬಿಡದಿಯ ಸುತ್ತಮುತ್ತ ಸರಿ ಸುಮಾರು ನಲವತ್ತು ಸರ್ಕಾರಿ ಶಾಲೆಗಳ ಗೋಡೆ ಮೇಲೆ ರಾಷ್ಟ್ರ ಲಾಂಛನ, ಪ್ರಾಣಿ ಪಕ್ಷಿಗಳನ್ನು ಸುಂದರವಾಗಿ ಮೂಡಿಸಿದ್ದರು. ಇನ್ನು ಒಂದು ಶಾಲೆಯ ಕೆಲಸ ಬಾಕಿಯಿತ್ತು. ತಮ್ಮ ಸಹೋದರನನ್ನೂ ಕರೆದುಕೊಂಡು ಪೇಂಟು ಡಬ್ಬಗಳನ್ನು ಹಿಡಿದು ಹೊರಟಿದ್ದರು. ಕನಕಪುರ ರಸ್ತೆಯ ಉದಯ ಪುರ ಕ್ರಾಸ್ ಬಳಿ ಸಾಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಲಾರಿ ದ್ವಿಚಕ್ರ ವಾಹನಕ್ಕೆ ಅಪ್ಪಳಿಸಿತ್ತು. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಗಿರೀಶ್ ಮತ್ತು ಅವರ ಸಹೋದರ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಯಾರೋ ಪುಣ್ಯಾತ್ಮರೊಬ್ಬರು ಟೆಂಪೋದಲ್ಲಿ ಹುಲ್ಲು ಹಾಸಿ, ಇವರನ್ನು ಮಲಗಿಸಿಕೊಂಡು, ಗ್ಲೂಕೋಸ್ ಹಾಕಿ ತಂದು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಅರ್ಧ ಗಂಟೆ ಲೇಟಾಗಿದ್ದರೂ ಜೀವ ಉಳೀತಿರಲಿಲ್ಲ ಅಂತಾ ವೈಧ್ಯರು ಹೇಳಿದರಂತೆ. ಲಿವರು ಸೇರಿದಂತೆ ಸಣ್ಣ ಕರುಳುಗಳೆಲ್ಲಾ ತೂತೆದ್ದುಹೋಗುವಂತೆ ಡ್ಯಾಮೇಜ್ ಆಗಿತ್ತಂತೆ. “ನಾನು ಹದಿನೆಂಟು ವರ್ಷಗಳ ಕಾಲ ಶಬರಿ ಮಲೆಗೆ ಹೋಗಿದ್ದೀನಿ. ಮಾಲೆ ಧರಿಸಿದ ಎಲ್ಲರಿಗೂ ನಮ್ಮಮ್ಮ ಮನೆಯಲ್ಲಿ ಅಡುಗೆ ಮಾಡಿ ಹಾಕುತ್ತಿದ್ದರು. ಅದರ ಪುಣ್ಯವೋ ಏನೋ ದೇವರಂತೆ ಬಂದು ಯಾರೋ ನಮ್ಮನ್ನು ಕಾಪಾಡಿದರು. ಅವರು ಯಾರು ಅಂತಾ ಈ ಕ್ಷಣಕ್ಕೂ ಗೊತ್ತಾಗಿಲ್ಲ. ನನಗೆ ಅಪಘಾತವಾದ ದಿನವೇ ಟೈಗರ್ ಪ್ರಭಾಕರ್ ಕೂಡಾ ತೀರಿಕೊಂಡಿದ್ದರು. ಪ್ರಭಾಕರ್ ಅವರ ಪುಣ್ಯ ಸ್ಮರಣೆ ದಿನ ಬಂದಾಗಲೆಲ್ಲಾ ನನ್ನ ಮನಸ್ಸು ಆ ದಿನದ ನೆನಪಿಗೆ ಜಾರುತ್ತದೆ” ಅಂತಾ ಹೇಳುವಾಗ ಗಿರೀಶ್ ಕಣ್ಣು ತೇವತೇವ.. ಹೀಗೆ ಆಕ್ಸಿಡೆಂಟಿಗೆ ತುತ್ತಾಗಿ ಹೊಟ್ಟೆ ಆಪರೇಷನ್ ಆದ ನಂತರ ಗಿರೀಶ್ ಅವರಿಂದ ದೈಹಿಕ ಶ್ರಮದ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಅವರ ದೇಹ ತೂಕ ಕೂಡಾ ಹೆಚ್ಚಾಗುತ್ತಾ ಹೋಗಿದೆ. ಅಜಾನುಬಾಹು ಎತ್ತರದ ಗಿರೀಶ್ ಎಷ್ಟೇ ಪ್ರಯತ್ನ ಮಾಡಿದರೂ, ಊಟ ಬಿಟ್ಟರೂ ಸಣ್ಣಗಾಗಲು ಸಾಧ್ಯವೇ ಆಗಿಲ್ಲ. ದೇಹ ತೂಕದ ಜೊತೆಗೆ ಆರ್ಥಿಕ ಸಂಕಷ್ಟದ ಹೊರೆ ಬೇರೆ. ಇದರ ನಡುವೆಯೂ ಸಾಲ ಮಾಡಿ ಇದ್ದ ಒಬ್ಬಳೇ ತಂಗಿಯ ಮದುವೆ ಮಾಡಿ ಮುಗಿಸಿದ್ದಾರೆ.

ಸೈನ್ ಬೋರ್ಡು ಬರೆಯುತ್ತಿದ್ದ ಗಿರೀಶ್ ಅವರ ಬಳಿ ಯಾರೋ ಒಬ್ಬರು ಪತ್ರಿಕೆಯೊಂದಕ್ಕೆ ಅಕ್ಷರಗಳನ್ನು ಬರೆಸಿಕೊಂಡು ಹೋಗಿದ್ದರಂತೆ. ಅವರು ಸಿನಿಮಾ ಪೋಸ್ಟರ್ ವಿನ್ಯಾಸದಲ್ಲಿ ಮುಂಚೂಣಿಯಲ್ಲಿರುವ ಅವೀಸ್ ಅವರಿಗೆ ಪರಿಚಯಿಸಿದ್ದರಂತೆ. ಅವೀಸ್ ಮೂಕಹಕ್ಕಿ ಚಿತ್ರಕ್ಕೆ ಅಕ್ಷರ ವಿನ್ಯಾಸ ಮಾಡುವ ಕೆಲಸ ವಹಿಸಿದರು. ಅದು ಇಷ್ಟವಾಗುತ್ತಿದ್ದಂತೇ ಮುಕುಂದ ಮುರಾರಿ, ಜ಼ಿಂದಾ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಟೈಟಲ್ ಬರೆಯುವ ಕೆಲಸವನ್ನು ಅವೀಸ್ ನೀಡಿದರು. ಅವೀಸ್ ಕನ್ನಡದ ಬಹಳಷ್ಟು ಸಿನಿಮಾಗಳಿಗೆ ಕಾರ್ಯ ನಿರ್ವಹಿಸುತ್ತಾರಾದ್ದರಿಂದ ಅವರ ಡಿಸೈನುಗಳಲ್ಲಿ ಟೈಟಲ್ಲು ವಿಶೇಷವೆನ್ನಿಸತೊಡಗಿತ್ತು. ಆಗ ಉಳಿದ ಪೋಸ್ಟರ್ ವಿನ್ಯಾಸಕಾರರೂ ಅವಿಯನ್ನು ಯಾರ ಬಳಿ ಬರೆಸುತ್ತಿದ್ದೀರ ಅಂತಾ ಕೇಳಲು ಶುರು ಮಾಡಿದ್ದರು. ಆಗ ಸ್ವತಃ ಅವಿನಾಶ್ ಇತರೆ ಡಿಸೈನರುಗಳಿಗೂ ಗಿರೀಶ್ ಅವರನ್ನು ಪರಿಚಯಿಸಿಕೊಟ್ಟರು. ಆ ಮೂಲಕ ಮಣಿ, ವಿಶ್ವ, ಕಲಾಗುಡಿ ಅಜಯ್, ಗಾಂಧಿನಗರ ಲಕ್ಕಿ, ಕೇಸರಿ ಗುರು, ದೇವು, ಅಶ್ವಿನ್ ಹೀಗೆ ಬಹುತೇಕ ಎಲ್ಲ ವಿನ್ಯಾಸ ಕಲಾವಿದರ ಜೊತೆಗೆ ಶೀರ್ಷಿಕೆ ವಿನ್ಯಾಸಕರಾಗಿ ಗಿರೀಶ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಜಮಾನ, ಪೊಗರು, ಸಲಗ, ಬಂಪರ್, ಮದಗಜ, ಜಂಟಲ್ ಮನ್, ಅಮರ್, ಆದೃಶ್ಯ, ರವಿಚಂದ್ರ, ರವಿ ಬೋಪಣ್ಣ, ಸೈರಾ ನರಸಿಂಹ ರೆಡ್ಡಿ, ಕಾಂಚನ, ಭೈರಾದೇವಿ, ಅರ್ಜುನ್ ಗೌಡ, ಫೈಟರ್, ಕೆಮಿಸ್ಟ್ರಿ ಆಫ್ ಕರಿಯಪ್ಪ, ಸೇರಿದಂತೆ ಕಳೆದ ನಾಲ್ಕು ವರ್ಷಗಳಲ್ಲಿ ಗಿರೀಶ್ ಬರೋಬ್ಬರಿ ಸಾವಿರದ ನೂರಕ್ಕೂ ಹೆಚ್ಚು ಸಿನಿಮಾಗಳ ಶೀರ್ಷಿಕೆ ವಿನ್ಯಾಸ ಮಾಡಿದ್ದಾರೆ. ಒಂದೊದು ಚಿತ್ರಕ್ಕೆ ಐದೈದು ಬಗೆ ಅಂದರೂ ಹನ್ನೊಂದು ಸಾವಿರ ಫಾಂಟ್‌ಗಳು ಗಿರೀಶ್ ಕೈಯಲ್ಲಿ ಅರಳಿವೆ. ಯಾವುದೇ ಒಂದು ಸಿನಿಮಾದ ಟೈಟಲ್ ಬರೆಯುವ ಮುಂಚೆ ಡಾ. ರಾಜ್ ಕುಮಾರ್ ಅವರನ್ನು ಮನಸ್ಸಿನಲ್ಲಿ ನೆನಪಿಸಿಕೊಳ್ಳುತ್ತಾ ‘ಇವರ ಸಿನಿಮಾ ಯಶಸ್ವಿಯಾಗಲಿ’ ಅಂತಾ ಬೇಡಿಕೊಂಡು ಶುರು ಮಾಡುತ್ತಾರಂತೆ. ಈ ವರೆಗೆ ಬರೆದಿರುವ ಚಿತ್ರಗಳ ಟೈಟಲ್ಲುಗಳನ್ನೆಲ್ಲಾ ಗಿರೀಶ್ ಜೋಪಾನವಾಗಿ ಜೋಡಿಸಿಟ್ಟಿದ್ದಾರೆ.

ಎಲ್ಲೋ ಕೆಲವೊಂದು ಸಿನಿಮಾಗಳಲ್ಲಿ ಶೀರ್ಷಿಕೆ ವಿನ್ಯಾಸ ಓಂ ಗಿರೀಶ್ ಅಂತಾ ಟೈಟಲ್ ಕಾರ್ಡ್‌ನಲ್ಲಿ ನಮೂದಿಸಿದ್ದಾರೆ. ಮಿಕ್ಕಂತೆ ತಮ್ಮ ಹೆಸರು ಎಲ್ಲೂ ಬರುತ್ತಿಲ್ಲವಲ್ಲಾ ಅನ್ನೋದೊಂದು ಕೊರಗು ಗಿರೀಶ್ ಅವರನ್ನು ಕಾಡುತ್ತಿದೆ. ಯಾವುದೇ ಒಂದು ಸಿನಿಮಾದ ಪ್ರಚಾರ ಕಾರ್ಯ ಶುರುವಾಗೋದೇ ಟೈಟಲ್ ಬರೆಸುವುದರೊಂದಿಗೆ, ಕಡೆಯವರೆಗೂ ಜನರ ಮನಸ್ಸಿನಲ್ಲುಳಿಯುವ ಚೆಂದದ ಶೀರ್ಷಿಕೆ ರೂಪಿಸುವ ನಾವು ಯಾರು ಅನ್ನೋದೇ ಜನಕ್ಕೆ ಗೊತ್ತಾಗುವುದಿಲ್ಲ ಅನ್ನೋದು ಗಿರೀಶ್ ಅಭಿಪ್ರಾಯ. ದರ್ಶನ್ ಅವರ ಯಜಮಾನ, ಒಡೆಯ ಮತ್ತು ಈಗ ಮದಕರಿ ನಾಯಕ ಚಿತ್ರಕ್ಕೆ ಕೂಡಾ ಗಿರೀಶ್ ಅವರೇ ಟೈಟಲ್ ಡಿಸೈನ್ ಮಾಡಿದ್ದಾರೆ. ಆದರೆ, ಇವತ್ತಿನ ವರೆಗೂ ದರ್ಶನ್ ಅವರನ್ನು ನೋಡೇ ಇಲ್ಲ. ಅವಕಾಶ ಸಿಕ್ಕರೆ ಒಮ್ಮೆಯಾದರೂ ಅವರನ್ನು ಭೇಟಿಯಾಗಬೇಕು. ಅವರೊಂದಿಗೆ ಮಾತಾಡಬೇಕು ಅನ್ನೋದು ಗಿರೀಶ್ ಅವರ ಹೆಬ್ಬಯಕೆ.

ಅಕ್ಷರ ವಿನ್ಯಾಸದ ಜೊತೆಗೆ ಅದ್ಭುತವಾಗಿ ಹಾಡು ಹೇಳುವ ಗಿರೀಶ್ ಆರ್ಕೆಸ್ಟ್ರಾ ಸಿಂಗರ್ ಕೂಡಾ ಹೌದು. ಸದ್ಯ ತಾಯಿ ಸರಸ್ವತಿ, ಮಡದಿ ಪುಷ್ಪಲತಾ, ಮಗ ಕುಶಾಲ್ ಜೊತೆ ಮಾಗಡಿ ರಸ್ತೆಯ ಸಣ್ಣ ಮನೆಯೊಂದರಲ್ಲಿ ಗಿರೀಶ್ ಜೀವನ ಸಾಗಿಸುತ್ತಿದ್ದಾರೆ. ಕನ್ನಡ ಚಿತ್ರಗಳು ಮಾತ್ರವಲ್ಲದೆ, ನೆರೆಯ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಿಗೂ ಶೀರ್ಷಿಕೆ ವಿನ್ಯಾಸ ಮಾಡುತ್ತಿದ್ದಾರೆ. ತಮ್ಮ ಗೆರೆಗಳ ಮೂಲಕ ಸಾಕಷ್ಟು ಸಿನಿಮಾಗಳ ಅಂದವನ್ನು ಹೆಚ್ಚಿಸುತ್ತಿರುವ ಗಿರೀಶ್ ಅವರ ಬದುಕಿನ ವಿನ್ಯಾಸ ಕೂಡಾ ಬದಲಾಗಬೇಕಿದೆ. ಈ ಶ್ರಮಜೀವಿಯ ಬದುಕು ಕಳೆಗಟ್ಟಬೇಕಾದರೆ ಚಿತ್ರರಂಗ ಇವರ ಪ್ರತಿಭೆಯನ್ನು ಇನ್ನಷ್ಟು ಗುರುತಿಸಿ, ಅದಕ್ಕೆ ತಕ್ಕ ಗೌರವ ನೀಡಬೇಕಿದೆ. ಗಿರೀಶ್ ಅವರ ಕುರಿತ ಈ ಲೇಖನ ಅವೆಲ್ಲವನ್ನೂ ಸಾಧ್ಯವಾಗಿಸಲಿ ಎನ್ನುವುದು ಹಾರೈಕೆ…

CG ARUN

ಜಗಮೆಚ್ಚಿದ ನಟ ಜಗ್ಗೇಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು…

Previous article

ಹಾರಿದ್ದು ಹಂಸವಲ್ಲ ಕಾಗೆ!

Next article

You may also like

Comments

Leave a reply

Your email address will not be published. Required fields are marked *