ಆಗ ಕನ್ನಡ ಚಿತ್ರರಂಗದಲ್ಲಿ ನಟಿ ಮಾಲಾಶ್ರೀ ಅವರದ್ದೇ ಅಬ್ಬರ. ಈ ಅವದಿಯಲ್ಲಿ ಅವರಿಗೆ ಪರ್ಯಾಯವಾಗಿ ಗುರುತಿಸಿಕೊಂಡ ನಟಿಯರ ಸಾಲಿನಲ್ಲಿ ಪ್ರೇಮಾ ಪ್ರಮುಖರು. ಬೆಳ್ಳಿತೆರೆಗೆ ಪಾದಾರ್ಪಣೆಯಾದದ್ದು ‘ಸವ್ಯಸಾಚಿ’ ಚಿತ್ರದ ಮೂಲಕ. ಮುಂದೆ ಈ ಕೊಡಗಿನ ಸುಂದರಿ ಸ್ಯಾಂಡಲ್ವುಡ್ನ ಪ್ರಮುಖ ಹೀರೋಗಳೊಂದಿಗೆ ಮಿಂಚಿದರು. ಹತ್ತಾರು ಸೂಪರ್ಹಿಟ್ ಚಿತ್ರಗಳು ಇವರ ಹೆಸರಿನಲ್ಲಿ ದಾಖಲಾಗಿವೆ.
ಶಿವರಾಜ್ಕುಮಾರ್ ಅಭಿನಯದ ‘ಓಂ’ ನನ್ನ ಎರಡನೇ ಸಿನಿಮಾ. ನಿರ್ದೇಶಕ ಉಪೇಂದ್ರ ಕೂಡ ಆಗ ಹೊಸಬರು. ಬೆಂಗಳೂರಿನ ಹೈಲ್ಯಾಂಡ್ಸ್ ಹೋಟೆಲ್ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಅದು ಹೀರೋ ಶಿವಣ್ಣನ ಇಂಟ್ರಡಕ್ಷನ್ ಸೀನ್. ರೌಡಿ ಪಾತ್ರದಲ್ಲಿದ್ದ ಅವರು ನನ್ನ ಜಡೆಯನ್ನು ಗಟ್ಟಿಯಾಗಿ ಹಿಡಿದೆಳೆದು, ತಾವು ತಂದ ಸೀರೆ ಉಟ್ಟುಕೊಳ್ಳುವಂತೆ ಹೇಳುವ ಸನ್ನಿವೇಶ.
ನಿರ್ದೇಶಕ ಉಪೇಂದ್ರ ಒಂದು ಸನ್ನಿವೇಶಕ್ಕೆ ಕನಿಷ್ಠ ಏಳೆಂಟು ಬಾರಿ ಮಾನಿಟರ್ ಮಾಡಿಸುತ್ತಿದ್ದರು. ಅವರಿಗೆ ಸಮಾಧಾನ ಆಗುವವರೆಗೂ ಶಾಟ್ ತೆಗೆಯುತ್ತಿರಲಿಲ್ಲ. ಶಿವರಾಜ್ಕುಮಾರ್ ನನ್ನ ಜುಟ್ಟು ಹಿಡಿಯುವ ಸನ್ನಿವೇಶಕ್ಕೆ ಅದಾಗಲೇ ಎಂಟು ಬಾರಿ ಮಾನಿಟರ್ ಆಗಿತ್ತು. ಕೊನೆಗೂ ಉಪೇಂದ್ರ ಶಾಟ್ ಚಿತ್ರಿಸಿ ಓಕೆ ಮಾಡಿದರು. ನಿಜ ಹೇಳುತ್ತೇನೆ, ಆಗ ನನಗೆ ಅಕ್ಷರಶಃ ತಲೆ ತಿರುಗತೊಡಗಿತ್ತು. ಶಿವಣ್ಣ ಎಂಟ್ಹತ್ತು ಬಾರಿ ಬಿಗಿಯಾಗಿ ಜಡೆ ಹಿಡಿದದ್ದರಿಂದ ತಲೆ ಹಿಂಬಾಗ ತೀವ್ರವಾಗಿ ನೋಯುತ್ತಿತ್ತು.
ಉಪೇಂದ್ರ ಮತ್ತು ಶಿವಣ್ಣನ ಮೇಲೆ ನನಗೆ ಸಿಕ್ಕಾಪಟ್ಟೆ ಕೋಪ ಬಂದಿತ್ತು! ಸೀನ್ ಮುಗಿಯುತ್ತಿದ್ದಂತೆ ನನಗೇ ಗೊತ್ತಿಲ್ಲದಂತೆ ಶಿವಣ್ಣನನ್ನು ಕೆಂಗಣ್ಣನಿಂದ ನೋಡುತ್ತಿದ್ದೆ. ಶಿವಣ್ಣ ಇನ್ನೂ ಆ ಸನ್ನಿವೇಶದ ಹ್ಯಾಂಗ್ ಓವರ್ನಲ್ಲೇ ಇದ್ದಂತಿತ್ತು. ಅದೇ ಗುಂಗಿನಲ್ಲಿ ಅವರು, ‘ಏನೂ ಮಾಡೋಕಾಗಲ್ಲ… ಶಾಟ್ ಇರೋದೇ ಹಂಗೆ’ ಅಂದರು. ಆಗ ಅವರ ಮುಖದಲ್ಲಿ ಸೀನ್ನಲ್ಲಿ ಇದ್ದುದಕ್ಕಿಂತ ಹೆಚ್ಚಿನ ಎಕ್ಸ್ಪ್ರೆಶನ್ ಇತ್ತು! ಅಷ್ಟೊಂದು ನೋವು, ಕೋಪದಲ್ಲೂ ನನಗೆ ನಗು ತಡೆಯಲಾಗಲಿಲ್ಲ. ನಾನು ಜೋರಾಗಿ ನಗುತ್ತಿದ್ದರೆ ಉಪೇಂದ್ರ ಅಚ್ಚರಿಯಿಂದ ನನ್ನನ್ನೇ ನೋಡುತ್ತಿದ್ದರು.