ಓಂ ಸಿನಿಮಾದ ಪ್ರಭೆ, ಅದು ಹುಟ್ಟಿಸಿದ ಕ್ರೇಜ಼ಿನಿಂದ ನೂರಾರು ಜನ ನಿರ್ದೇಶಕರು ಹುಟ್ಟಿಕೊಂಡರು. ಇವತ್ತಿಗೂ ರೌಡಿಸಂ ಸಿನಿಮಾಗೆ ಈ ಚಿತ್ರ ರೆಫರೆನ್ಸ್ ಆಗಿದೆ. ಈ ಸಿನಿಮಾದ ನಂತರ ಉಪ್ಪಿ ಹೀರೋ ಆಗಿ ಕೂಡಾ ಎಂಟ್ರಿ ಕೊಟ್ಟರು. ಈ ಹೊತ್ತಿಗೂ ಉಪ್ಪಿ ಭಾರತೀಯ ಚಿತ್ರರಂಗದ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.
ಆಗ ಕನ್ನಡ ಚಿತ್ರರಂಗ ಏಕತಾನತೆಯಿಂದ ಸೊರಗಿತ್ತು. ಒಂದೇ ಥರದ ಸಿನಿಮಾಗಳು ಬರುತ್ತಿದ್ದವು. ಹೊಸದೇನೋ ಬೇಕು ಅಂತಾ ಸಿನಿಮಾ ಪ್ರೇಕ್ಷಕರು ಚಡಪಡಿಸುತ್ತಿದ್ದರು. ಕಾಶೀನಾಥ್ ಅವರೊಟ್ಟಿಗೆ ಸಹ ನಿರ್ದೇಶಕನಾಗಿ, ಸಂಭಾಷಣೆ, ಹಾಡುಗಳನ್ನು ಬರೆದುಕೊಂಡಿದ್ದ ಹುಡುಗ ಚಿತ್ರರಂಗದ ಗಮನ ಸೆಳೆದಿದ್ದ. ಶಂಕರ್ ನಾಗ್ ನಟಿಸಿದ್ದ ಆಟ ಬೊಂಬಾಟ ಮತ್ತು ಕಾಶೀನಾಥ್ ಅವರ ಅಜಗಜಾಂತರ ಸಿನಿಮಾಗಳಲ್ಲಿನ ಸಂಭಾಷಣೆ ಅಲ್ಲೀತನಕದ ಸಿನಿಮಾಗಳಿಗಿಂತಾ ಭಿನ್ನವಾಗಿದ್ದವು. ಉಬ್ಬಿದ ಹಲ್ಲು, ದಪ್ಪ ಕನ್ನಡಕ, ಬಾಗಿದಂತಾ ಬೆನ್ನಿನ ಈ ಸಣ್ಣ ವಯಸ್ಸಿನ ಹುಡುಗ ಭಲೇ ಚೂಟಿ ಅಂತಾ ಚಿತ್ರರಂಗದಲ್ಲಿ ಮಾತುಗಳು ಕೇಳಿಬರುತ್ತಿದ್ದವು. ಆ ಯುವಕ ಇವತ್ತಿನ ರಿಯಲ್ ಸ್ಟಾರ್ ಉಪೇಂದ್ರ!
ಈ ಚಾಲಾಕಿ ಹುಡುಗನನ್ನು ಛಾಯಾಗ್ರಾಹಕ ಗೌರೀಶಂಕರ್ ನಟ ಜಗ್ಗೇಶ್ಗೆ ಪರಿಚಯ ಮಾಡಿಸಿದರು. ಆ ಹೊತ್ತಿಗೆಲ್ಲಾ ಪೋಷಕ ಕಲಾವಿದನಾಗಿ ಹೆಸರು ಮಾಡಿದ ಜಗ್ಗೇಶ್ ಹೀರೋ ಆಗುವ ಉತ್ಸಾಹದಲ್ಲಿದ್ದರು. ಜಗ್ಗೇಶ್ ಅವರ ಆಗಿನ ನಡೆ ನುಡಿಗೆ ತಕ್ಕಂತೆ ʼತರ್ಲೆ ನನ್ ಮಗʼ ಸಿನಿಮಾದ ಕಥೆ ಒಪ್ಪಿಸಿದರು. ಚಿತ್ರ ರೂಪುಗೊಂಡು, ರಿಲೀಸಾಗಿ ಹೆಸರು ಮಾಡಿತು. ಅದರ ಬೆನ್ನಿಗೇ ಕುಮಾರ್ ಗೋವಿಂದ್ ನಟನೆಯ ʻಶ್ʼ ಸಿನಿಮಾ ಕೂಡಾ ತಯಾರಾಯಿತು. ಸಿನಿಮಾದ ಸಿದ್ಧಸೂತ್ರಗಳನ್ನು ಉಪೇಂದ್ರ ಬ್ರೇಕ್ ಮಾಡಲು ಶುರು ಮಾಡಿದ್ದರು. ಈ ಎರಡೂ ಸಿನಿಮಾಗಳು ಉಪ್ಪಿಯ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಿಸಿತ್ತು. ಎರಡು ಮುಗೀತು ಮೂರನೇದೇನು ಮಾಡ್ತಾನೋ ನೋಡೋಣ ಅಂತಾ ಗಾಂಧಿನಗರದ ಮಂದಿ ಕಾದು ಕುಂತಿದ್ದರು. ಆ ಸಂದರ್ಭದಲ್ಲಿ ಬೆಂಗಳೂರಿನ ಭೂಗತ ಜಗತ್ತಿನಲ್ಲಿ ದೊಡ್ಡ ತಲೆಗಳು ಉರುಳಿದ್ದವು. ಉಳಿದಿದ್ದವರು ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರು. ಫೀಲ್ಡು ಬಿಟ್ಟಂತೆ ಪೋಸು ಕೊಟ್ಟ ಕೆಲವರು ಒಳಗೊಳಗೇ ಡೀಲು ಕುದುರಿಸುತ್ತಿದ್ದರು. ಆಗಿನ್ನೂ ರಿಟೇರ್ಡು ರೌಡಿಗಳು ಸಂಘ, ಸಂಸ್ಥೆ ಕಟ್ಟಿಕೊಳ್ಳುವ, ಡಾಕ್ಟರೇಟು ಪಡೆಯುವ ಮಟ್ಟಕ್ಕೆ ಬೆಳೆದಿರಲಿಲ್ಲ. ಫ್ಲೆಕ್ಸು, ಕಟೌಟು ಕಲ್ಚರು ಶುರುವಾಗಿರಲ್ಲ. ರಿಯಲ್ ಎಸ್ಟೇಟ್ ಮಾಫಿಯಾ ಹುಟ್ಟಿಕೊಂಡಿರಲಿಲ್ಲ. ಆ ಹೊತ್ತಿನಲ್ಲಿನ ರೌಡಿಸಂ, ವೈಷಮ್ಯ, ಕೊಲೆಗಳಿಗೆ ಬೇರೆಯದ್ದೇ ಕಾರಣಗಳಿದ್ದವು. ಡಿಡಿ-೧ ಬಿಟ್ಟರೆ ಇವತ್ತಿನಂತೆ ಯಾವ ಟೀವಿ ಚಾನೆಲ್ಲುಗಳೂ ಇರಲಿಲ್ಲ. ರಸವತ್ತಾದ ಸುದ್ದಿಗಾಗಿ ವಾರಕ್ಕೊಮ್ಮೆ ಕೈಸೇರುತ್ತಿದ್ದ ಲಂಕೇಶ್ ಪತ್ರಿಕೆಗಾಗಿ ಜನ ಕಾಯುತ್ತಿದ್ದರು. ಕರ್ಮವೀರ ಪತ್ರಿಕೆಯಲ್ಲಿ ರೌಡಿಗಳ ಬದುಕನ್ನು ತೆರೆದಿಡುವ ಪಾಪಿಗಳ ಲೋಕದಲ್ಲಿ ಸರಣಿ ಬರೆಯುತ್ತಿದ್ದ ಪತ್ರಕರ್ತ ರವಿ ಬೆಳಗೆರೆ ಹಾಯ್ ಬೆಂಗಳೂರ್ ಶುರು ಮಾಡಿದ್ದರು. ಬೆಳಗೆರೆ ಬರವಣಿಗೆಯ ಮೂಲಕ ಪಾಪಿಗಳು ಜನರ ಪಾಲಿಗೆ ಹೀರೋಗಳಂತೆ ಕಾಣಲೂ ಕಾರಣವಿತ್ತು. ಪೊಲೀಸು ವರದಿಯನ್ನಷ್ಟೇ ಪ್ರಿಂಟು ಮಾಡುತ್ತಿದ್ದ ಪತ್ರಿಕೆಗಳ ನಡುವೆ ರೌಡಿಗಳ ಅಸಲೀ ಕಹಾನಿ ಓದುವ ಮನಸುಗಳಿಗೆ ಹುಚ್ಚಿಡಿಸಿತ್ತು. ಒಟ್ಟಾರೆ ಜಗತ್ತು ಹೊಸತನಕ್ಕೆ ತೆರೆದುಕೊಳ್ಳುತ್ತಿದ್ದ ಕಾಲವದು. ಅಲ್ಲೀತನಕ ಪೊಲೀಸರನ್ನೇ ಹೀರೋಗಳಂತೆ ಬಿಂಬಿಸುತ್ತಿದ್ದ ಸಿನಿಮಾಗಳನ್ನಷ್ಟೇ ನೋಡಿ ಜನರಿಗೆ ಬೋರೆದ್ದುಹೋಗಿತ್ತು. ಆಗ ಪರದೆ ಸೀಳಿಕೊಂಡು ಬಂತು ನೋಡಿ ಆ ಚಿತ್ರ…
‘ಸತ್ಯʼ ಕತೆ! : ಉಪೇಂದ್ರ ಮೂರನೇ ಸಿನಿಮಾ ಮಾಡಲು ಸಜ್ಜಾಗಿ ನಿಂತಿದ್ದರು. ಆ ಹೊತ್ತಿಗೆ ರೌಡಿಸಂ ಕಥೆಯನ್ನು ಆಧರಿಸಿ ರಾಮ್ ಗೋಪಾಲ್ ವರ್ಮಾ ತೆಲುಗಿನಲ್ಲಿ ಶಿವ ಸಿನಿಮಾವನ್ನು ಮಾಡಿದ್ದರಾದರೂ, ಕನ್ನಡದಲ್ಲಿ ರೌಡಿಯೊಬ್ಬನ ಕಥೆಯನ್ನು ಹೀರೋ ಪಾತ್ರದಲ್ಲಿ ತೋರಿಸಲು ಯಾರೂ ಧೈರ್ಯ ಮಾಡಿರಲಿಲ್ಲ. ಆ ಛಾಲೆಂಜಿಗೆ ಉಪ್ಪಿ ಧೈರ್ಯ ಮಾಡಿದ್ದರು. ಸಿನಿಮಾದ ಸ್ಕ್ರಿಪ್ಟು ರೆಡಿ ಮಾಡಿ ʻಸತ್ಯʼ ಅಂತಾ ಹೆಸರಿಟ್ಟು, ಶೂಟಿಂಗಿಗೆ ರೆಡಿಯಾಗುತ್ತಿದ್ದರು. ತಮ್ಮ ಹಿಂದಿನ ʼಶ್!ʼ ಸಿನಿಮಾವನ್ನು ಮಾಡಿದ್ದ ಕುಮಾರ್ ಗೋವಿಂದ್ ಈ ಚಿತ್ರದಲ್ಲಿ ಹೀರೋ ಆಗಿ ನಟಿಸಬೇಕಿತ್ತು. ಸಂಭಾವನೆಯಾಗಿ ಕುಮಾರ್ ಗೋವಿಂದ್ ಉಪ್ಪಿಗೆ ಅಡ್ವಾನ್ಸ್ ಹಣದ ಚೆಕ್ ನೀಡಿದ್ದರು. ಹಣ ಡ್ರಾ ಮಾಡಿಕೊಳ್ಳಲು ಬ್ಯಾಂಕಿಗೆ ಹೋದ ಉಪ್ಪಿಗೆ ಅಲ್ಲಿ ತಿಳಿದ ವಿಚಾರ ಎದೆಮೇಲೆ ಒದ್ದಂತಾಗಿತ್ತು. ತಾವೇ ಬರೆದು ಸೈನು ಹಾಕಿಕೊಟ್ಟ ಕುಮಾರ್ ಬ್ಯಾಂಕಿಗೆ ಹೋಗಿ ಚೆಕ್ ಕಳೆದು ಹೋಗಿದೆ ಅಂತಾ ಲೆಟರು ಕೊಟ್ಟುಬಂದಿದ್ದರು. ಉಪ್ಪಿ ಅದನ್ನು ನಿರೀಕ್ಷಿಸಿರಲಿಲ್ಲ. ಸಪ್ಪೆ ಮುಖದ ಕುಮಾರ್ ಗೋವಿಂದು ಯಾವ ಕಾರಣಕ್ಕೆ ಹಾಗೆ ಮಾಡಿದರು ಅಂತಾ ಗೊತ್ತಿಲ್ಲ. ಆದರೆ ಉಪ್ಪಿ ಮಾತ್ರ ಯಾವ ಕಾರಣಕ್ಕೂ ಈತನ ಸಾವಾಸ ಮಾಡಬಾರದು ಅಂತಾ ಡಿಸೈಡು ಮಾಡಿದ್ದರು. ಇಂಡಸ್ಟ್ರಿಯಲ್ಲಿ ಆ ಹೊತ್ತಿಗಾಗಲೇ ನಿರ್ದೇಶಕನಾಗಿ ಖಾತೆ ತೆರೆದು ಎರಡು ಹಿಟ್ ಸಿನಿಮಾಗಳನ್ನು ನೀಡಿದ್ದ ಉಪ್ಪಿಯನ್ನು ಹೊನ್ನವಳ್ಳಿ ಕೃಷ್ಣ, ಗೌರೀಶಂಕರ್ರಂಥವರು ಸದಾಶಿವನಗರದ ದಾರಿ ತೋರಿಸಿದ್ದರು. ಆಗೆಲ್ಲಾ ಶಿವಣ್ಣ ನಟನೆಯ ಯಾವುದೇ ಸಿನಿಮಾದ ಕಥೆಯನ್ನು ಮೊದಲು ಕೇಳಿ ಓಕೆ ಮಾಡುತ್ತಿದ್ದವರು ಡಾ. ರಾಜ್ ಕುಮಾರ್ ಮತ್ತು ಅವರ ಸಹೋದರ ವರದಪ್ಪ. ಅವರ ಮುಂದೆ ಕುಳಿತು ಕಥೆ ಹೇಳುತ್ತಿದ್ದಂತೇ ʼಆಗಬಹುದುʼ ಅಂತಾ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಉಪ್ಪಿ ತೆಗೆದುಕೊಂಡು ಹೋಗಿದ್ದ ಸ್ಕ್ರಿಪ್ಟಿನ ಮೊದಲ ಹಾಳೆಯ ಮೇಲೆ ಅಣ್ಣಾವ್ರು ʼಓಂʼ ಅಂತಾ ಬರೆದರು. ಆಗ ಉಪ್ಪಿಗೆ ಇದೇ ಅಕ್ಷರವನ್ನೇ ಯಾಕೆ ಶೀರ್ಷಿಕೆಯಾಗಿ ಇಡಬಾರದು ಅನ್ನೋ ಐಡಿಯಾ ಬಂದಿತ್ತು.
ಲಾಂಗು ಮಚ್ಚುಗಳಲ್ಲಿ ಬರೆದ ‘ಓಂʼಕಾರ! : ಹಾಗೆ ಶುರುವಾದ ಸಿನಿಮಾ ಓಂ… ಹೆಸರಿನಿಂದಲೇ ಹೊಸತನವಿತ್ತು. ನಾದಬ್ರಹ್ಮ ಹಂಸಲೇಖಾ ಅದ್ಭುತವಾದ ರಾಗ ಸಂಯೋಜನೆ, ಸಾಹಿತ್ಯ ನೀಡಿದರು. ಅದ್ಭುತವಾದ ಹಾಡುಗಳು ಜನ್ಮತಳೆದವು. ಅದಾಗಲೇ ಸವ್ಯಸಾಚಿ ಸಿನಿಮಾದಲ್ಲಿ ಶಿವಣ್ಣನ ಜೊತೆಗೆ ನಟಿಸಿದ್ದ ಪ್ರೇಮಾ ಅವರನ್ನೇ ಓಂ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಮುಗ್ದ ಹುಡುಗನೊಬ್ಬ ಭೂಗತ ಜಗತ್ತಿಗೆ ಎಂಟ್ರಿ ನೀಡುವ ಕತೆ, ಅದರೊಳಗೆ ಜೇಡರಳ್ಳಿ ಕೃಷ್ಣಪ್ಪ, ಬೆಕ್ಕಿನಕಣ್ ರಾಜೇಂದ್ರ, ಶ್ರೀರಾಂಪುರ ಕಿಟ್ಟಿ, ಥನ್ವೀರ್, ಕೊರಂಗು ಮೊದಲಾದ ಆಗಿನ ಕಾಲದ ರಿಯಲ್ ರೌಡಿಗಳು ಪಾತ್ರ ನಿರ್ವಹಿಸಿದ್ದರು. ರೌಡಿಗಳನ್ನು ಪತ್ರಿಕೆಗಳಲ್ಲಿ ನೋಡುವುದೂ ವಿರಳವಾಗಿದ್ದ ಕಾಲದಲ್ಲಿ ಸಿನಿಮಾದಲ್ಲಿ ಕಾಣಿಸುತ್ತಾರೆ ಅಂದರೆ ಸುಮ್ನೇನಾ?
ಇದೆಲ್ಲಾ ಆಗಿ 1995ರ ಮೇ 19ರಂದು ಸಿನಿಮಾ ತೆರೆಗೆ ಬಂತು. ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿತು. ಒಂಭೈನೂರಕ್ಕೂ ಹೆಚ್ಚು ಸಲ ಚಿತ್ರ ರಿಲೀಸಾಗಿ ರೆಕಾರ್ಡ್ ನಿರ್ಮಿಸಿದೆ. ಬಹುಶಃ ಭವಿಷ್ಯದಲ್ಲಿ ಯಾವ ಸಿನಿಮಾ ಕೂಡಾ ಈ ದಾಖಲೆಯನ್ನು ಮುರಿಯಲು ಸಾಧ್ಯವಿಲ್ಲ.
ಓಂ ಸಿನಿಮಾದ ಪ್ರಭೆ, ಅದು ಹುಟ್ಟಿಸಿದ ಕ್ರೇಜ಼ಿನಿಂದ ನೂರಾರು ಜನ ನಿರ್ದೇಶಕರು ಹುಟ್ಟಿಕೊಂಡರು. ಇವತ್ತಿಗೂ ರೌಡಿಸಂ ಸಿನಿಮಾಗೆ ಈ ಚಿತ್ರ ರೆಫರೆನ್ಸ್ ಆಗಿದೆ. ಈ ಸಿನಿಮಾದ ನಂತರ ಉಪ್ಪಿ ಹೀರೋ ಆಗಿ ಕೂಡಾ ಎಂಟ್ರಿ ಕೊಟ್ಟರು. ಈ ಹೊತ್ತಿಗೂ ಉಪ್ಪಿ ಭಾರತೀಯ ಚಿತ್ರರಂಗದ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಶಿವರಾಜ್ ಕುಮಾರ್ ಅವರ ಬೆಸ್ಟ್ ಸಿನಿಮಾಗಳಲ್ಲಿ ಓಂ ಮುಂಚೂಣಿಯಲ್ಲಿದೆ. ಇದೇ 19ಕ್ಕೆ ಓಂ ತೆರೆಗೆ ಬಂದು ಬರೋಬ್ಬರಿ 25 ವರ್ಷಗಳು ಪೂರೈಸುತ್ತಿದೆ. ಉಪ್ಪಿ-ಶಿವಣ್ಣ ಕಾಂಬಿನೇಷನ್ನಿನಲ್ಲಿ ಇಂಥದ್ದೊಂದು ಸಾರ್ವಕಾಲಿಕ ಸಿನಿಮಾ ಮತ್ತೆ ಜನಿಸಲಿ…!
No Comment! Be the first one.