ಹೊಸ ಜಾನರ್ ನ ವಿಭಿನ್ನ ಪ್ರೇಮಕಥೆಯೊಂದನ್ನು ಯುವ ನಿರ್ದೇಶಕ ಸ್ಮೈಲ್ ಶ್ರೀನು ಅವರು ಓ ಮೈ ಲವ್ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ರೊಮ್ಯಾಂಟಿಕ್ ಜಾನರ್ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಹದಿಹರೆಯದ ವಯಸಿನಲ್ಲಿ ಯುವ ಹೃದಯಗಳ ಮನದಲ್ಲಿ ಉಂಟಾಗುವ ತಳಮಳ, ಪ್ರೀತಿ, ಪ್ರೇಮದ ಕುರಿತಾಗಿ ಹೇಳಲಾಗಿದೆ.
ಸ್ಮೈಲ್ ಶ್ರೀನು ಅವರು ರೆಗ್ಯುಲರ್ ಜಾನರ್ ಬಿಟ್ಟು ಬೇರೆ ಥರದ ನಿರೂಪಣೆಯನ್ನು ಈ ಚಿತ್ರದಲ್ಲಿ ಮಾಡಿದ್ದಾರೆ, ಫ್ಯಾಮಿಲಿ ಎಲಿಮೆಂಟ್ ಹಾಗೂ ಹಾಸ್ಯದ ಜೊತೆಗೆ ಒಂದು ಪ್ರೇಮಕಥೆಯನ್ನು ಹೀಗೂ ಸಹ ಹೇಳಬಹುದು ಎಂದು ಅವರು ಈ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ. ಅಕ್ಷಿತ್ ಶಶಿಕುಮಾರ್ ಚಿತ್ರದ ನಾಯಕನಾಗಿದ್ದು, ನಾಯಕಿಯಾಗಿ ಕೀರ್ತಿ ಕಲಕೇರಿ ಅಭಿನಯಿಸಿದ್ದಾರೆ. ಡಾ.ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಚರಣ್ ಅರ್ಜುನ್ ಅವರ ಸಂಗೀತ ಈ ಚಿತ್ರಕ್ಕಿದೆ. ಬೆಂಗಳೂರು, ಮಂಗಳೂರು, ಮಡಿಕೇರಿ, ಹೈದರಾಬಾದ್ ಸೇರಿದಂತೆ ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.
ನಿರ್ದೇಶಕ ಸ್ಮೈಲ್ ಶ್ರೀನು ಮಾತನಾಡುತ್ತ ರಾಜ್ಯಾದ್ಯಂತ ನಾವು ಪ್ರಚಾರ ನಡೆಸಿದಾಗ ಪ್ರೇಕ್ಷಕರಿಂದ ಚಿತ್ರಕ್ಕೆ ಅದ್ಬುತ ಪ್ರತಿಕ್ರಿಯೆ ಸಿಕ್ಕಿದೆ. ಕುಟುಂಬ ಸಮೇತ ನೋಡಬಹುದಾದ ಕಮರ್ಷಿಯಲ್ ಮ್ಯೂಸಿಕಲ್ ಲವ್ ಸ್ಟೋರಿ ಇದರಲ್ಲಿದ್ದು, ಎರಡು ಗೀತೆಗಳು ಈಗಾಗಲೇ ಹಿಟ್ ಆಗಿದೆ. ಸಾಹಸ ದೃಶ್ಯಗಳು ಸಹ ಅತ್ಯುತ್ತಮವಾಗಿ ಮೂಡಿಬಂದಿವೆ. ಜೊತೆಗೆ ಎಲ್ಲಾ ಥರದ ಎಮೋಷನ್ಸ್ ನಮ್ಮ ಚಿತ್ರದಲ್ಲಿದೆ ಎಂದು ಹೇಳಿದರು.
ನಾಯಕ ಅಕ್ಷಿತ್ ಮಾತನಾಡುತ್ತ ವೈಯಕ್ತಿಕವಾಗಿ ನನಗೆ ಇಷ್ಟವಾದ ಸಿನಿಮಾವಿದು. ನಾವು ಪ್ರಚಾರಕ್ಕೆ ಹೋದಾಗ ಎಲ್ಲಾಕಡೆ ಪ್ರೇಕ್ಷಕರು ಶಶಿಕುಮಾರ್ ಮಗನೆಂದು ನನಗೆ ಗುರುತು ಹಿಡಿದು ಮಾತಾಡಿಸುತ್ತಿದ್ದರು. ಎಸ್.ನಾರಾಯಣ್ ಅವರಿಂದ ಚಿತ್ರೀಕರಣ ಸಂದರ್ಭದಲ್ಲಿ ಬಹಳಷ್ಟು ಕಲಿತುಕೊಂಡೆ. ಒಟ್ಟಿನಲ್ಲಿ ಓ ಮೈ ಲವ್ ನನಗೆ ಕಲಿಯಲು ಉತ್ತಮ ವೇದಿಕೆಯಾಗಿತ್ತು. ಸೀತಾಯಣ ಡಬ್ಬಿಂಗ್ ಚಿತ್ರ. ಹಾಗಾಗಿ ಇದೇ ನನ್ನ ಮೊದಲ ಕನ್ನಡ ಚಿತ್ರ ಎಂದು ಹೇಳಿದರು.
ನಾಯಕಿ ಕೀರ್ತಿ ಕಲ್ಕರೆ ಮಾತನಾಡಿ ನಾವು ಕಾಲೇಜುಗಳಿಗೆ ಭೇಟಿ ನೀಡಿದಾಗ ಒಳ್ಳೆಯ ಸ್ಪಂದನೆ ಸಿಗುತ್ತಿತ್ತು. ಚಿತ್ರದಲ್ಲಿ ಕಾಮಿಡಿ, ಲವ್, ಫೈಟ್, ಫ್ರೆಂಡ್ಶಿಪ್ ಎಲ್ಲವೂ ಇದೆ ಎಂದರು. ನಂತರ ಮಾತನಾಡಿದ ಎಸ್.ನಾರಾಯಣ್ ನಿರ್ಮಾಪಕರು ನಿರ್ದೇಶಕರಿಗೆ ಬೇಕಾದ ಎಲ್ಲಾ ಅನುಕೂಲತೆಗಳನ್ನು ಮಾಡಿಕೊಟ್ಟಿರುವುದರಿಂದ ಚಿತ್ರವು ಅದ್ಬುತವಾಗಿ ಮೂಡಿಬಂದಿದೆ. ಇಂತಹ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಹೆಚ್ಚು ಹೆಚ್ಚು ಬರಬೇಕು, ಸಿನಿಮಾ ನಿರ್ಮಾಣವೇ ಕಷ್ಟ. ಅದೇ ರೀತಿ ಬಿಡುಗಡೆ ಮಾಡುವುದು ಇನ್ನೂ ದೊಡ್ಡ ಸವಾಲಾಗಿದೆ. ಈಗ ಚಿತ್ರಗಳು ಬಿಡುಗಡೆಯಾಗುತ್ತಿರುವ ರೀತಿ ನೋಡಿದರೆ ಮುಂದೆ ತುಂಬಾ ಕಷ್ಟವಾಗುತ್ತದೆ. ಹೆಚ್ಚು ಚಿತ್ರಗಳು ಬರುತ್ತಿದ್ದರೂ ಗುಣಮಟ್ಟ ಕಡಿಮೆಯಾಗುತ್ತಿದೆ. ಅಕ್ಷಿತ್ ತಾನು ಶಶಿಕುಮಾರ್ ಮಗನೆಂದು ಅಹಂ ತೋರಿಸದೆ ಶ್ರದ್ದೆ ಭಕ್ತಿಯಿಂದ ಕೆಲಸ ಮಾಡಿದ್ದಾರೆ. ನಿರ್ದೇಶಕರೂ ಅವರಿಂದ ಚೆನ್ನಾಗಿ ಶಾಟ್ಗಳನ್ನು ತೆಗೆಸಿದ್ದಾರೆ. ಮಕ್ಕಳು ದಾರಿ ತಪ್ಪದೆ ಇರಲಿ ಎಂದು ಹೇಳುವ ಸಿನಿಮಾವಿದು ಎಂದರು.
ನಿರ್ಮಾಪಕ ಜಿ.ರಾಮಾಂಜಿನಿ ಮಾತನಾಡುತ್ತ ಚಿಕ್ಕಂದಿನಿಂದಲೂ ಙಗೆ ಚಿತ್ರ ಮಾಡುವ ಆಸೆ ಇತ್ತು. ಅದು ಈ ಚಿತ್ರದಿಂದ ಈಡೇರಿದೆ. ನಾನು ಮಾಡಿದ ಎಲ್ಲಾ ವ್ಯವಹಾರದಲ್ಲೂ ಸಕ್ಸಸ್ ಕಂಡಿದ್ದೇನೆ. ಕೊನೆಯದಾಗಿ ಸಿನಿಮಾರಂಗಕ್ಕೆ ಬಂದಿದ್ದೇನೆ. ಒಂದು ಮುಖ್ಯ ಪಾತ್ರಕ್ಕೆ ದೇವ್ಗಿಲ್ ಅವರೇ ಬೇಕು ಎಂದು ನಿರ್ದೇಶಕರು ಹೇಳಿದ್ದಕ್ಕೆ ಅವರನ್ನೆ ಕರೆಸಿದೆವು ಎಂದು ಹೇಳಿದರು. ನಾಯಕಿಯ ತಾಯಿ ಸಂಗೀತಾ, ಖಳನಟನ ತಂಗಿಯಾಗಿರುವ ಯಶಾ, ಗೆಳಯನಾಗಿ ನಟಿಸಿರುವ ಪೃಥ್ವಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
Comments