ಹೊಸಬರ ಆಗಮವಾದರೆ ಅವರ ಹಿಂದೆಯೇ ಹೊಸಾ ಅಲೆಯೂ ಬೀಸಿ ಬರುತ್ತದೆ ಎಂಬಂಥಾ ವಾತಾವರಣ ಕನ್ನಡ ಚಿತ್ರರಂಗದಲ್ಲಿದೆ. ಇದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆ. ಅಂಥಾದ್ದೇ ಗುಣಲಕ್ಷಣಗಳನ್ನ ಹೊಂದಿರೋ ಟೀಮೊಂದು ಸೇರಿಕೊಂಡು ಒಂದು ಕಥೆ ಹೇಳ್ಲಾ ಎಂಬ ಸಿನಿಮಾವನ್ನ ರೂಪಿಸಿದೆ. ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣಗೊಂಡಿರೋ ಈ ಚಿತ್ರವನ್ನ ಗಿರೀಶ್ ನಿರ್ದೇಶನ ಮಾಡಿದ್ದಾರೆ.
ಇದೊಂದು ಹಾರರ್ ಚಿತ್ರ. ಟೈಟಲ್ಲಿನಲ್ಲೇ ಒಂದು ಕಥೆ ಹೇಳ್ಲಾ ಅಂತಿರೋದರಿಂದ ಒಂದೇ ಕಥೆ ಅಂದುಕೊಂಡು ನೀವೇನಾದರೂ ಥೇಟರು ಹೊಕ್ಕರೆ ಒಟ್ಟೊಟ್ಟಿಗೆ ಐದು ಹಾರರ್ ಕಥೆಗಳು ಬೆಚ್ಚಿ ಬೀಳಿಸೋದು ಗ್ಯಾರೆಂಟಿ. ಅದುವೇ ಈ ಸಿನಿಮಾದ ನಿಜವಾದ ವಿಶೇಷತೆ.
ಜೋಡಿಹಕ್ಕಿ ಸೀರಿಯಲ್ ಮೂಲಕ ರಾಮಣ್ಣ ಎಂದೇ ಖ್ಯಾತರಾಗಿರೋ ತಾಂಡವ್ ಈ ಚಿತ್ರದಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಆದರೆ ಇಲ್ಲಿ ನಾಯಕ ನಾಯಕಿ ಎಂಬ ಕಾನ್ಸೆಪ್ಟ್ ಇಲ್ಲವಂತೆ. ಐದೂ ಕಥೆಗಳ ಪಾತ್ರಗಳಿಗೆ ಒಂದಷ್ಟು ಮಂದಿ ಜೀವ ತುಂಬಿದ್ದಾರೆ. ನಿರ್ದೇಶಕ ಗಿರೀಶ್ ಕೂಡಾ ಒಂದು ಪಾತ್ರವನ್ನು ನಿರ್ವಹಿಸಿದ್ದಾರೆ. ಸೋಮಣ್ಣ, ತಾರಾ, ಸೌಮ್ಯಾ ರಮಾಕಾಂತ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.ಐದು ಕಥೆಗಳು ಈ ಚಿತ್ರದಲ್ಲಿರಲಿವೆಯಂತೆ. ಈ ಐದೂ ಕಥೆಗಳೂ ಕೂಡಾ ಹಾರರ್ ರೂಪದ್ದೇ ಆಗಿದ್ದರೂ ಕೂಡಾ ಅವೆಲ್ಲವೂ ಒಂದೊಂದು ವೆರೈಟಿಯವು. ಸೈನ್ಸ್ ಬೇಸ್ಡ್ ಸ್ಟೋರಿಯೂ ಸೇರಿದಂತೆ, ಮೂಢ ನಂಬಿಕೆಯವುಗಳೂ ಒಟ್ಟಾಗಿ ಕಥೆ ಚಲಿಸುತ್ತೆ. ಕಡೇಗೆ ಕ್ಲೈಮ್ಯಾಕ್ಸಿನಲ್ಲಿ ಎಲ್ಲ ಕಥಾ ಎಳೆಗಳೂ ಒಂದೆಡೆ ಕೂಡಿಕೊಳ್ಳುತ್ತವೆ.
ಗಿರೀಶ್ ಈ ಚಿತ್ರವನ್ನು ಸ್ಕ್ರೀನ್ ಪ್ಲೇ ಮತ್ತು ತಾಂತ್ರಿಕತೆ ಸೇರಿದಂತೆ ಎಲ್ಲದರಲ್ಲಿಯೂ ವಿಶಿಷ್ಟವಾಗಿರುವಂತೆಯೇ ನಿರ್ದೇಶನ ಮಾಡಿದ್ದಾರಂತೆ. ಅದರ ಅಸಲೀ ಮಜಾ ಏನೆಂಬುದು ಇದೀಗ ಬಿಡುಗಡೆಯಾಗಿರೋ ಟ್ರೈಲರ್ ಮೂಲಕವೇ ಪ್ರೇಕ್ಷಕರಿಗೆ ಗೊತ್ತಾಗಿದೆ. ಈ ಟ್ರೈಲರಿನ ಬಿಗಿಯಲ್ಲಿಯೇ ಇಡೀ ಚಿತ್ರ ನೋಡಿಸಿಕೊಂಡು ಹೋಗಲಿದೆ ಅನ್ನೋದು ನಿರ್ದೇಶಕ ಗಿರೀಶ್ ಅವರ ಭರವಸೆ.
#
No Comment! Be the first one.