ಕಳೆದ ಎರಡು ಮೂರು ವರ್ಷಗಳಿಂದ ಸಿಪ್ಪಾಪಟ್ಟೆ ಹಾರರ್ ಸಿನಿಮಾಗಳು ತೆರೆಗೆ ಬಂದಿವೆ. ಸಿಟಿಯಿಂದ ಟ್ರಕಿಂಗ್ಗೆಂದು ಹೋದ ಯುವಕರ ತಂಡ, ಅಲ್ಲೊಂದು ಭೂತ ಬಂಗಲೆ, ಅಲ್ಲಿ ಕಾಟ ಕೊಡೋ ಆತ್ಮಗಳು, ಅದರಿಂದ ಪಾರಾಗಲು ಯತ್ನಿಸುವವರ ಪಾಡು… ಇದು ಬಹುತೇಕ ಸಿನಿಮಾಗಳಲ್ಲಿ ಕಂಡುಬಂದ ಎಲಿಮೆಂಟುಗಳು!
ಒಂದು ಕಥೆ ಹೇಳ್ಲಾ ಸಿನಿಮಾದಲ್ಲಿ ಕೂಡಾ ಟ್ರಿಪ್ಪು ಹೊರಡುವ ಸ್ನೇಹಿತರು, ಭೂತಬಂಗಲೆ, ಪ್ರೇತಬಾಧೆ – ಈ ಎಲ್ಲವೂ ಇದೆ. ಆದರೆ ಇದು ಮಾಮೂಲಿ ಹಾರರ್ ಸಿನಿಮಾ ಅಲ್ಲ. ಹೋಮ್ ಸ್ಟೇಗೆ ಹೊರಟ ಐದು ಜನರ ತಂಡ. ಹೋಗವ ದಾರಿಯಲ್ಲಿ ಒಬ್ಬೊಬ್ಬರೂ ಒಂದೊಂದು ಹಾರರ್ ಕಥೆಯನ್ನು ಹೇಳುತ್ತಾ ಸಾಗುತ್ತಾರೆ. ನಾಯಕ ತಾಂಡವ್ಗೆ ಮಾತ್ರ ದೆವ್ವ, ಭೂತ, ಆತ್ಮಗಳ ಬಗ್ಗೆ ನಂಬಿಕೆ ಇರೋದಿಲ್ಲ. ಪ್ರತಿಯೊಂದು ಕಥೆಗೂ ಒಂದೊಂದು ವಾಸ್ತವದ ರೀಸನ್ ಕೊಡುತ್ತಿರುತ್ತಾನೆ. ಈ ಮಧ್ಯೆ ಕತೆ ಹೋಮ್ ಸ್ಟೇಗೆ ಹೋಗಿ ವಿರಮಿಸುತ್ತದೆ. ಅಲ್ಲಿ ಎಣ್ಣೆ ಪಾರ್ಟಿ, ಭಂಗೀ ಹಾಡು ಎಲ್ಲಾ ಮುಗಿಯುತ್ತದೆ. ಅಷ್ಟರಲ್ಲಿ ಒಬ್ಬೊಬ್ಬರು ಹೇಳಿದ ಉಪಕತೆಗಳೂ ಕಥೆಯೊಳಗೆ ಪ್ರವೇಶಿಸಿ ಕಾಡಲು ಶುರು ಮಾಡುತ್ತವೆ. ಭ್ರಮೆ ಎಂದುಕೊಂಡ ವಿಚಾರಗಳೂ ಭಯ ಹುಟ್ಟಿಸುತ್ತಾ ಸಾಗುತ್ತವೆ. ಇದು ಹೀಗೇ ಆಗುತ್ತದೆನ್ನುವ ಊಹೆಯನ್ನು ಮೀರಿ ಬೇರೆಯದ್ದೇ ಘಟಿಸುವಂತೆ ಮಾಡಿರೋದು ನಿರ್ದೇಶಕ ಗಿರೀಶ್ ಅವರ ಟ್ಯಾಲೆಂಟು. ಈಗಾಗಲೇ ಕಿರುತೆರೆಯಲ್ಲಿ ಜೋಡಿಹಕ್ಕಿ ರಾಮಣ್ಣನಾಗಿ ಫೇಮಸ್ ಆಗಿರುವ ತಾಂಡವ್ ಈ ಚಿತ್ರದ ಪ್ರಮುಖರಲ್ಲೊಬ್ಬರು. ಸಾಮಾನ್ಯವಾಗಿ ಸೀರಿಯಲ್ ಫೇಸುಗಳು ಸಿನಿಮಾದಲ್ಲಿ ಗೆಲ್ಲೋದಿಲ್ಲ ಅನ್ನೋ ಮಾತಿದೆ. ತಾಂಡವ್ ನಟನೆಯನ್ನು ನೋಡಿದರೆ ಅದು ಸುಳ್ಳೆನಿಸುತ್ತದೆ. ಎಂಥಾ ಪಾತ್ರ ಕೊಟ್ಟರೂ ಈತ ನಿಭಾಯಿಸಬಲ್ಲರು ಅನ್ನೋದನ್ನು ಒಂದ್ ಕಥೆ ಹೇಳ್ಲಾದ ಮೂಲಕ ಋಜುವಾತುಮಾಡಿದ್ದಾರೆ.
ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣಗೊಂಡಿರೋ ಈ ಚಿತ್ರವನ್ನು ಗಿರೀಶ್ ನಿರ್ದೇಶನ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಸಿನಿಮಾ ಧ್ಯಾನದಲ್ಲಿದ್ದ ಇವರು ಒಂದಷ್ಟು ಅನುಭವವನ್ನೂ ಹೊಂದಿದ್ದಾರೆ. ಈ ಹಿಂದೆ ದಿ ಲೂಸಿಡ್ ಹ್ಯಾಂಗೋವರ್ ಮುಂತಾದ ವಿಭಿನ್ನ ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಅವರಿಗಿದೆ.
ಹೊಸತನದೊಂದಿಗೇ ಏನನ್ನಾದ್ರೂ ಮಾಡಬೇಕನ್ನೋ ಹಂಬಲದಿಂದಲೇ ಅವರು ಒಂದು ಕಥೆ ಹೇಳ್ಲಾ ಚಿತ್ರಕ್ಕೆ ಜೀವ ತುಂಬಿದ್ದಾರೆ. ಹೊಸಾ ಪ್ರಯೋಗಳ ಸಂತೆಯೇ ಈ ಚಿತ್ರದಲ್ಲಿ ನೆರೆದಿದೆ. ಇದರಲ್ಲಿ ತಾಂಡವ್, ಶಕ್ತಿ ಸೋಮಣ್ಣ, ಪ್ರತೀಕ್, ಸೌಮ್ಯಾ ರಮಾಕಾಂತ್, ರಮಾಕಾಂತ್ ಮುಂತಾದವರು ಉತ್ತಮವಾಗಿ ನಟಿಸಿದ್ದಾರೆ. ಬಕೇಶ್ ಮತ್ತು ಕಾರ್ತಿಕ್ ಸಂಗೀತ ನೀಡಿರುವ ಸೋಬಾನೆ ಹಾಡು ನಿಜಕ್ಕೂ ನಶೆಯೇರಿಸುವಂತಿದೆ.
ಸಿನಿಬಜ಼್ ರೇಟಿಂಗ್ : 3.5/5
No Comment! Be the first one.