ಆವತ್ತು ದರ್ಶನ್ ನುಡಿದಂತೆ ’ಒಂದು ಮಳೆಬಿಲ್ಲು’ ಹಾಡು ಅರ್ಜುನ್ ಜನ್ಯಾ ಸಿನಿಮಾ ಜರ್ನಿಯಲ್ಲಿ ದಾಖಲೆ ನಿರ್ಮಿಸಿದೆ. ಯೂಟ್ಯೂಬ್ ಒಂದರಲ್ಲೇ ಬರೋಬ್ಬರಿ ಐವತ್ತೇಳು ಮಿಲಿಯನ್ ವೀಕ್ಷಣೆ ಪಡೆದಿದೆ. ನಾಗೇಂದ್ರ ಪ್ರಸಾದ್ ಅವರ ಹಿಟ್ ಲಿಸ್ಟಿನಲ್ಲಿ ಈ ಹಾಡು ಫಸ್ಟ್ ಪ್ಲೇಸು ಪಡೆದಿದೆ. ಕುತಂತ್ರವೋ.. ದುರಂತವೋ ಗೊತ್ತಿಲ್ಲ… ಈ ಹಾಡಿಗೆ ಎಲ್ಲ ಪ್ರಶಸ್ತಿಗಳೂ ತಪ್ಪಿದವು. ಆದರೆ, ಚಿತ್ರಗೀತೆ ಪರಂಪರೆಯಲ್ಲಿ ಹಾಗೂ ಕನ್ನಡ ಕಲಾ ರಸಿಕರ ಎದೆಯಲ್ಲಿ ದೊಡ್ಡ ಸ್ಥಾನ ದೊರಕಿದೆ. ಇದಕ್ಕಿಂತಾ ಪುರಸ್ಕಾರ ಬೇಕಾ?
ಕ್ಲಾಸು, ಮಾಸು, ರೊಮ್ಯಾಂಟಿಕ್ಕು ಎಂಥದ್ದೇ ಬಗೆಯ ಹಾಡನ್ನೂ ಸರಾಗವಾಗಿ ಬರೆದು ಅಷ್ಟೇ ಸಲೀಸಾಗಿ ಕೇಳುಗರೆದೆಗೆ ನಾಟಿಸುವ ಕಲೆ ಸದ್ಯ ಕವಿರತ್ನರಿಗಷ್ಟೇ ಸಿದ್ಧಿಸಿದೆಯೇನೋ. ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಎಲ್ಲ ಸೂಪರ್ ಸ್ಟಾರ್ಗಳ ಸಿನಿಮಾಗೂ ಹಾಡು ಬರೆಯುತ್ತಾರೆ. ಅದರಲ್ಲೂ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾಗಳಿಗೆ ಕವಿಗಳು ಬರೆದ ಎಲ್ಲ ಓಪನಿಂಗ್ ಸಾಂಗುಗಳೂ ಸೂಪರ್ ಹಿಟ್ ಆಗಿವೆ. ಚಕ್ರವರ್ತಿ ಚಿತ್ರದಲ್ಲೂ ನಾಗೇಂದ್ರ ಪ್ರಸಾದ್ ಎರಡು ಗೀತೆಗಳನ್ನು ಬರೆದಿದ್ದರು. ಒಂದು ಇಂಟ್ರಡಕ್ಷನ್ ಸಾಂಗ್ ಆದರೆ, ಮತ್ತೊಂದು ರೊಮ್ಯಾಂಟಿಕ್ ಹಾಡು.
ಸಿನಿಮಾ ಹಾಡು ರೂಪಿಸುವ ಮೊದಲು ಮ್ಯೂಸಿಕ್ ಡೈರೆಕ್ಟರು ಟ್ಯೂನ್ ಹಾಕಿದರೆ, ನಿರ್ದೇಶಕರು ಸನ್ನಿವೇಶ ತಿಳಿಸುತ್ತಾರೆ. ಅದರ ಪ್ರಕಾರ, ಲವ್ವು, ರೊಮ್ಯಾಂಟಿಕ್, ಇಂಟ್ರಡಕ್ಷನ್, ಪ್ಯಾಥೋ – ಹೀಗೆ ಸಂದರ್ಭಕ್ಕನುಸಾರವಾಗಿ ಹಾಡು ರಚನೆಗೊಳ್ಳುತ್ತದೆ. ಆದರೆ ಚಕ್ರವರ್ತಿಯ ಈ ಹಾಡಿನಲ್ಲಿ ಯಾವುದೋ ಒಂದು ಅಂಶವಿರಲಿಲ್ಲ. ಪ್ರೀತಿ ಶುರುವಾಗುವುದರಿಂದ ಹಿಡಿದು, ಮದುವೆಯಾಗಿ, ಸಂಸಾರ ನಡೆಸೋದರ ತನಕದ ವಿವರಣೆ ನೀಡಬೇಕಿತ್ತು. ಚಕ್ರವರ್ತಿ ದೊಡ್ಡ ಕ್ಯಾನ್ವಾಸಿನ ಸಿನಿಮಾವಾದ್ದರಿಂದ ಒಂದು ಹಾಡಿನಲ್ಲಿ ಸಾಕಷ್ಟು ವಿಚಾರಗಳು ಸೇರಲೇಬೇಕಿತ್ತು.
ನಿರ್ದೇಶಕ ಎ.ವಿ. ಚಿಂತನ್ ಅವರ ಕಲ್ಪನೆಯೇನೋ ಸುಂದರವಾಗಿತ್ತು. ಅದಕ್ಕೆ ತಕ್ಕಂತೆ ಅರ್ಜುನ್ ಜನ್ಯಾ ಬ್ಯೂಟಿಫುಲ್ಲಾದ ಟ್ಯೂನ್ ಸಹಾ ಕಂಪೋಸ್ ಮಾಡಿದ್ದರು. ಬೆಂಗಳೂರಿನ ಚಂದ್ರ ಲೇಔಟ್ನಲ್ಲಿ ಚಕ್ರವರ್ತಿ ಸಿನಿಮಾಗಾಗಿ ಆಫೀಸು ಮಾಡಿದ್ದರು. ಸಿನಿಮಾದ ಹಾಡುಗಳ ತಯಾರಿ ನಡೆದದ್ದೂ ಅಲ್ಲೇ.
ಅದೊಂದು ದಿನ ಸಂಜೆ ಅರ್ಜುನ್ ಜನ್ಯಾ ನಿರ್ದೇಶಕ ಚಿಂತನ್ಗೆ ಬೇಕಾದ ರೀತಿಯಲ್ಲಿ ಟ್ಯೂನು ಹಾಕಿದರು. ಅಷ್ಟರಲ್ಲಿ ತಂಡದ ಜೊತೆಯಾದ ಡಾ. ನಾಗೇಂದ್ರ ಪ್ರಸಾದ್ ‘ಒಂದು ಮಳೆ ಬಿಲ್ಲು… ಒಂದು ಮಳೆಮೋಡ.. ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ…’ ಅಂತಾ ಎರಡು ಸಾಲು ಬರೆದರು. ಎಲ್ಲರಿಗೂ ಇಷ್ಟವಾಯಿತು. ಹಾಗೇ ಮುಂದುವರೆಸಿದ ಕವಿರತ್ನರು ಪೆನ್ನು ಕೆಳಗಿಡದಂತೆ ಹತ್ತೇ ನಿಮಿಷದಲ್ಲಿ ಪೂರ್ತಿ ಬರೆದು ಮುಗಿಸಿದರು. ಟ್ರ್ಯಾಕ್ ಸಿಂಗರ್ಗಳಿಂದ ಹಾಡಿಸಿದ್ದೂ ಆಯಿತು. ಹೆಚ್ಚೆಂದರೆ, ಅರ್ಧಗಂಟೆಯಲ್ಲಿ ಹಾಡು ಜನ್ಮತಳೆದಿತ್ತು. ನಂತರ ಈ ಹಾಡನ್ನು ಹರ್ಮನ್ ಮಲಿಕ್ ಮತ್ತು ಶ್ರೇಯಾ ಘೋಶಾಲ್ರಿಂದ ಹಾಡಿಸಲಾಯಿತು.
ಚಕ್ರವರ್ತಿ ಸಿನಿಮಾದ ಸಿಡಿ ಬಿಡುಗಡೆಯ ದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ’ಈ ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಅವುಗಳಲ್ಲಿ ’ಒಂದು ಮಳೆಬಿಲ್ಲು’ ನನಗೆ ತುಂಬಾ ಇಷ್ಟವಾದ ಹಾಡು. ಈ ಹಾಡನ್ನು ಖಂಡಿತ ಪ್ರತಿಯೊಬ್ಬರೂ ಇಷ್ಟಪಡಲಿದ್ದಾರೆ. ನಿಧಾನವಾಗಿ ಮನಸ್ಸಿಗಿಳಿದು ಪರ್ಮನೆಂಟಾಗಿ ನೆನಪಿನಲ್ಲುಳಿಯೋ ಹಾಡಾಗುತ್ತದೆ’ ಅಂತಾ ಭವಿಷ್ಯ ನುಡಿದಿದ್ದರು. ದರ್ಶನ್ ಯಾವುದೇ ಮಾತನ್ನು ಸುಖಾಸುಮ್ಮನೆ ಹೇಳುವುದಿಲ್ಲ.
ಅನವಶ್ಯಕವಾಗಿ ಯಾವುದನ್ನೂ ಹೊಗಳುವುದೂ ಇಲ್ಲ ಅನ್ನೋದು ಇಲ್ಲೂ ನಿಜವಾಗಿದೆ. ಆವತ್ತು ದರ್ಶನ್ ನುಡಿದಂತೆ ‘ಒಂದು ಮಳೆಬಿಲ್ಲು’ ಹಾಡು ಅರ್ಜುನ್ ಜನ್ಯಾ ಸಿನಿಮಾ ಜರ್ನಿಯಲ್ಲಿ ದಾಖಲೆ ನಿರ್ಮಿಸಿದೆ. ಯೂಟ್ಯೂಬ್ ಒಂದರಲ್ಲೇ ಬರೋಬ್ಬರಿ ಐವತ್ತೇಳು ಮಿಲಿಯನ್ ವೀಕ್ಷಣೆ ಪಡೆದಿದೆ. ನಾಗೇಂದ್ರ ಪ್ರಸಾದ್ ಅವರ ಹಿಟ್ ಲಿಸ್ಟಿನಲ್ಲಿ ಈ ಹಾಡು ಫಸ್ಟ್ ಪ್ಲೇಸು ಪಡೆದಿದೆ. ಕುತಂತ್ರವೋ.. ದುರಂತವೋ ಗೊತ್ತಿಲ್ಲ… ಈ ಹಾಡಿಗೆ ಎಲ್ಲ ಪ್ರಶಸ್ತಿಗಳೂ ತಪ್ಪಿದವು. ಆದರೆ, ಚಿತ್ರಗೀತೆ ಪರಂಪರೆಯಲ್ಲಿ ಹಾಗೂ ಕನ್ನಡ ಕಲಾ ರಸಿಕರ ಎದೆಯಲ್ಲಿ ದೊಡ್ಡ ಸ್ಥಾನ ದೊರಕಿದೆ. ಇದಕ್ಕಿಂತಾ ಪುರಸ್ಕಾರ ಬೇಕಾ?
No Comment! Be the first one.