ಮುಂದಿನ ವರ್ಷ ನಡೆಯಲಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದಿಂದ ಅಧಿಕೃತವಾಗಿ ಗುಜರಾತಿಯ ಚೆಲ್ಲೋ ಸಿನಿಮಾ ಆಯ್ಕೆಯಾಗಿದೆ. ಅಷ್ಟೊಂದು ಚಿತ್ರಗಳು ರೇಸಿನಲ್ಲಿರುವಾಗ, ಹೆಸರೇ ಕೇಳದ, ಹೆಚ್ಚು ಸುದ್ದಿಯಾಗದ ಚಿತ್ರವೊಂದು ಆಯ್ಕೆಯಾಗಿದ್ದು ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಇದೆ. ಅದೆಲ್ಲ ಏನಾದರೂ ಇರಲಿ, ಈ ಬಾರಿ ಆಸ್ಕರ್ ಪ್ರಶಸ್ತಿ ಜ್ಯೂರಿಯಲ್ಲಿ ಕನ್ನಡದ ಪವನ್ ಒಡೆಯರ್ ಇರುವುದು ಕನ್ನಡದ ಮಟ್ಟಿಗೆ ಖುಷಿಯ ವಿಚಾರ.
ಅದೆಷ್ಟೋ ವರ್ಷಗಳಿಂದ ಆಸ್ಕರ್ ಪ್ರಶಸ್ತಿಗೆ ಭಾರತೀಯ ಚಿತ್ರಗಳನ್ನು ಜ್ಯೂರಿ ಆಯ್ಕೆ ಮಾಡುತ್ತಿದೆ. ಪ್ರತೀ ವರ್ಷ ಭಾರತದಾದ್ಯಂತ ಸಿನಿಮಾಗೆ ಸಂಬಂಧಿಸಿದ ಹಲವು ವ್ಯಕ್ತಿಗಳು ಈ ಆಯ್ಕೆ ಸಮಿತಿಯಲ್ಲಿದ್ದು, ಒಂದು ಚಿತ್ರವನ್ನು ಆಯ್ಕೆ ಮಾಡುತ್ತಿದ್ದಾರೆ. ಆದರೆ, ಇಷ್ಟು ವರ್ಷಗಳಲ್ಲಿ ಯಾವ ಆಯ್ಕೆ ಸಮಿತಿಯಲ್ಲೂ ಕನ್ನಡಿಗರು ಇದ್ದಿದ್ದು ಹೆಚ್ಚು ಸುದ್ದಿಯಾಗುತ್ತಿರಲಿಲ್ಲ. ಅದೇನು ಇದುವರೆಗೂ ಕನ್ನಡಿಗರನ್ನು ಆಯ್ಕೆಯೇ ಮಾಡುತ್ತಿರಲಿಲ್ಲವೋ ಅಥವಾ ಮಾಡಿದರೂ ಅವರು ಹೇಳಿಕೊಳ್ಳುತ್ತಿರಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಇದುವರೆಗೂ ಕನ್ನಡಿಗರು ಇಂಥದ್ದೊಂದು ಪ್ರತಿಷ್ಠಿತ ಸಮಿತಿಗೆ ಆಯ್ಕೆಯಾಗಿದ್ದು ಯಾರಿಗೂ ನೆನಪಿಲ್ಲ. ಆದರೆ, ಈ ಬಾರಿ ಪವನ್ ಒಡೆಯರ್ ಆಯ್ಕೆಯಾಗಿರುವುದು ಒಂದು ಕಡೆ ಖುಷಿಯ ಜೊತೆಗೆ, ಇನ್ನೊಂದು ಕಡೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಇದೇನು ಋಣಸಂದಾಯದ ಪ್ರೋಗ್ರಾಮಾ ಎಂದು ಗಾಂಧಿನಗರದವರು ಪ್ರಶ್ನಿಸುತ್ತಿದ್ದಾರೆ.
ಅದಕ್ಕೆ ಕಾರಣವೂ ಇದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರ ಮಗ ಸಾಗರ್ ಪುರಾಣಿಕ್ ಅವರನ್ನು ನಿರ್ದೇಶಕರನ್ನಾಗಿ ಮಾಡಿದ್ದು ಇದೇ ಪವನ್ ಒಡೆಯರ್. ಪವನ್ ಒಂದು ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಅದರಡಿ ಸಾಗರ್ ನಿರ್ದೇಶನದ ಡೊಳ್ಳು ಚಿತ್ರವನ್ನು ನಿರ್ಮಿಸಿದ್ದರು. ತಮ್ಮ ಮಗನಿಗೆ ಅವಕಾಶ ಕೊಟ್ಟ ಪವನ್ ಋಣ ತೀರಿಸಲಿಕ್ಕೆಂದೇ ಸುನೀಲ್ ಈ ತರಹ ಮಾಡಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.
ಸುನೀಲ್ ಪುರಾಣಿಕ್ ಈಗ ಅಕಾಡೆಮಿಯ ಅಧ್ಯಕ್ಷರಾಗಿ ಉಳಿದಿಲ್ಲ. ಹಾಗಾಗಿ, ಇದು ಅವರಿಂದ ಸಾಧ್ಯವಾ ಎಂಬ ಪ್ರಶ್ನೆ ಸಹಜ. ಸುನೀಲ್ ಈಗ ಅಧ್ಯಕ್ಷರಾಗಿ ಉಳಿಯದರಿಬಹುದು. ಆದರೆ, ಡೈರೆಕ್ಟರೇಟ್ ಆಫ್ ಫಿಲಂ ಫೆಸ್ಟಿವಲ್ ಸೇರಿದಂತೆ ಇತರೆ ಸಂಘ-ಸಂಸ್ಥೆಗಳ ಅವರ ಜೊತೆಗೆ ಒಳ್ಳೆಯ ಒಡನಾಟವಿದೆ. ಅದಕ್ಕೆ ಅವರ ಪಕ್ಷದ ಹಿನ್ನೆಲೆಯೂ ಕಾರಣವಿರಬಹುದು. ಈ ಒಡನಾಟವನ್ನು ಬಳಸಿಕೊಂಡು ಅವರು ಹಿಂದೆ ಹಲವರು ಕೆಲಸಕ್ಕೆ ಬಾರದವರನ್ನು, ಸಿನಿಮಾ ಬಗ್ಗೆ ಆಸಕ್ತಿ ಇಲ್ಲದಿರುವವರನ್ನು ಸೆನ್ಸಾರ್ ಮಂಡಳಿಗೆ ಸೇರಿಸಿದ್ದರು. ಈ ಕುರಿತು ಕೆಲವು ತಿಂಗಳುಗಳ ಹಿಂದೆ ಸಾಕಷ್ಟು ಗಲಾಟೆಯೂ ಆಗಿತ್ತು. ಆದರೆ, ಸುನೀಲ್ ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಪ್ಪೆ ಸಾರಿಸಿದ್ದರು. ಆದರೆ, ಅವರು ಎಷ್ಟೇ ಹೇಳಿದರೂ, ಅವರನ್ನು ನಂಬಿದವರು ಕಡಿಮೆಯೇ.
ಈಗ ಅದೇ ತರಹ ಪವನ್ ಅವರಿಗೂ ಇಂಥದ್ದೊಂದು ಅವಕಾಶವನ್ನು ಕೊಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಸಂಪೂರ್ಣ ತಪ್ಪು ಎನ್ನುವಂತೆಯೂ ಇಲ್ಲ. ಕನ್ನಡದಲ್ಲಿ ಪವನ್ಗಿಂತ ಇನ್ನೂ ಹಲವು ಸಮರ್ಥರು, ಅನುಭವಿಗಳು ಇದ್ದಾರೆ. ಅವರನ್ನೆಲ್ಲ ಬಿಟ್ಟು, ಇವರನ್ನೇ ಆಯ್ಕೆ ಮಾಡಿದ್ದೇಕೆ? ಇದಕ್ಕೆ ನಿರ್ಧಿಷ್ಟ ಉತ್ತರ ಸಿಗುವುದಿಲ್ಲ. ಪವನ್ ಪ್ರತಿಭಾವಂತ ನಿಜ. ಆದರೆ ಅವರಿಗಿಂತಾ ಹೆಚ್ಚು ಸಾಧಿಸಿದವರು, ಹಿರಿಯರು ಇಲ್ಲಿದ್ದಾರೆ. ಹಾಗಿದ್ದರೂ ಅವರನ್ನೇ ಆಯ್ಕೆ ಮಾಡಿದ್ದೇಕೆ? ಅಂದರೆ ಋಣ ಸಂದಾಯ ಎಂಬ ಉತ್ತರ ಬರುತ್ತದೆ.
ಆದರೆ, ಪವನ್ ಮಾತ್ರ ಈ ಬಗ್ಗೆ ಖುಷಿಯಾಗಿದ್ದಾರೆ. ಆಸ್ಕರ್ ಕಮಿಟಿಯಿಂದ ನನಗೆ ಕರೆ ಬರುತ್ತದೆಂದು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಆರಂಭದಲ್ಲಿ ನನಗೆ ನಂಬಲೂ ಸಾಧ್ಯವಾಗಲಿಲ್ಲ. ನನ್ನ ಸಿನಿಮಾ ಕೆಲಸಗಳನ್ನು ಗುರುತಿಸಿ ಜ್ಯೂರಿಯಾಗಿ ಭಾಗವಹಿಸಲು ಆಹ್ವಾನ ನೀಡಿದ್ದು ಬಹಳ ಸಾರ್ಥಕತೆ ನೀಡಿದೆ. ನನ್ನ ನಿರ್ಮಾಣದ ‘ಡೊಳ್ಳು’ ಸಿನಿಮಾ ಇಂತಹದ್ದೊಂದು ಪ್ರತಿಷ್ಠಿತ ವೇದಿಕೆಯನ್ನು ನನಗೆ ಕಲ್ಪಿಸಿಕೊಟ್ಟಿದೆ. ಇದು ಬಹಳ ದೊಡ್ಡ ಗೌರವ ಎಂದೇ ನಾನು ಭಾವಿಸುತ್ತೇನೆ. 17 ಜನರ ತಂಡದಲ್ಲಿ ಕನ್ನಡ ಚಿತ್ರರಂಗದಿಂದ ನಾನೂ ಒಬ್ಬ ಜ್ಯೂರಿಯಾಗಿ ಭಾಗವಹಿಸಿದ್ದು ಬಹಳ ಸಂತಸ ತಂದಿದೆ ಎಂದು ಹರುಷ ವ್ಯಕ್ತಪಡಿಸಿದ್ದಾರೆ.
ವಶೀಲಿಯೋ, ಋಣಸಂದಾಯವೋ ಅಥವಾ ಡೊಳ್ಳಿನ ಶಬ್ದವೋ ಗೊತ್ತಿಲ್ಲ. ಒಟ್ಟಿನಲ್ಲಿ ಕನ್ನಡಿಗರೊಬ್ಬರಿಗೆ ಇಂಥದ್ದೊಂದು ಅವಕಾಶ ಸಿಕ್ಕಿದೆ ಎಂದು ಖುಷಿಪಡಬೇಕು ಅಷ್ಟೇ.
No Comment! Be the first one.