ನಿಜಾ ತಾನೆ? ಶಿಕ್ಷಣವನ್ನು ಹೇಳಿಕೊಡಲು ಅಗಣಿತ ವಿದ್ಯಾಸಂಸ್ಥೆಗಳು, ಯೂನಿವರ್ಸಿಟಿಗಳು ಇವೆ. ಬದುಕಿನ ಪಾಠ ಹೇಳಿಕೊಡಲು ಯಾವ ಶಾಲೆಯೂ ಇಲ್ಲ. ತುಂಬಾ ಜನ ಅಕಾಡೆಮಿಕ್ ಆಗಿ ಜಾಸ್ತಿ ಕಲಿತಿರುತ್ತಾರೆ. ಅತಿ ದೊಡ್ಡ ಹುದ್ದೆಯಲ್ಲಿರುತ್ತಾರೆ. ಬುದ್ಧಿವಂತರು ಅನ್ನಿಸಿಕೊಂಡಿರುತ್ತಾರೆ. ಹಲವು ಕ್ಷೇತ್ರಗಳಲ್ಲಿ ಸಾಧನೆಯನ್ನೂ ಮಾಡಿರುತ್ತಾರೆ. ಹಣ ಸಂಪಾದನೆ ಅನ್ನೋದು ಅವರ ಪಾಲಿಗೆ ತುಂಬಾನೇ ಸಣ್ಣ ವಿಷಯ. ಆದರೆ ಖಾಸಗೀ ಬದುಕಿನಲ್ಲಿ ಗೆಲ್ಲುವ ಕಲೆ, ಬುದ್ದಿವಂತಿಕೆ, ಸ್ಥಿತಪ್ರಜ್ಞ ಮನಸ್ಥಿತಿ, ಪ್ರಬುದ್ಧತೆ ಸಿದ್ದಿಸಿರೋದಿ ಲ್ಲ.. ಪರ್ಸನಲ್ ಲೈಫೆನ್ನುವುದು ನಿಜಕ್ಕೂ ಹಡಾಲೆದ್ದುಹೋಗಿರುತ್ತದೆ. ಎಲ್ಲದರಲ್ಲೂ ಗೆದ್ದವರು ಬದುಕುವ ರೀತಿಯನ್ನು ಕಲಿಯದೆ ಅಕ್ಷರಶಃ ಫೇಲ್ಯೂರ್ ಆಗಿರುತ್ತಾರೆ…
ಇದನ್ನೇ ಸರಕನ್ನಾಗಿಸಿಕೊಂಡು ರೂಪುಗೊಂಡಿರುವ ಸಿನಿಮಾ ಔಟ್ ಆಫ್ ಸಿಲಬಸ್ʼ. ಯಾವುದೇ ಅಬ್ಬರದ ಪ್ರಚಾರವಿಲ್ಲದೆ, ತಣ್ಣಗೆ ಬಿಡುಗಡೆಯಾಗುವ ಸಿನಿಮಾಗಳು ಅಪರೂಪಕ್ಕೆನ್ನುವಂತೆ ಅಚ್ಛರಿ ಮೂಡಿಸುತ್ತವೆ. ಸದ್ಯ ʻಔಟ್ ಆಫ್ ಸಿಲಬಸ್ʼ ಕೂಡಾ ಅಂಥದ್ದೊಂದು ಕುತೂಹಲವನ್ನು ಹುಟ್ಟುಹಾಕಿದೆ. ಜಾಹೀರಾತು ಕ್ಷೇತ್ರದ ಜೊತೆಗೆ ತಮ್ಮ ಪ್ರೇರಣಾ ಭಾಷಣಗಳಿಂದ ಹೆಸರಾದವರು ಪ್ರದೀಪ್ ದೊಡ್ಡಯ್ಯ. ಬೆಳ್ಳಿಪರದೆಯ ಮಟ್ಟಕ್ಕೆ ಪ್ರದೀಪ್ ಹೊಸಬರೇ. ಇವರದ್ದೇ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬಂದಿರುವ ʻಔಟ್ ಆಫ್ ಸಿಲಬಸ್ʼ ಈ ವಾರ ತೆರೆಗೆ ಬಂದಿದೆ. ವಿದ್ಯಾಭ್ಯಾಸವನ್ನು ಮುಗಿಸಿ ನೌಕರಿಗೆ ಸೇರೋದು ಮಾಮೂಲು. ಆದರೆ, ಕೆಲಸ ನೀಡಿದ ಸಂಸ್ಥೆಯೇ ಈತನ ಬುದ್ದಿವಂತಿಕೆಯನ್ನು ಕಂಡು ಮತ್ತಷ್ಟು ಓದುವ ಅನುಕೂಲ ಮಾಡಿಕೊಟ್ಟಿರುತ್ತದೆ. ಇಂಜಿನಿಯರಿಂಗ್ ಕಾಲೇಜಿಗೆ ಸೇರುವ ದೇವ್ ಮತ್ತು ದಿವ್ಯಾ ಎನ್ನುವ ಜೋಡಿಯ ಸುತ್ತ ಬಿಚ್ಚಿಕೊಳ್ಳುವ ಪ್ರೀತಿ, ಪ್ರೇಮ, ವಿರಸಗಳೇ ಇಲ್ಲಿನ ಪ್ರಧಾನ ಅಂಶ. ಕಾಲೇಜಿನ ವಾತಾವರಣದಲ್ಲಿ ಒಂದಿಷ್ಟು ತಮಾಷೆಯ ಪ್ರಸಂಗಗಳು ನಡೆಯುತ್ತವೆ. ಅದರ ಜೊತೆಗೇ ಇವರಿಬ್ಬರ ಪ್ರೀತಿಯ ವಿಚಾರದಲ್ಲಿ ಹಲವು ಪಲ್ಲಟಗಳು ಏರ್ಪಡುತ್ತವೆ. ಸಿದ್ದ ಸೂತ್ರಗಳ ಸಿನಿಮಾಗಳಂತೆ ಇಲ್ಲಿ ಅಪ್ಪ-ಅಮ್ಮ, ಅಣ್ಣ-ತಮ್ಮ ಇತ್ಯಾದಿ ಯಾರೂ ಇವರ ಮದುವೆಗೆ ವಿರೋಧ ವ್ಯಕ್ತಪಡಿಸೋದಿಲ್ಲ. ಬದಲಿಗೆ ಇವರದ್ದೇ ಮನಸ್ಥಿತಿ ಇಬ್ಬರನ್ನೂ ಸಂಕಟಕ್ಕೆ ಸಿಲುಕಿಸುತ್ತದೆ. ಈ ಪ್ರೇಮಿಗಳ ನಡುವೆ ಬಿರುಕು ಮೂಡಲು ಎದುರಾಗುವ ʻಆ ಮುಖ್ಯ ಕಾರಣʼವೊಂದು ಅಂತ್ಯದವರೆಗೂ ಕುತೂಹಲ ಕಾಪಾಡಿಕೊಂಡು ಸಾಗುತ್ತದೆ. ʻಇವತ್ತಿಗೆ ಜನರ ಬದುಕು ಹಾಳು ಮಾಡಲು, ಸಂಸಾರ ಒಡೆಯಲು ಯಾವ ಶತ್ರುಗಳ ಅಗತ್ಯವೂ ಇಲ್ಲ- ಮೊಬೈಲ್ ಒಂದೇ ಸಾಕು!ʼ ಅನ್ನೋದನ್ನು ಈ ʻಸಿಲಬಸ್ʼ ಸಾರಿಹೇಳುತ್ತದೆ.
ʻಔಟ್ ಆಫ್ ಸಿಲಬಸ್ʼ ನೋಡನೋಡುತ್ತಲೇ ʻಹೌದಲ್ವಾ?ʼ ಅಂತಾ ಪದೇಪದೆ ಅನ್ನಿಸುತ್ತದೆ. ನಮ್ಮ ನಡುವೆಯೇ ನಡೆಯುವ ವಿಚಾರಗಳನ್ನು ಇಲ್ಲಿ ಸಮಗ್ರವಾಗಿ ಜೋಡಿಸಿ, ಅದಕ್ಕೊಂದಿಷ್ಟು ಹಾಸ್ಯವನ್ನು ಬೆರೆಸಿ ಚೆಂದಗೆ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಬಳಸಿರುವ ಮಾತಿನ ಧಾಟಿ ಮನಸ್ಸಿಗೆ ಹತ್ತಿರ ಅನ್ನಿಸುತ್ತದೆ. ಹಾಡುಗಳು ಕೂಡಾ ಸಂದರ್ಭಕ್ಕೆ ಬೇಕಾದ್ದನ್ನೇ ಹೇಳುತ್ತವೆ. ಸಿನಿಮಾ ಶುರುವಿನ ಹೊತ್ತಿಗೆ ʻಯಾರೋ ಹೊಸಬʼ ಅನ್ನಿಸುವ ಪ್ರದೀಪ್ ದೊಡ್ಡಯ್ಯ ಕೊನೆಯ ಹೊತ್ತಿಗೆ ʻನಮ್ಮವರುʼ ಅನ್ನಿಸಿಬಿಡುತ್ತಾರೆ. ಅಬ್ಬರದ ನಟನೆ ಇಲ್ಲದೆಯೇ ಆಕರ್ಷಿಸುತ್ತಾರೆ. ಬಹುಶಃ ಈ ಪಾತ್ರವನ್ನು ತೀರಾ ಪರಿಚಿತ ನಟರು ಯಾರೇ ಮಾಡಿದ್ದರೂ ಈ ಮಟ್ಟಕ್ಕೆ ಶಕ್ತಿ ತುಂಬಲು ಸಾಧ್ಯವಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಪ್ರದೀಪ್ ತಮ್ಮ ಸಹಜತೆಯಿಂದಲೇ ನೋಡುಗರೆಲ್ಲರ ಮನಸ್ಸಿಗೊಪ್ಪುತ್ತಾರೆ; ಏಕಾಏಕಿ ಭರವಸೆಯ್ನೂ ಮೂಡಿಸಿದ್ದಾರೆ.
ಯೋಗರಾಜ್ ಭಟ್ ಮತ್ತು ಅಚ್ಯುತ್ ಕುಮಾರ್ ʻಔಟ್ ಆಫ್ ಸಿಲಬಸ್ʼ ನಲ್ಲಿ ಚೌಕಟ್ಟನ್ನು ಮೀರಿ ನಟಿಸಿದ್ದಾರೆ. ಭಟ್ಟರು ಸಿಕ್ಕಾಪಟ್ಟೆ ನಗಿಸುತ್ತಾರೆ. ನಿರ್ದೇಶಕ ಭಟ್ರು ಥೇಟು ಮೇಷ್ಟ್ರು ಅನ್ನಿಸುತ್ತಾರೆ. ಹೃತಿಕಾ ಶ್ರೀನಿವಾಸ್ ನೋಡಲು ಮಾತ್ರವಲ್ಲ ನಟನೆಯಲ್ಲೂ ಮೋಹಕ. ಚಿತ್ರದ ಮೊದಲ ಭಾಗದಲ್ಲಿ ಮಹಂತೇಶ್ ಮಜಾ ಕೊಡುತ್ತಾರೆ. ನಾಯಕಿಯ ಅಣ್ಣನ ಪಾತ್ರದಲ್ಲಿ ನಟಿಸುವ ಶ್ರವಣ್ ಕಾಮಿಡಿ ಟೈಮಿಂಗ್ ಫಂಟಾಸ್ಟಿಕ್!
ಒಟ್ಟಾರೆಯಾಗಿ ʻಔಟ್ ಆಫ್ ಸಿಲಬಸ್ʼ ಅಪಾರವಾಗಿ ರಂಜಿಸುತ್ತಲೇ, ಹಲವು ಗಂಭೀರ ವಿಚಾರಗಳನ್ನು ತಿಳಿಸಿದೆ. ಮನುಷ್ಯ ಸಹಜವಾಗಿ ಘಟಿಸುವ ತಪ್ಪುಗಳನ್ನು ಮುಲಾಜಿಲ್ಲದೇ, ಮರೆಮಾಚದೇ ನೇರವಾಗಿ ಹೇಳಿದೆ. ಸಣ್ಣ ಪುಟ್ಟ ಇತಿ-ಮಿತಿಗಳಾಚೆಗೆ ಎಲ್ಲ ವರ್ಗದವರಿಗೂ ಇಷ್ಟವಾಗುವ ಸಂಗತಿಗಳು ಇದರಲ್ಲಿ ಅಡಕವಾಗಿವೆ.
- ಅರುಣ್ ಕುಮಾರ್ ಜಿ.
No Comment! Be the first one.