ದುಡ್ಡೇ ದುನಿಯಾ ಅಂದುಕೊಂಡ ನಾಯಕ ಅದಕ್ಕಾಗಿ ಎಂಥಾ ಕೆಲಸಕ್ಕಾದರೂ ಹಿಂದೇಟು ಹಾಕೋ ಜಾಯಮಾನದವನಲ್ಲ. ಈತನ ಎಲ್ಲ ಕಲ್ಯಾಣ ಕಾರ್ಯಗಳಿಗೂ ಬಾಮೈದ ಕಂ ಗೆಣೆಕಾರನ ಬೇಷರತ್ ಸಪೋರ್ಟು. ಹುಡುಗೀರ ಹಿಂದೆ ಸುತ್ತೋದು, ಕಂಡ ಕಂಡೋರ ಜೊತೆ ಲೀಲಾಜಾಲವಾಗಿ ಫ್ಲರ್ಟ್ ಮಾಡೋದೆಲ್ಲ ಆತನಿಗೊಂದು ವಿಷಯವೇ ಅಲ್ಲ. ಒಟ್ಟಾರೆಯಾಗಿ ನಾಯಕ ಎಲ್ಲ ವಿಚಾರಗಳಲ್ಲಿಯೂ ಸೇಮು ಪಾದರಸ!
ಇಂಥಾದ್ದೊಂದು ಕಥೆ ಹೊಂದಿರೋ ಹೃಷಿಕೇಶ್ ಜಂಬಗಿ ನಿರ್ದೇಶನ ಮತ್ತು ಆರ್ಟ್ ಆಂಡ್ ಸೋಲ್ ಮೀಡಿಯಾ ನಿರ್ಮಾಣದ ಪಾದರಸ ಚಿತ್ರ ತೆರೆ ಕಂಡಿದೆ. ಈ ಚಿತ್ರದ ಬಗೆಗೆ ಪ್ರೇಕ್ಷಕರಲ್ಲಿ ಪ್ರಧಾನವಾಗಿದ್ದ ಆಕರ್ಷಣೆ ಸಂಚಾರಿ ವಿಜಯ್ ಅವರ ಭಿನ್ನವಾದ ಅವತಾರ. ಆ ನಿಟ್ಟಿನಲ್ಲಿ ನೋಡಿದರೆ ಸಂಚಾರಿ ವಿಜಯ್ ಇಲ್ಲಿ ಈವರೆಗೆ ಎಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ಪಕ್ಕಾ ಪಾದರಸದಂತೆಯೇ ಕಾಣಿಸಿಕೊಂಡಿದ್ದಾರೆ.
ಕಾಸಿಗಾಗಿ ತನ್ನ ಶೋಕಿಗಾಗಿ ಯಾವ ಸುಳ್ಳನ್ನಾದರೂ ಸಲೀಸಾಗಿ ಹೇಳಿ, ಯಾವ ಥರದ ಕೆಲಸವನ್ನಾದರೂ ಮಾಡ ಬಲ್ಲವನು ಪಾದರಸ. ಜಗತ್ತಿನ ಎಲ್ಲ ಫಟಿಂಗತನಗಳನ್ನೂ ಎರಕ ಹುಯ್ದು ರೆಡಿ ಮಾಡಿದಂತಿರೋ ಈತನ ಭಾಮೈದನದ್ದು ಇಂಥಾದ್ದೇ ಕಥೆ. ಮೊದಲಾರ್ಧದ ತುಂಬಾ ನಾಯಕನ ಥರ ಥರದ ಕೀಟಲೆ ದೋಖಾ ಬಾಜಿಗಳ ಸುತ್ತಲೇ ಸುತ್ತಿ ಪಾದರಸ ಅಂದರೆ ಕೆಟ್ಟಾತಿಕೆಟ್ಟವನೆಂಬ ನಿಲುವಿಗೆ ಪ್ರೇಕ್ಷಕರು ತಲುಪಿರುತ್ತಾರೆ.
ಆದರೆ ಆ ನಂತರ ಸೀರಿಯಸ್ಸಾಗಿಯೇ ಈತನ ಬದುಕಿಗೆ ಹುಡುಗಿಯೊಬ್ಬಳ ಪ್ರವೇಶವಾಗೋ ಮೂಲಕ ಬದಲಾವಣೆಯ ಗಾಳಿಯೂ ಬೀಸಿ ಬರುತ್ತದೆ. ಆಮೇಲೆ ತಾನು ಮಾಡಿದ ಕೆಟ್ಟ ಕಸುಬಿನ ಬಗ್ಗೆ ಆತ್ಮಾವಲೋಕನ. ಹಾಗಾದರೆ ಪಾದರಸನ ಕೆಟ್ಟ ಕೆಲಸಗಳ ಹಿಂದೆ ಒಳ್ಳೆ ಉದ್ದೇಶವಿದೆಯಾ, ಆತ ಬದಲಾಗುತ್ತಾನ ಎಂಬೆಲ್ಲ ಕುತೂಹಲವನ್ನು ಒಂದು ಸಲ ಚಿತ್ರ ನೋಡಿಯೇ ತಣಿಸಿಕೊಂಡರೆ ಒಳ್ಳೇದು.
ಪರವಾಗಿಲ್ಲ ಅನ್ನಿಸುವಂಥಾ ಹಾಡುಗಳು, ಡಬಲ್ ಮೀನಿಂಗ್ ಡೈಲಾಗುಗಳೇ ಚಿತ್ರದುದ್ದಕ್ಕೂ ಮೆರವಣಿಗೆ ಮಾಡಿಲ್ಲವೆಂಬ ಸಮಾಧಾನದಂಥಾ ಭಾವಗಳನ್ನು ಒಟ್ಟಿಗೇ ತುಂಬುವ ಈ ಚಿತ್ರದ ಮೂಲಕ ಸಂಚಾರಿ ವಿಜಯ್ ಅವರಂತೂ ಪಾದರಸದಂತೆಯೇ ನಟಿಸಿದ್ದಾರೆ. ನಾಯಕಿ ವೈಷ್ಣವಿ ಮೆನನ್ ಅದಕ್ಕೆ ಪ್ರತಿಸ್ಪರ್ಧೆ ನೀಡಿದ್ದಾರೆ. ಮಿಕ್ಕ ಪಾತ್ರಗಳದ್ದೂ ಹದವಾದ ನಟನೆ. ಪಾದರಸನ ಪಡಿಪಾಟಲುಗಳನ್ನು ಒಂದು ಸಲ ನೋಡಬಹುದು.
#
Comments