ಯೋಗರಾಜ್ ಭಟ್ ಅವರ ಗರಡಿಯಲ್ಲಿ ಬಹುಕಾಲ ಪಳಗಿದವರು ಹರಿಪ್ರಸಾದ್ ಜಯಣ್ಣ. ಅವರ ನಿರ್ದೇಶನದ ಮೊದಲ ಸಿನಿಮಾ ಪದವಿ ಪೂರ್ವ. ಈ ಕಾರಣಕ್ಕೇ ಚಿತ್ರದ ಬಗ್ಗೆ ಒಂದಿಷ್ಟು ಕ್ಯೂರಿಯಾಸಿಟಿ ಕ್ರಿಯೇಟ್ ಆಗಿತ್ತು.
ʻʻಇನ್ನೂ ಆ ದಿನಗಳು ಕಣ್ಣಲ್ಲೇ ಇವೆ… ಎಲ್ಲವೂ ನೆನ್ನೆ ಮೊನ್ನೇ ಆದಂತೆ ಅನಿಸುತ್ತೆ… ಏನೆಲ್ಲಾ ಘಟಿಸಿಬಿಡ್ತು…ʼʼ ಹೀಗೆ ಹಳೇದನ್ನು ನೆನಪು ಮಾಡಿಕೊಂಡು ಯಾರು ತಾನೆ ನಿಟ್ಟುಸಿರು ಬಿಡೋದಿಲ್ಲ ಹೇಳಿ. ಇಂಥ ಕಾಡುವ ನೆನಪುಗಳನ್ನೆಲ್ಲಾ ಒಂದೆಡೆ ಸೇರಿಸಿ ರೂಪಿಸಿರುವ ಚಿತ್ರ ಪದವಿ ಪೂರ್ವ.
ಈಗೆಲ್ಲಾ ಮೊಬೈಲು, ಸೋಷಿಯಲ್ ಮೀಡಿಯಾಗಳಿವೆ. ಶಾಲೆ, ಕಾಲೇಜು ಬಿಟ್ಟ ನಂತರವೂ ಮಕ್ಕಳು ಸಂಪರ್ಕದಲ್ಲಿರುತ್ತಾರೆ. ತೊಂಭತ್ತರ ದಶಕದದಲ್ಲಿ ಸ್ಕೂಲು, ಕಾಲೇಜು ಓದಿದವರು ಕಳೆದುಕೊಂಡ ಸಹಪಾಠಿಗಳನ್ನು ಹುಡುಕುವ ಪ್ರಕ್ರಿಯೆಯನ್ನು ನಿರಂತರ ಚಾಲನೆಯಲ್ಲಿಟ್ಟಿರುತ್ತಾರೆ. ಅಚಾನಕ್ಕಾಗಿ ಎಲ್ಲರೂ ಭೇಟಿಯಾದಾಗ ಹಳೆಯದ್ದನ್ನೆಲ್ಲಾ ಒಮ್ಮೆಲೇ ಕಣ್ಮುಂದೆ ತಂದುಕೊಳ್ಳುತ್ತಾರೆ.
ಪಿಯೂಸಿ ಕಾಲಘಟ್ಟ ಬದುಕಿನ ಮಹತ್ವದ ಘಟ್ಟ. ಆಗಷ್ಟೇ ರೆಕ್ಕೆ ಬಿಚ್ಚಿ ಹಾರುವ ಹೊತ್ತು. ಯಾವುದು ತಪ್ಪು, ಯಾವುದು ಸರಿ ಅಂತಾನೂ ಗೊತ್ತಾಗದ, ಹಿಡಿತಕ್ಕೆ ಸಿಗದ ವಯಸ್ಸು. ಆ ಹೊತ್ತಲ್ಲಿ ಮಕ್ಕಳ ನಡುವೆ ನಡೆಯುವ ಪ್ರೀತಿ, ಪ್ರೇಮ, ಕಾಮ, ಚೇಷ್ಟೆಗಳನ್ನೆಲ್ಲಾ ಅದೇ ಹುಡುಗರು ದೊಡ್ಡವರಾದ ಮೇಲೆ ನೆನಪಿಸಿಕೊಳ್ಳೋದೇ ಚೆಂದ.
ಪದವಿ ಪೂರ್ವದಲ್ಲಿ ʻಫ್ರೆಂಡ್ಸ್ ಇದ್ರೇನೆ ಜೀವನʼ ಅನ್ನೋದೊಂದು ಹಾಡು ಇದೆಯಲ್ಲಾ? ಆ ಹಾಡಿನ ಪ್ರತೀ ಪದಗಳನ್ನೂ ಪ್ರದಿಪಾದಿಸುವ ಹುಡುಗ. ಅವನು ಪೀಪಿ ನವೀನ. ಅಪ್ಪ ಮರದಲ್ಲಿ ಶಿಲ್ಪಗಳನ್ನು ಕೆತ್ತುವ ಕಲಾವಿದ. ಮಗ ಓದಿ ಡಾಕ್ಟರಾಗಬೇಕು ಅನ್ನೋದು ಅಪ್ಪನ ಬಯಕೆ. ಮಗ ಕಾಲೇಜಿನಲ್ಲಿ ಗೆಳೆಯರ ತಂಡವನ್ನು ಕಟ್ಟಿಕೊಂಡು ಓಡಾಡುತ್ತಿರುತ್ತಾನೆ. ಹೊಸದಾಗಿ ಬಂದ ಹುಡುಗಿಯನ್ನು ಪ್ರೀತಿಸುತ್ತಾನೆ. ಅಲ್ಲೊಬ್ಬ ಅದೇ ಕಾಲೇಜಿನ ಅಪ್ಪಾ ಪೋಲಿ ಹುಡುಗನೊಬ್ಬ ಇವರಿಬ್ಬರ ಮಧ್ಯೆ ಎಂಟ್ರಿ ಕೊಡುತ್ತಾನೆ. ಯಥಾ ಪ್ರಕಾರ ಕಿತ್ತಾಟಗಳು, ಹೊಡೆದಾಟಗಳು ಸಂಭವಿಸುತ್ತವೆ. ಕಟ್ಟಕಡೆಯದಾಗಿ ಹುಡುಗರು ಏನಾಗುತ್ತಾರೆ? ನವೀನ ಡಾಕ್ಟರಾಗುತ್ತಾನಾ ಅಥವಾ ಆತನ ಬದುಕಿನಲ್ಲಿ ಬೇರೆ ಘಟನೆ ನಡೆಯುತ್ತದಾ ಅನ್ನೋದು ಪದವಿ ಪೂರ್ವದ ಅಂತಿಮ ಗುಟ್ಟು.
ಕಾಲೇಜು ವಿದ್ಯಾರ್ಥಿಗಳ ಲೈಫ್ ಸ್ಟೋರಿಗಳು ಈಗಾಗಲೇ ಸಾಕಷ್ಟು ಬಂದಿವೆ. ಇಪ್ಪತ್ತೈದು ವರ್ಷಗಳ ಹಿಂದಕ್ಕೆ ಹೋಗಿ ಕಥೆ ಹೇಳಿದ್ದಾರೆ ಅನ್ನೋದನ್ನು ಬಿಟ್ಟರೆ ಪದವಿ ಪೂರ್ವದಲ್ಲಿ ತೀರಾ ಹೊಸತನವೇನೂ ಇಲ್ಲ. ಇಡೀ ಸಿನಿಮಾ ಕಾಲೇಜು, ಕ್ಯಾಂಪಸ್ಸು, ನದಿ ದಡಗಳಲ್ಲೇ ಸಾಗುತ್ತದೆ. ಕಡೆಯ ಹತ್ತು ನಿಮಿಷ ಇಡೀ ಸಿನಿಮಾದ ಗ್ರಾಫನ್ನು ಬೇರೆ ಲೆವೆಲ್ಲಿಗೆ ತೆಗೆದುಕೊಂಡು ಹೋಗುತ್ತದೆ. ಅದು ಏನು ಅಂತಾ ತಿಳಿದುಕೊಳ್ಳಲು ಪೂರ್ತಿ ಸಿನಿಮಾವನ್ನು ನೋಡಲೇಬೇಕು.
ನವೀನನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪಥ್ವಿ ಶಾಮನೂರು ಭರವಸೆ ಮೂಡಿಸುತ್ತಾನೆ. ಎಲ್ಲರಿಗಿಂತಾ ಹೆಚ್ಚು ಗಮನ ಸೆಳೆಯುವುದು ವಿಜಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹುಡುಗ. ರಾಮರಾಮರೇ ನಟರಾಜ್ ಮೇಷ್ಟ್ರಾಗಿ ಇಷ್ಟವಗುತ್ತಾರೆ. ನಗು ಹುಟ್ಟಿಸುವ ಒಂದಷ್ಟು ಮಾತುಗಳು ಚಿತ್ರದಲ್ಲಿವೆ. ಚಿತ್ರದ ಹಿನ್ನೆಲೆಯಂತೆಯೇ ಹಾಡುಗಳು ಸಹಾ ಮುದ್ದಾಗಿವೆ.
ಬಹುತೇಕ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳ ಸುತ್ತಲಿನ ಕತೆಗಳೇ ಸಿನಿಮಾಗಳಾಗುತ್ತಿರುವಾಗ ಪಿ.ಯು.ಸಿ. ಲೆವೆಲ್ಲಿನ ಸಬ್ಜೆಕ್ಟ್ ಬಹುತೇಕರಿಗೆ ಕನೆಕ್ಟ್ ಆಗುತ್ತದೆ. ಮಕ್ಕಳು ಬೆಳೆದು ಉದ್ದಾರ ಆಗಲಿ ಅಂತಾ ಬಯಸುವ ಅಪ್ಪ ಅಪ್ಪನ ತಳಮಳ, ಅದರ ನಡುವೆ ಕಳ್ಳಾಟ ಆಡುವ, ಹಾದಿ ತಪ್ಪುವ ಹುಡುಗರ ವಿವರಗಳು ನಮ್ಮ ಸುತ್ತ ನಡೆದ ಘಟನೆಗಳನ್ನು ನೆಪಿಗೆ ತರುತ್ತವೆ. ಯಾರದ್ದೇ ಬದುಕಾಗಲಿ ಜನ ಡಿಸೈಡು ಮಾಡಿದಂತೆ ರೂಪುಗೊಳ್ಳುವುದಿಲ್ಲ. ಎದುರಾಗುವ ಸಂದರ್ಭಗಳ ನಡುವೆ ಸ್ವಲ್ಪವೇ ಆಯ ತಪ್ಪಿದರೂ ಜೀವನ ಪ್ರಪಾತಕ್ಕೆ ಜಾರುತ್ತದೆ ಎನ್ನುವ ಸತ್ಯ ಇಲ್ಲಿ ಅನಾವರಣಗೊಂಡಿದೆ…
ಅದ್ಭುತ ಅಂತಾ ಹೇಳುವ ಎಲಿಮೆಂಟುಗಳು ಇಲ್ಲದಿದ್ದರೂ ಸರಳ ಮತ್ತು ಸುಂದರ ಚಿತ್ರವಾಗಿ ಪದವಿ ಪೂರ್ವ ರೂಪುಗೊಂಡಿದೆ.
No Comment! Be the first one.