ಕನ್ನಡ ಸಿನಿಮಾರಂಗದಲ್ಲಿ ಇತ್ತೀಚೆಗೆ ನಾಯಕಿಯರ ಕೊರತೆ ಎದ್ದು ಕಾಣುತ್ತಿದೆ. ನಿವೃತ್ತ ನಾಯಕಿಯರಲ್ಲಿ ಅನೇಕರು ಡ್ರಗ್ಸು, ಡೀಲು ಅಂತೆಲ್ಲಾ ಬ್ಯುಸಿಯಾಗಿ ಹೋಗಿದ್ದಾರೆ. ಇನ್ನು ಕೆಲವರು ಗಂಡ ಮನೆ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಅಂದ ಚೆಂದ ಇದ್ದರೆ ಪ್ರತಿಭೆ ಇರೋದಿಲ್ಲ. ಪ್ರತಿಭೆ ಇರೋರಿಗೆ ಗ್ಲಾಮರ್ ಇಲ್ಲ ಎನ್ನುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹೊತ್ತಿನಲ್ಲಿ ಕನ್ನಡ ಚಿತ್ರರಂಗಕ್ಕೆ ಮುದ್ದುಮುದ್ದಾದ ಹುಡುಗಿಯೊಬ್ಬಳು ಎಂಟ್ರಿ ಕೊಡುತ್ತಿದ್ದಾಳೆ…
ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ “ಪದವಿಪೂರ್ವ” ಚಿತ್ರಕ್ಕೆ ನಾಯಕಿಯಾಗಿ ‘ಅಂಜಲಿ ಅನೀಶ್’ ಆಯ್ಕೆಯಾಗಿದ್ದು, ಇವರು ‘ಬೆಂಗಳೂರು ಟೈಮ್ಸ್ ಫ್ರೆಶ್ ಫೇಸ್ ಆಫ್ ದಿ ಇಯರ್ 2020’ ಸ್ಪರ್ಧೆಯಲ್ಲಿ ಗೆದ್ದು, ‘ನ್ಯಾಷನಲ್ ಟೈಮ್ಸ್ ಫ್ರೆಶ್ ಫೇಸ್ ಆಫ್ ದಿ ಇಯರ್ 2020’ಯ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ಇವರು ಶಿಕಾಗೋದ ‘ಸೆಕೆಂಡ್ ಸಿಟಿ’ ಆಕ್ಟಿಂಗ್ ಸ್ಕೂಲ್ ಹಾಗು ‘ಅನುಪಮ್ ಖೇರ್’ ಆಕ್ಟಿಂಗ್ ಸ್ಕೂಲ್ನಲ್ಲಿ ನಟನೆಯ ತರಬೇತಿಯನ್ನು ಪಡೆದುಕೊಂಡಿದ್ದು ಕೆಲ ಬಾಲಿವುಡ್ ಮತ್ತು ಕನ್ನಡ ಸಿನಿಮಾಗಳಿಗೆ ಸಹಾಯಕ ನಿರ್ದೇಶಕಿಯಾಗಿಯೂ ಸಹ ಕೆಲಸ ಮಾಡಿದ್ದಾರೆ.
ಇದು ಚಿತ್ರದ ನಾಯಕ ‘ಪೃಥ್ವಿ ಶಾಮನೂರ್’ಗೂ ಕೂಡ ಚೊಚ್ಚಲ ಸಿನಿಮಾ ಆಗಿದ್ದು ಚಿತ್ರಕ್ಕೆ ‘ಅರ್ಜುನ್ ಜನ್ಯ’ ಸಂಗೀತ ಹಾಗು ‘ಸಂತೋಷ್ ರೈ ಪತಾಜೆ’ ಅವರ ಛಾಯಾಗ್ರಹಣ ಇರಲಿದೆ. ಹದಿಹರೆಯದ ಮೋಜು, ಮಸ್ತಿ, ಮೋಹ, ಸ್ನೇಹಗಳ ಕುರಿತಾದ ಕಥೆ ಇದಾಗಿದ್ದು ಚಿತ್ರವನ್ನು ಮಲೆನಾಡಿನ ಅತ್ಯಂತ ಸುಂದರ ತಾಣಗಳಲ್ಲಿ ಚಿತ್ರೀಕರಿಸುವ ಯೋಜನೆ ಇದೆ. ಉಳಿದಂತೆ ಬೇರೆ ಪಾತ್ರಗಳನ್ನು ಆಡಿಶನ್ ಮೂಲಕ ಆಯ್ಕೆ ಮಾಡಲಾಗಿದ್ದು, ಮತ್ತಷ್ಪು ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ಹಾದಿಯಲ್ಲಿ ತಂಡ ಕೆಲಸ ಮಾಡುತ್ತಿದೆ.
No Comment! Be the first one.