ಮಕ್ಕಳು ಶಾಲೆಯೊಳಗೆ ಕನ್ನಡದಲ್ಲಿ ಮಾತಾಡುತ್ತಾರೆ ಅನ್ನೋದನ್ನೇ ಆರೋಪಿಸಿ ಆ ಸ್ಕೂಲಿನ ಫಾದರ್ ತಂದೆಯನ್ನು ಕರೆಸಿರುತ್ತಾರೆ. ಈ ವಿಚಾರದ ಸುತ್ತ ಮಾತಿಗೆ ಮಾತು ಬೆಳೆಯುತ್ತದೆ. ಕನ್ನಡವನ್ನು ಆ ಫಾದರ್ ಹೋಪ್ ಲೆಸ್ ಲಾಂಗ್ವೇಜ್ ಎನ್ನುತ್ತಾನೆ. ತಕ್ಷಣ ಆತನ ಕೆನ್ನೆಗೆ ಬಾರಿಸಿ “ಒಬ್ಬ ವ್ಯಕ್ತಿಯ ಬದುಕು ರೂಪುಗೊಳ್ಳೋದು ಇಂಗ್ಲಿಷಿಂದ ಅಲ್ಲ, ಗೊತ್ತಿರೋ ಜ್ಞಾನದಿಂದ. ಇಂಗ್ಲಿಷ್ ಅನ್ನೋದು ಒಂದು ಭಾಷೆ ಅಷ್ಟೇ. ಅದು ಸಂಹನಕ್ಕಿರುವ ಒಂದು ಸಾಧನ ಮಾತ್ರ. ಆದರೆ, ಕನ್ನಡ ನಮ್ಮ ಅಸ್ತಿತ್ವ. ಕನ್ನಡದ ವಿಶಾಲತೆ ಗೊತ್ತೇನೋ ನಿನಗೆ, ಒಂದಲ್ಲಾ ಎರಡು ಸಾವಿರ ವರ್ಷಗಳ ಇತಿಹಾಸ ಇದೆ. ಆ ಟೈಮಲ್ಲಿ ನಿಮ್ಮ ಇಂಗ್ಲಿಷು ತೊಟ್ಲಲ್ಲಿ ನಿಪ್ಪಲ್ ಚೀಪ್ತಾ ಇತ್ತು. ರೋಮನ್ನಿನಿಂದ ಹುಟ್ಟಿಕೊಂಡ ಇಂಗ್ಲಿಷ್ ಭಾಷೆಗೆ ಲಿಪಿನೇ ಇರಲಿಲ್ಲ.. ಅದೇ ಅಮ್ಮಾ ಅಂದಾಗ ಬಂದ ಶಬ್ದ ಕೇವಲ ಬಾಯಿಂದ ಬಂದಿದ್ದಲ್ಲ. ಅದು ಮನಸ್ಸಿಂದ ಬಂದಿದ್ದು…” ಎನ್ನುತ್ತಾರೆ ಆ ತಂದೆ!
ಇದು ಪಡ್ಡೆ ಹುಲಿ ಚಿತ್ರದಲ್ಲಿ ರವಿಚಂದ್ರನ್ ಅವರ ದೃಶ್ಯವೊಂದರ ಸ್ಯಾಂಪಲ್ಲು. ಇಡೀ ಸಿನಿಮಾದ ತುಂಬಾ, ಕನ್ನಡ, ಕನ್ನಡತನ, ಇಲ್ಲಿನ ಸಂಗೀತ, ಸಾಹಿತ್ಯ, ಸಾಹಿತಿಗಳ ವಿಚಾರ ರಾರಾಜಿಸಿದೆ. ಇತ್ತೀಚೆಗೆ ಬಹುಶಃ ಯಾವ ಕಮರ್ಷಿಯಲ್ ಸಿನಿಮಾಗಳಲ್ಲೂ ಕನ್ನಡವನ್ನು ಈ ಮಟ್ಟಿಗೆ ಎತ್ತಿಹಿಡಿದಿರಲಿಲ್ಲವೇನೋ.
ಇಂಜಿನಿಯರಿಂಗ್ ಕಾಲೇಜು, ಓದು, ಪ್ರೀತಿ, ನೆಚ್ಚಿಕೊಂಡ ಕನ್ನಡ, ಕಾಡುವ ಸಂಗೀತ… ಇವೆಲ್ಲವನ್ನೂ ಹೊಂದಿರುವ ಸಿನಿಮಾ ಪಡ್ಡೆ ಹುಲಿ. ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಮಧ್ಯಮ ವರ್ಗದ ಹುಡುಗರ ಬದುಕಿನ ನಾನಾ ಮಜಲುಗಳನ್ನು ಹೊಂದಿರೋ ಮಜವಾದ ಕಥೆಯೊಂದನ್ನು ಒಳಗೊಂಡಿದೆ. ಹಾಗಂತ ಇದೇನು ಬರೀ ಮಧ್ಯಮ ವರ್ಗದವರಿಗೆ ಮಾತ್ರ ಕಾಡುವಂಥಾ ಕಥೆ ಅಂದುಕೊಳ್ಳಬೇಕಿಲ್ಲ. ಪಡ್ಡೆಹುಲಿಯಲ್ಲಿ ಎಲ್ಲ ವರ್ಗದ ಪ್ರೇಕ್ಷಕರೂ ಮೆಚ್ಚಿಕೊಳ್ಳೋ ಅಂಶಗಳೂ ಇವೆ. ಪ್ರತಿಯೊಬ್ಬರೂ ಏನಾದರೊಂದು ಸಾಧಿಸುವ ಛಲ ಹೊಂದಿರುತ್ತಾರೆ. ಆದರೆ ಆ ಹಾದಿಯೇನು ಹೂವಿನ ಹಾಸಿಗೆ ಆಗಿರೋದಿಲ್ಲ. ಕಲ್ಲು ಮುಳ್ಳುಗಳನ್ನು ದಾಟಿಕೊಂಡು ಹೋಗದಿದ್ದರೆ ಗೆಲುವು ಸಿಕ್ಕೋದೂ ಸಾಧ್ಯವಿಲ್ಲ. ಆದರೆ ಈ ಹಾದಿಯಲ್ಲಿ ಎದುರಾಗೋ ನೋವು, ಅವಮಾನ, ನಿರಾಸೆ ಮತ್ತು ಖುಷಿ ಒಬ್ಬೊಬ್ಬರಿಗೂ ಒಂದೊಂದು ಥರದಲ್ಲಿ ದಕ್ಕುತ್ತದೆ. ಈ ನಿಟ್ಟಿನಲ್ಲಿ ಪಡ್ಡೆಹುಲಿಯ ಅನುಭವಗಳು ಖಂಡಿತಾ ಎಲ್ಲರನ್ನೂ ಬೆರಗುಗೊಳಿಸುವಂತಿದೆ. ನಿಖರವಾಗಿ ಹೇಳಬೇಕೆಂದರೆ ಪಡ್ಡೆಹುಲಿ ಚಿತ್ರದಲ್ಲಿ ಪ್ರೀತಿಯಿದೆ. ಜೀವನಪ್ರೇಮವಿದೆ. ಸಾಧಿಸುವವರಿಗೆ ಸ್ಫೂರ್ತಿ, ಜಬರ್ದಸ್ತ್ ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್ ಸೇರಿದಂತೆ ಎಲ್ಲದರ ಹದವಾದ ಸಮ್ಮಿಲನದೊಂದಿಗೇ ಪಡ್ಡೆಹುಲಿ ತೆರೆಮೇಲೆ ಘರ್ಜಿಸಿದೆ.
ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಪ್ರೀತಿಯಿಂದ ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ಈ ಚಿತ್ರವೀಗ ಬರೋಬ್ಬರಿ ಹನ್ನೊಂದು ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಚಕಿತಗೊಳಿಸಿವೆ. ರ್ಯಾಪ್ ಜಗತ್ತಿನಲ್ಲಿ ಕಳೆದು ಹೋಗಿರೋ ಈ ಪೀಳಿಗೆಗೆ ಹೊಸಾ ಥರದ ಹಾಡುಗಳನ್ನೂ ಪರಿಚಯಿಸಿದೆ. ಹೀಗೆ ಹಾಡುಗಳ ಮೂಲಕ ಹೊಸಾ ಶಕೆಯನ್ನೇ ಸೃಷ್ಟಿಸಿರೋ ಪಡ್ಡೆಹುಲಿ ಚಿತ್ರದ ಮೂಲಕ ಶ್ರೇಯಸ್ ನಾಯಕನಾಗಿ ಅದ್ದೂರಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ. ಶ್ರೇಯಸ್ ನಿರ್ಮಾಪಕ ಕೆ ಮಂಜು ಅವರ ಪುತ್ರ. ಮಂಜು ಅವರ ಹಲವಾರು ವರ್ಷಗಳಿಂದ ಮಗನನ್ನು ನಾಯಕನನ್ನಾಗಿ ಲಾಂಚ್ ಮಾಡಲು ತಯಾರಿ ನಡೆಸಿಯೇ ಪಡ್ಡೆಹುಲಿಗೆ ಒಪ್ಪಿಗೆ ಕೊಟ್ಟಿದ್ದಾರೆ. ಅಂಥಾದ್ದೊಂದು ಗುರುತರವಾದ ಜವಾಬ್ದಾರಿಯನ್ನು ಹೊತ್ತುಕೊಂಡಿರೋ ನಿರ್ದೇಶಕ ಗುರುದೇಶಪಾಂಡೆ ಪ್ರತಿಯೊಂದನ್ನೂ ಕಣ್ಣಲ್ಲಿ ಕಣ್ಣಿಟ್ಟು ರೂಪಿಸಿದ್ದಾರೆ ಅನ್ನೋದು ಸಿನಿಮಾ ನೋಡಿದ ಯಾರಿಗೇ ಆದರೂ ಅನ್ನಿಸದೇ ಇರಲಾರದು.
ಗುರುದೇಶಪಾಂಡೆಯವರ ಕ್ರಿಯಾಶೀಲತೆಯ ಕಾರಣದಿಂದಲೇ ಪಡ್ಡೆಹುಲಿಗೆ ಅತಿರಥ ಮಹಾರಥರ ಸಾಥ್ ಸಿಕ್ಕಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಸುಧಾರಾಣಿ ಕೂಡಾ ಪಡ್ಡೆಹುಲಿಯೊಂದಿಗೆ ಅಮೋಘವಾಗಿ ನಟಿಸಿದ್ದಾರೆ. ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಅವರೂ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ಅತಿಥಿ ಪಾತ್ರದಲ್ಲಿ ಬಂದು ಹೋಗುತ್ತಾರೆ. ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ಕನ್ನಡದ ವಚನಗಳು, ಕವಿವಾಣಿಗಳಿಗೆ ಅಜನೀಶ್ ಲೋಕನಾಥ್ ನೀಡಿರೋ ಸಂಗೀತ ಕೇಳಲು ಮಾತ್ರವಲ್ಲ, ಕುಣಿಸುವ ಶಕ್ತಿಯನ್ನು ಹೊಂದಿದೆ. ಚಂದ್ರಶೇಖರ್ ಅವರ ಛಾಯಾಗ್ರಹಣ ಅದ್ಭುತವಾಗಿದೆ.
ಒಟ್ಟಾರೆ ಇದು ಕಾಲೇಜು ಹುಡುಗ-ಹುಡುಗಿಯರು ಮಾತ್ರವಲ್ಲ, ಮಕ್ಕಳ ಮೇಲೆ ಅತಿಯಾದ ಜವಾಬ್ದಾರಿಗಳನ್ನು ಹೇರುವ, ಓದೊಂದೇ ಮುಖ್ಯ ಅಂದುಕೊಂಡ ಹೆತ್ತವರೂ ನೋಡಬೇಕಾದ ಸಿನಿಮಾ ಇದಾಗಿದೆ.