ಸುದೀಪ್ ಅವರಿಗೆ ನಮಸ್ಕಾರ.
ನಿಮ್ಮ ಸಿನೆಮಾ ಲೀಕ್ ಮಾಡಿ ಜನರ ನಡುವೆ ಹಂಚಿದ ಪ್ರಕರಣ ಕುರಿತು ನನಗೂ ಶ್ರಮಕ್ಕೆ ಬೆಲೆ ಕೊಡುವ ಎಲ್ಲರಿಗೂ ಸಿಟ್ಟಿದೆ. ಅದನ್ನು ಯಾರೇ ಮಾಡಿದ್ದರೂ ಖಂಡಿತಾ ಶಿಕ್ಷಾರ್ಹ. ಅಭಿಮಾನದ ಹೆಸರಲ್ಲೋ ಮತ್ತೊಂದರ ಹೆಸರಲ್ಲೋ ಇಂಥವನ್ನು ಮಾಡಿದರೆಂದು ಕ್ಷಮಿಸಿದರೆ ಮುಂದೆ ಇಂಥ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತವೆ. ‘ಪೈಲ್ವಾನ್’ ಸಿನೆಮಾಗಾಗಿ ನಿಮ್ಮ ಶ್ರಮ, ನಿರ್ಮಾಪಕರ ಹಣ ಮತ್ತು ಸದ್ಯದ ಸನ್ನಿವೇಶಗಳ ಹಿನ್ನೆಲೆಯಲ್ಲಿ ನಿಮ್ಮ ಆಕ್ರೋಶ ಅತ್ಯಂತ ಸಹಜ ಅನ್ನೋದು ನಮಗೆ ಅರ್ಥವಾಗುತ್ತದೆ.

ಹಾಗೇ, ನಿಮ್ಮ ಸ್ಪಷ್ಟೀಕರಣ ನೋಡಿದೆ. ಕೂದಲು ಸೀಳುತ್ತಾ ಕೂರುವ ಸಮಯವಿದಲ್ಲ. ಹಾಗೆ ಮಾಡುವುದಕ್ಕೆ ಅರ್ಥವೂ ಇಲ್ಲ. ಆದ್ದರಿಂದ ನೀವು ಸಮರ್ಥನೆ ಕೊಡುವ ಬದಲು ‘ಕ್ಷಮೆ ಕೇಳಬೇಕಿತ್ತು’ ಅಂತ ಆಕ್ಷೇಪ ತೆಗೆಯುತ್ತಾ ಕೂರುವುದು ವ್ಯರ್ಥ. ಅಂಥ ನಿರೀಕ್ಷೆ ಕೊನೆಪಕ್ಷ ನನಗಂತೂ ಇಲ್ಲ. ಏಕೆಂದರೆ, ನಾನೂ ಸೇರಿದಂತೆ ನಿಮ್ಮ ‘ಬಳೆ – ಕಡಗ’ ಹೇಳಿಕೆ ವಿರೋಧಿಸಿದ ಬಹುತೇಕರಿಗೆ ಸುದೀಪ್ ವೈಯಕ್ತಿಕ ಟಾರ್ಗೆಟ್ ಅಲ್ಲವೇ ಅಲ್ಲ. ನಮಗೆ ಆ ‘ಗಂಡು ಭಾಷೆ’ ಮತ್ತು ಅದು ಈ ಕಾಲದಲ್ಲೂ ಸಾಮಾಜಿಕ ಪರಿಣಾಮ ಬೀರಬಲ್ಲ ವ್ಯಕ್ತಿಗಳ ಬಳಕೆಯಲ್ಲೂ ಉಳಿದಿರುವುದು ಬೇಸರದ ಸಂಗತಿ. ಆದ್ದರಿಂದ ಅದು ನಮ್ಮ ಪ್ರತಿಕ್ರಿಯೆ ಆಗಿತ್ತು.

ಹಾಗಂತ ಹೆಣ್ಣಿನ ಅಸ್ಮಿತೆಗೆ ಧಕ್ಕೆ ಬರುವ ಪರಿಭಾಷೆಯಲ್ಲಿ ಮಾತಾಡುವ ಸೆಲೆಬ್ರಿಟಿ ನೀವೊಬ್ಬರೇ ಅಲ್ಲ.
ಕಳೆದ ವರ್ಷ ಬಹುಶಃ ಜೂನ್ – ಜುಲೈ ತಿಂಗಳಲ್ಲಿ ತಮಿಳುನಾಡಿನಲ್ಲಿ ಒಂದು ಸಿನೆಮಾ ಕಾರ್ಯಕ್ರಮ ನಡೆದಿತ್ತು. ಆಗ ವೇದಿಕೆ ಮೇಲೆ, ಸಾವಿರಾರು ಜನರ ನಡುವೆ ನಿಂತು ಖ್ಯಾತ ನಿರ್ದೇಶಕ (ಇವರನ್ನು ಜನ ಸೂಕ್ಷ್ಮಜ್ಞ ಅನ್ನುತ್ತಾರೆ) ಮಿಸ್ಕಿನ್ “ಮಮ್ಮುಟ್ಟಿ ನಂಗೆ ಭಾಳ ಇಷ್ಟ. ಅವರೇನಾದರೂ ಹೆಣ್ಣಾಗಿದ್ದರೆ ನಾನು ರೇಪ್ ಮಾಡಿರುತ್ತಿದ್ದೆ” ಅಂದಿದ್ದರು. ಅದಕ್ಕೆ ಆ ಕಾರ್ಯಕ್ರಮದಲ್ಲಿ ನೆರೆದವರೂ ವೇದಿಕೆ ಮೇಲಿದ್ದವರೂ ಕಿವಿಗಡಚಿಕ್ಕುವ ಕರತಾಡನ ಮಾಡಿದ್ದರು. ಶಿಳ್ಳೆಗಳ ದನಿ ಹೊರಟಿದ್ದವು.
ಇದನ್ನು ಯಾರೂ ಪ್ರಶ್ನಿಸಲಿಲ್ಲ. ಒಂದೆರಡು ಕ್ಷೀಣ ದನಿಯ ಆಕ್ಷೇಪಗಳು ಬಂದವಷ್ಟೆ.

ಆದರೆ, ಎಲ್ಲ ಸಲವೂ ಹಾಗಾಗಿಲ್ಲ.
ಇತ್ತೀಚೆಗೆ ಶೋಭಾ ಕರಂದ್ಲಾಜೆ, ಸ್ವತಃ ಹೆಣ್ಣು, ಬಳೆ ತೊಡಿಸುವ ಮಾತಾಡಿ ಟ್ರೋಲ್ ಆಗಿದ್ದರು. ಅದಕ್ಕೆ ಮುಂಚೆ ಉತ್ತರ ಭಾರತದ ಒಂದು ಯುನಿವರ್ಸಿಟಿ ಹೆಣ್ಣುಮಕ್ಕಳು (ವಿದ್ಯಾರ್ಥಿ ಚಳವಳಿಗಾರರು) ಆಡಳಿತ ಮಂಡಳಿಗೆ ಬಳೆ ಕಳಿಸುವ ಮೂಲಕ ಪ್ರತಿಭಟನೆ ತೋರಿದ್ದರು! ಎರಡು ವರ್ಷಗಳ ಹಿಂದೆ ಪಬ್ಲಿಕ್ ಟೀವಿ ಕಾವೇರಿ ಗಲಾಟೆ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಪಟಕ್ಕೆ ಸೀರೆ ತೊಡಿಸಿ ಬಳಿ ಹಾಕಿದ ಪೋಸ್ಟರ್ ಹಾಕಿ ನ್ಯೂಸ್ ರನ್ ಮಾಡಿತ್ತು. ಈ ಸಂದರ್ಭಗಳಲ್ಲಿ ನಮ್ಮ ನಡುವಿನ ಅನೇಕರು ಇನ್ನೂ ಜೋರು ದನಿಯಲ್ಲಿ ಅವೆಲ್ಲವನ್ನು ಖಂಡಿಸಿದ್ದೆವು.

ನಮ್ಮ ದೇಶದಲ್ಲಿ ಬಾಕಿ ಎಲ್ಲ ಬಗೆಯಲ್ಲಿ ಸಜ್ಜನರಾದವರು ಕೂಡಾ ಹೆಣ್ಣಿಗೆ ಸಂಬಂಧಿಸಿದ ಪರಿಭಾಷೆಗಳನ್ನು ಅವಮಾನಕರ, ಲೈಂಗಿಕ ಇತ್ಯಾದಿ ಹಲವು ಆಯಾಮಗಳಲ್ಲಿ ಬಳಸುತ್ತಾರೆ. ನಮ್ಮ ಪ್ರಾಚೀನ ಸುಧಾರಕ ಸಂತ ಪರಂಪರೆಯಿಂದ ಹಿಡಿದು ಈಗಿನ ಸಂವೇದನಾಶೀಲ ಬುದ್ಧಿಜೀವಿಗಳವರೆಗೂ ಎಲ್ಲೋ ಒಂದು ಕಡೆ, ಒಂದಲ್ಲ ಒಂದು ಸಂದರ್ಭದಲ್ಲಿ ಹೆಣ್ಣು ಎರಡನೆ ದರ್ಜೆಯ ಮನುಷ್ಯ ಜಾತಿ ಅನ್ನುವುದನ್ನು ಸೂಚಿಸುವ ಭಾಷೆ ಹೊರಡುತ್ತದೆ.

ಅದೇನೂ ಬೇಕೆಂದು ಮಾಡುವುದಲ್ಲ. ಆ ಮಾತುಗಳನ್ನಾಡುವಾಗ ಅವರ ತಲೆಯಲ್ಲಿ ಹೆಣ್ಣನ್ನು ಅವಮಾನಿಸುವ ಆಲೋಚನೆ ಬಹುತೇಕ ಇರುವುದೂ ಇಲ್ಲ. ಆದರೆ, ರಕ್ತದೊಳಗೆ ಹರಿಯುವ ಚಿಂತನೆಯಲ್ಲಿ ಅದು ಸುಪ್ತವಾಗಿರುತ್ತದೆ.

ಅಜ್ಜಿ ಮೊಮ್ಮಗನನ್ನು ಮುದ್ದಿನಿಂದ ಆಡಿಸುವಾಗ ‘ನಿನ್ ಹೇಣ್ತಿ ಹೆಣ್ ಹಡಿಯಾ’ ಅನ್ನುವಾಗಲೂ ಅಷ್ಟೇ, ಸುದೀಪ್ ‘ನಾವು ತೊಟ್ಟಿರೋದು ಕಡಗ, ಬಳೆ ಅಲ್ಲ’ ಅನ್ನುವಾಗಲೂ ಅಷ್ಟೆ.

ನಮ್ಮ ಕಾಳಜಿ ಯಾರೂ ಇಂಥ ಪರಿಭಾಷೆಯಲ್ಲಿ ಮಾತಾಡಬಾರದು. ಅದರಲ್ಲೂ ಸಾಮಾಜಿಕ ಪ್ರಭಾವ ಬೀರುವ ವ್ಯಕ್ತಿಗಳು ಮಾತಾಡಿ ಅದನ್ನೇ ಸರಿ ಎಂದು ಸ್ಥಾಪಿಸಲು ಹೋಗಬಾರದು ಎಂಬುದಷ್ಟೇ.

ನಿಮ್ಮ ಪ್ರತಿಕ್ರಿಯೆಯಲ್ಲಿ “ನಾನು ಯಾರಿಗೂ ಅರ್ಥ ಮಾಡಿಸಬೇಕಿಲ್ಲ” ಎಂದು ನೀವು ಅನ್ನುವಾಗ ನಿಮಗೆ ನಮ್ಮ ಮಾತುಗಳ ಹಿನ್ನೆಲೆ ಸ್ವಲ್ಪವೂ ಅರ್ಥವಾಗದೆ ಇದ್ದುದು ಸ್ಪಷ್ಟವಾಗಿ ಕಂಡಿತು.
ಇರಲಿ… ವೈಯಕ್ತಿಕವಾಗಿ ನನಗೆ ನಿಮ್ಮ ಮ್ಯಾನರಿಸಮ್ ಇಷ್ಟವಾಗುತ್ತದೆ. ನಿಮ್ಮ ಆ್ಯಟಿಟ್ಯೂಡ್ ಕೂಡಾ. ನೀವು ಅಗ್ಗವಾಗಿ ವರ್ತಿಸುವುದಿಲ್ಲ ಎಂದು ಸಿನೆಮಾ ವರದಿಗಾರ ಗೆಳೆಯರು ಹೇಳುವುದನ್ನು ಕೇಳಿದ್ದೇನೆ. ನಿಮ್ಮಂಥವರು ನಮ್ಮಂಥವರ ಪ್ರತಿಕ್ರಿಯೆಯನ್ನು ಅರ್ಥ ಮಾಡಿಕೊಂಡು ಮುಂದಿನ ದಿನಗಳಲ್ಲಾದರೂ ಎಂಥದೇ ಸಿಟ್ಟಿನ ಸಂದರ್ಭದಲ್ಲೂ ಸಂಭಾಳಿಸಿಕೊಳ್ಳುವಂತಾಗಲಿ ಅನ್ನುವ ಆಶಯವಷ್ಟೆ.

~

ಈ ಉದ್ದನೆ ಪತ್ರ ನೀವು ಓದುವುದಿಲ್ಲ, ಇದು ನಿಮಗೆ ತಲುಪುವ ಖಾತ್ರಿಯೂ ಇಲ್ಲ. ನಿಮ್ಮ ಮೂಲಕ ಎಲ್ಲ ಪುರುಷ ಭಾಷೆಯ ಜನರೊಡನೆ ನಮ್ಮ ಆಕ್ಷೇಪದ ಹಿಂದಿನ ಕಾಳಜಿ ಹಂಚಿಕೊಳ್ಳೋಣ ಅನ್ನಿಸಿ ಇಷ್ಟು ಬರೆದೆ.

ಸಾವಿರಾರು ವರ್ಷಗಳಿಂದ ‘ಬಳೆ ತೊಡಿಸಿಕೊಂಡು’ ಕುಳಿತ ನಾವು ಇನ್ನೂ ಕೆಲವು ವರ್ಷ ಕಾಯಲು ತಯಾರಿದ್ದೇವೆ. ಎಂದಾದರೊಮ್ಮೆ ಮನುಷ್ಯ ಜಾತಿಯಲ್ಲಿ ಗಂಡು ಹೆಣ್ಣು ಮತ್ತುಲೈಂಗಿಕ ಅಲ್ಪಂಖ್ಯಾತರ ದರ್ಜೆಗಳು ಅಳಿದು ಸಮಾನತೆ ಮೂಡಬಹುದು ಅನ್ನುವ ಆಶಯದಿಂದ….

ಗೌರವದಿಂದ,
ಚೇತನಾ

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

‘ಕಪಟನಾಟಕ ಪಾತ್ರಧಾರಿ’ ಟ್ರೇಲರ್ ಬಂತು!

Previous article

ಬಳ್ಳಾರಿ ಬಳಿ ನಡೆದಿದ್ದು ಏನು?

Next article

You may also like

Comments

Leave a reply

Your email address will not be published.