ಸ್ಯಾಂಡಲ್ ವುಡ್ ನ ಬಾದ್ ಶಾ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಧ್ವನಿಸುರಳಿ ಬಿಡುಗಡೆಗೆ ಕಡೆಗೂ ಮುಹೂರ್ತ ನಿಗದಿಯಾಗಿದೆ. ಆಗಸ್ಟ್ 9ರ ವರಮಹಾಲಕ್ಷ್ಮಿ ಹಬ್ಬದ ದಿನದಂದೂ ಮೊದಲೇ ನಿಗದಿಯಾದಂತೆ ಚಿತ್ರದುರ್ಗದಲ್ಲಿ ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡವು ನಿರ್ಧರಿಸಿದೆಯಂತೆ. ಇನ್ನು ಸೆಪ್ಟೆಂಬರ್ 12ರಂದು ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಪೈಲ್ವಾನ್ ಬಿಡುಗಡೆಯಾಗುವ ಸಾಧ್ಯತೆಯೂ ಇದೆ. ಇನ್ನು ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ‘ಆಡಿಯೊ ಬಿಡುಗಡೆಯ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
https://twitter.com/KicchaSudeep/status/1157137813004881920
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ ಮೊದಲ ವಾರದಲ್ಲಿಯೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ತಾಂತ್ರಿಕ ತೊಂದರೆಯಿಂದ ಪೈಲ್ವಾನ್ ಆಡಿಯೋ ಬಿಡುಗಡೆಗೆ ಕೊಂಚ ತಡವಾಗಿತ್ತು. ಸಿನಿಮಾದಲ್ಲಿ 1 ಗಂಟೆ 40 ನಿಮಿಷದಷ್ಟು ಗ್ರಾಫಿಕ್ಸ್ ಇದ್ದು, ಇದರ ಜವಾಬ್ದಾರಿಯನ್ನು ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್ ಸಂಸ್ಥೆ ವಹಿಸಿಕೊಂಡಿದೆ. ಚಿತ್ರದಲ್ಲಿ ಆರು ಹಾಡುಗಳು ಮತ್ತು ಎರಡು ಥೀಮ್ ಸಾಂಗ್ಗಳಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಕಿಚ್ಚ ಸುದೀಪ್ ಗೆ ಜತೆಯಾಗಿ ಆಕಾಂಕ್ಷ ಸಿಂಗ್ ಅಭಿನಯಿಸಿದ್ದು, ಬಾಲಿವುಡ್ ನಟ ಸುನಿಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ ಸಾಥ್ ಕೊಟ್ಟಿದ್ದಾರೆ. ಹೆಬ್ಬುಲಿ ಕೃಷ್ಣ ಸಾರಥ್ಯದಲ್ಲಿ ಸ್ವಪ್ನ ಕೃಷ್ಣ ನಿರ್ಮಾಣದಲ್ಲಿ ಪೈಲ್ವಾನ್ ಮೂಡಿಬಂದಿದೆ.