ಎಲ್ಲ ಅಂದುಕೊಂಡಂತೆ ಆಗಿದ್ದಿದ್ದರೆ ಈಗಾಗಲೇ ಪೈಲ್ವಾನ್ ಆಡಿಯೋ ಸಿನಿ ರಸಿಕರ ಮೊಬೈಲ್ ಕಾಲರ್ ಟ್ಯೂನ್ ಆಗಿ, ಎಲ್ಲರೂ ಗುನುಗುವಂತೆ ಆಗಬೇಕಿತ್ತು. ಆದರೆ ತಾಂತ್ರಿಕ ತೊಂದರೆಯಿಂದ ಆಡಿಯೋ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದ ಚಿತ್ರತಂಡ ವರಮಹಾಲಕ್ಷ್ಮಿ ಹಬ್ಬದ ದಿನವೇ ಪೈಲ್ವಾನ್ ಆಡಿಯೋವನ್ನು ಬಿಡುಗಡೆ ಮಾಡಲು ಡಿಸೈಡ್ ಮಾಡಿದೆ. ಕೋಟೆಯ ನಾಡು ಚಿತ್ರದುರ್ಗದಲ್ಲಿ ಪೈಲ್ವಾನ್ ಆಡಿಯೋ ಬಿಡುಗಡೆಯಾಗಲಿದೆ.
ಈ ಹಿಂದೆ ಪೈಲ್ವಾನ್ ಪೋಸ್ಟರ್ ಗಳನ್ನು ಆಯಾ ಭಾಷೆಯ ಸ್ಟಾರ್ ಕಲಾವಿದರಿಂದ ಬಿಡುಗಡೆ ಮಾಡಿ ಸುದ್ದಿಯಾಗಿದ್ದ ಹೆಬ್ಬುಲಿ ಕೃಷ್ಣ ಪೈಲ್ವಾನ್ ಆಡಿಯೋವನ್ನು ಯಾರಿಂದ ಬಿಡುಗಡೆ ಮಾಡಲಿದ್ದಾರೆ ಎಂಬ ಕುತೂಹಲ ಕಿಚ್ಚನ ಅಭಿಮಾನಿಗಳಲ್ಲಿತ್ತು. ಸದ್ಯ ಚಿತ್ರತಂಡವೇ ಒಂದು ಹಿಂಟ್ ಪೋಸ್ಟರ್ ಬಿಡುಗಡೆ ಮಾಡಿ, ‘ಪೈಲ್ವಾನ್’ ಸಿನಿಮಾ ಆಡಿಯೋವನ್ನು ಸೂಪರ್ ಸ್ಟಾರ್ ಬಿಡುಗಡೆ ಮಾಡುತ್ತಿದ್ದಾರೆ. ಆ ಸೂಪರ್ ಸ್ಟಾರ್ ಯಾರು..? ಎಂದು ಜನರಿಗೆ ಊಹೆ ಮಾಡಲು ತಿಳಿಸಿದೆ.
ಪೈಲ್ವಾನ್ ಹಿಂಟ್ ಪೋಸ್ಟರ್ ನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎನ್ನುವುದು ತಿಳಿಯುತ್ತದೆ. ಹೌದು.. ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೇ ಪೈಲ್ವಾನ್ ಆಡಿಯೋವನ್ನು ಬಿಡುಗಡೆ ಮಾಡಲಿದ್ದು, ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿಯೂ ಆಗಲಿದ್ದಾರೆ. ಚಿತ್ರದುರ್ಗದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ಸರ್ಕಾರಿ ವಿಜ್ಞಾನ ಕಾಲೇಜ್ ಬಿಡಿ ರಸ್ತೆಯಲ್ಲಿ ಕಾರ್ಯಕ್ರಮ ಆಗಸ್ಟ್ 9ರ ಸಂಜೆ 6ಕ್ಕೆ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಅಭಿಮಾನಿಗಳಿಗೂ ಕಾರ್ಯಕ್ರಮ ನೋಡಲು ಅವಕಾಶ ಮಾಡಿಕೊಡಲಾಗಿದೆ.