ಈಗಾಗಲೇ ಥೀಮ್ ಸಾಂಗ್, ರೊಮ್ಯಾಂಟಿಕ್ ಸಾಂಗ್, ಮಾಸ್ ಸಾಂಗ್ ಬಿಡುಗಡೆಗೊಳಿಸಿರುವ ಪೈಲ್ವಾನ್ ಸದ್ಯ ದೊರೆಸಾನಿ ಎನ್ನುವ ಮತ್ತೊಂದು ರೊಮ್ಯಾಂಟಿಕ್ ಸಾಂಗೊಂದನ್ನು ಬಿಡುಗಡೆ ಮಾಡಿದೆ. ‘ಸಾದಾ ಸೀದ ಹೈದಾ ನಿನ್ನ ನೋಡಿ ಬೆಂಡು ಆದ ಮೊದಲ ಬಾರಿ ಕಣ್ಣ ಹೊಡೆದ ನನ್ನ ದೊರಸ್ಸಾನಿ ನೀನೇನೆ.… ಎಂದು ಹಾಡು ಪ್ರಾರಂಭವಾಗಿದ್ದು, ಈ ಹಾಡಿಗೆ ವಿಜಯ್ ಪ್ರಕಾಶ್ ದನಿಯಾಗಿದ್ದಾರೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದು, ವಿ ನಾಗೇಂದ್ರ ಪ್ರಸಾದ ಗೀತ ಸಾಹಿತ್ಯ ಬರೆದಿದ್ದಾರೆ.
ಈ ಹಿಂದೆ ಬಿಡುಗಡೆಯಾಗಿದ್ದ ಕನ್ಮಣಿಯೇ ಹಾಡಿನ ಸಾಹಿತ್ಯವು ಸುದೀಪ್ ಅವರಿಗೆ ಹೇಳಿ ಮಾಡಿಸಿದಂತಿತ್ತು. ಅಲ್ಲದೇ ವಿಡಿಯೋದಲ್ಲಿ ಬಳಸಿರುವ ಕೆಲವೊಂದು ಫೋಟೋಗಳು ಸಹ ಸುದೀಪ್ ಮತ್ತು ಆಕಾಂಕ್ಷ ನಡುವಿನ ರೊಮ್ಯಾನ್ಸಿಗೆ ಸಾಕ್ಷೀಭೂತವಾಗಿತ್ತು. ನಂತರ ಬಿಡುಗಡೆಯಾದ ಬಾರೋ ಪೈಲ್ವಾನ್ ಹಾಡು ಮಾಸ್ ಹೈಕಳಿಗೆ ಮಜ ಕೊಡುವ ಮಟ್ಟಿಗೆ ಕಲರ್ ಫುಲ್ ಹಾಗೂ ಕೇಳಲು ಸಾಕಷ್ಟು ಖುಷಿ ಎನಿಸುವಂತಿತ್ತು. ಈಗ ರಿಲೀಸ್ ಆಗಿರುವ ದೊರೆಸಾನಿ ಹಾಡು ಕೂಡ ವಿಭಿನ್ನವಾಗಿದ್ದು, ಸಿನಿ ಪ್ರೇಮಿಗಳನ್ನು ಮತ್ತದೇ ರೊಮ್ಯಾಂಟಿಕ್ ಮೂಡಿಗೆ ಕರೆದೊಯ್ಯುವಂತಿದೆ. ಹೆಬ್ಬುಲಿ ನಂತರ ಕೃಷ್ಣ ನಿರ್ದೇಶನ ಮಾಡಿ ನಿರ್ಮಾಣ ಮಾಡುತ್ತಿರುವ ಚಿತ್ರ ಇದಾಗಿದ್ದು, ಸುದೀಪ್ ಹಾಗೂ ಆಕಾಂಕ್ಷ ಸಿಂಗ್ ಮುಖ್ಯ ಭೂಮಿಕೆಯಲ್ಲಿ ಪೈಲ್ವಾನ್ ಮೂಡಿಬಂದಿದೆ. ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಂಚಭಾಷೆಗಳಲ್ಲಿ ಪೈಲ್ವಾನ್ ಮುಂದಿನ ಸೆಪ್ಟೆಂಬರ್ 12ರಂದು ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ.