ಪ್ಯಾನ್ ಇಂಡಿಯಾ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಟ್ರೇಲರ್ ಪಂಚಭಾಷೆಗಳಲ್ಲಿ ಬಿಡುಗಡೆಯಾಗಿದೆ. ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಕೆಜಿಎಫ್ ಚಿತ್ರದ ಬಿಗ್ ಸಕ್ಸಸ್ ನಂತರ ಕನ್ನಡದ ಚಿತ್ರಗಳು ಈಗ ಮಾರುಕಟ್ಟೆ ಹಿಗ್ಗಿಸಿಕೊಂಡಿದ್ದು, ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ದಿಟ್ಟತನವನ್ನು ತೋರುತ್ತಿದೆ. ಸುದೀಪ್ ಜೊತೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಕೂಡ ನಟಿಸಿರೋ ‘ಪೈಲ್ವಾನ’ನ ಪವರ್ ಹೇಗಿರುತ್ತೆ ಅನ್ನೋದು ಟ್ರೇಲರ್ ಮೂಲಕ ರಿವೀಲ್ ಆಗಿದ್ದು, ಕಿಚ್ಚನ ಅಭಿಮಾನಿಗಳಲ್ಲಿ ಬಹಳಷ್ಟು ಭರವಸೆ ಮೂಡಿಸಿದೆ. ಸುದೀಪ್ ತಮ್ಮ ಸಿನಿ ಜೀವನದಲ್ಲಿ ನಾಯಕನಾಗಿ ನಟಿಸಿ ಪಂಚಭಾಷೆಗಳಲ್ಲಿ ರಿಲೀಸಾಗುತ್ತಿರುವ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪೈಲ್ವಾನ್ ನಲ್ಲಿ ಕನ್ನಡದ ಕಿಚ್ಚನ ಖಡಕ್ ಪಂಚ್ ನೋಡೋಕೆ ಪರಭಾಷೆಗಳಲ್ಲೂ ಅಭಿಮಾನಿಗಳು ಕಾಯುವಂತಾಗಿದೆ. ಎಲ್ಲ ಅಂದುಕೊಂಡಂತಾದರೆ ಸೆಪ್ಟೆಂಬರ್ 12ಕ್ಕೆ ಐದು ಭಾಷೆಗಳಲ್ಲಿ ‘ಪೈಲ್ವಾನ’ನ ಪವರ್ಫುಲ್ ಪ್ರದರ್ಶನ ಆರಂಭವಾಗಲಿದೆ.