ಇಡೀ ದೇಶ ಕಾತರದಿಂದ ಕಾಯುತ್ತಿದ್ದ ಬಾದ್’ಷಾ ಸುದೀಪ ಅಭಿನಯದ, ಕೃಷ್ಣ ನಿರ್ದೇಶನದ ಪೈಲ್ವಾನ್ ತೆರೆ ಮೇಲೆ ಅಬ್ಬರಿಸಿದ್ದಾನೆ!

ಪೈಲ್ವಾನ್ ಚಿತ್ರದಲ್ಲಿನ ಸುದೀಪ್ ಲುಕ್ಕು ಈ ಹಿಂದೆಯೇ ಭಾರೀ ಸದ್ದು ಮಾಡಿತ್ತು. ಇದು ವಿಶಿಷ್ಟವಾದೊಂದು ಕಥೆ ಹೊಂದಿರೋ ಚಿತ್ರ ಎಂಬ ಸುಳಿವೂ ಜಾಹೀರಾಗಿತ್ತು. ಆದರೀಗ ಇದು ಏಕಕಾಲದಲ್ಲಿಯೇ ಐದು ಭಾಷೆಗಳಲ್ಲಿ ಬಿಡುಗಡೆಗೊಂಡಿದೆ. ಈ ಸಿನಿಮಾದ ಬಗ್ಗೆ ತೀವ್ರ ನಿರೀಕ್ಷೆ ಹುಟ್ಟಲು ಮುಖ್ಯ ಕಾರಣವೊಂದಿತ್ತು. ಅದೇನೆಂದರೆ ಮೊದಲನೇ ಬಾರಿಗೆ ಕಿಚ್ಚ ಸುದೀಪ್ ಅವರು ತಮ್ಮ ದೇಹವನ್ನ ಹುರಿಗೊಳಿಸಿಕೊಂಡು ಕ್ಯಾಮೆರಾ ಮುಂದೆ ಬಂದಿರೋದಲ್ಲದೆ ಅವರು ಕುಸ್ತಿಪಟು ಮತ್ತು ಬಾಕ್ಸಿಂಗ್ ಚಾಂಪಿಯನ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೋದು.

ಓದೋದು ಬಿಟ್ಟು ಬೇರೇನು ಬೇಕಾದರೂ ಮಾಡುತ್ತೀನಿ ಎನ್ನುವ ಅನಾಥ ಹುಡುಗ. ಆತನನ್ನು ಕರೆತಂದು ಗರಡಿ ಮನೆಯಲ್ಲಿ ಮಾತ್ರವಲ್ಲದೆ ಮನಸಿನರಮನೆಯಲ್ಲೂ ದೊಡ್ಡ ಜಾಗ ಕೊಡುವ ಅಪ್ಪನಂತಾ ಸರ್ಕಾರ್. ಕುಸ್ತಿ ಮಾಡಲೆಂದೇ ಹುಟ್ಟಿದವನಂತಿದ್ದ ಕಿಚ್ಚನ ಎದೆಯಲ್ಲಿ ಪ್ರೀತಿಯ ಕಿಚ್ಚು ಹೊತ್ತಿಸುವ ಹುಡುಗಿ. ತೊಡೆ ತಟ್ಟಿದರೆ ಜಗಜಟ್ಟಿ ಮಲ್ಲ ಪ್ರೀತಿಗೆ ಬಿದ್ದಾಗ ಥೇಟು ಹುಚ್ಚ ಅನ್ನೋದು ಚಿತ್ರದ ಮೊದಲ ಭಾಗದಲ್ಲೇ ರುಜುವಾತಾಗುತ್ತದೆ. ಮಾವನ ಶ್ರೀಮಂತಿಕೆ, ಸರ್ಕಾರನ ನಂಬಿಕೆ – ಎರಡನ್ನೂ ಎಡಗಾಲಲ್ಲಿ ಒದ್ದು ನಂಬಿದವಳ ಹೃದಯ ಸಿಂಹಾಸನದಲ್ಲಿ ಪಟ್ಟ ಹಾಕಿ ಕೂರುತ್ತಾನೆ ಪೈಲ್ವಾನ್. ಚಿತ್ತಾನ್ನ ತಿಂದು ಬದುಕಿದರೂ ಬದುಕು ಚೆಂದವಾಗೇ ಇರುತ್ತದೆ. ಈ ನಡುವೆ ಕುಸ್ತಿ ಬಿಟ್ಟು ಕಷ್ಟದ ಬದುಕಿಗೆ ಎದೆಯೊಡ್ಡಿದರೂ ಹಳೇ ದ್ವೇಷ ಬೆನ್ನು ಬೀಳುತ್ತದೆ. ಕಿರಾತಕರ ಕುತ್ತಿಗೆ ಮುರಿಯಲು ಕೊಟ್ಟ ಭಾಷೆ ಅಡ್ಡಿಯಾಗುತ್ತದೆ. ಕಡೆಗೆ ಪಡೆದ ಮಾತಿನ ಕಟ್ಟು ಬಿಡಿಸಲು ಸರ್ಕಾರ್ ಬರುತ್ತಾನಾ? ಕಿಚ್ಚನ ಒಳಗೆ ಸತ್ತು ಮಲಗಿದ ಪೈಲ್ವಾನ್ ಮತ್ತೆ ಮರುಹುಟ್ಟು ಪಡೆಯುತ್ತಾನಾ? ಅನ್ನೋದೆಲ್ಲ ತಿಳಿಯಬೇಕಾದರೆ ಕೊನೇವರೆಗೂ ಪೈಲ್ವಾನನ್ನು ಫಾಲೋ ಮಾಡಬೇಕು.

ಇಲ್ಲಿ ಬರೀ ಕುಸ್ತಿಯ ಅಖಾಡ ಮಾತ್ರವಲ್ಲ ಬಾಕ್ಸಿಂಗ್ ರಿಂಗ್ ಕೂಡಾ ಇದೆ. ಧರ್ಮಕ್ಕಾಗಿ ಕಾದಾಡುವ ಕೃಷ್ಣ ಮತ್ತು ಅಧರ್ಮಕ್ಕಾಗಿ ಗುದ್ದಾಡುವ ಕಂಸನ ನಡುವೆ ಕದನವೇರ್ಪಡುತ್ತದೆ. ಆ ರಣರಂಗದಲ್ಲಿ ಗೆದ್ದು ಬೀಗುವ ಪೈಲ್ವಾನ ಯಾರೆನ್ನೋದು ಚಿತ್ರದ ಅಂತಿಮಗುಟ್ಟು.

ಪೈಲ್ವಾನ್ ಚಿತ್ರದಲ್ಲಿ ಹೊಡೆದಾಟ ಬಡಿದಾಟದ ಜೊತೆಗೆ ಬೀದಿಗೆ ಬಿದ್ದು ದಿಕ್ಕೆಟ್ಟ ಮಕ್ಕಳ ರೋಧನ, ಕಾಡುವ ಪ್ರೀತಿ, ಕಾಯುವ ಬಾಂಧವ್ಯ, ಕ್ರೀಡೆ, ತಮಾಷೆ – ಎಲ್ಲವೂ ಇದೆ.

ನಿರ್ದೇಶಕ ಕೃಷ್ಣ ಕನಸಿಟ್ಟು ಮಾಡಿದ ಕೆಲಸ ಪ್ರತೀ ಫ್ರೇಮಿನಲ್ಲೂ ಎದ್ದು ಕಾಣುತ್ತದೆ. ನಾಲಕ್ಕು ಬಗೆಯ ಗೆಟಪ್ಪಿನಲ್ಲಿ ಕಿಚ್ಚ ಮಿಂಚಿದ್ದಾರೆ. ಸರ್ಕಾರ್ ಪಾತ್ರದಲ್ಲಿ ಸುನೀಲ್ ಶೆಟ್ಟಿ ಸಖತ್ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ಅಪ್ಪಣ್ಣ ನಗಿಸುವಲ್ಲಿ ಗೆದ್ದಿದ್ದಾರೆ. ಶರತ್ ಲೋಹಿತಾಶ್ವ, ಅವಿನಾಶ್ ಚೆಂದಗೆ ನಟಿಸಿದ್ದಾರೆ. ನಾಯಕ ನಟಿ ಆಕಾಂಕ್ಷಾ ಸಿಂಗ್ ಮೋಹಕವಾಗಿ ನಟಿಸಿದ್ದಾರೆ. ಅಲ್ಲಲ್ಲಿ ಚಿತ್ರ ಒಂದಿಷ್ಟು ಎಳೆದಂತೆಯೂ, ಅತಿರಂಜಕವಾಗಿಯೂ ಕಾಣುತ್ತದೆ ಅನ್ನೋದನ್ನು ಬಿಟ್ಟರೆ ಮಿಕ್ಕಂತೆ ತಾಂತ್ರಿಕ ಶ್ರೀಮಂತ್ರಿಕೆಯ ಸಿನಿಮಾ ಇದಾಗಿದೆ. ಛಾಯಾಗ್ರಣ, ಸಂಗೀತ, ಸ್ಪೆಷಲ್ ಎಫೆಕ್ಟ್, ಗ್ರೇಡಿಂಗ್ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಉತ್ಕೃಷ್ಟ ಗುಣಮಟ್ಟ ಕಾಯ್ದುಕೊಂಡಿರುವ ಚಿತ್ರ ಪೈಲ್ವಾನ್; ಅಭಿಮಾನಿಗಳ ಪಾಲಿಗೆ ಜಂಟಲ್ ಮನ್!

CG ARUN

ಎಲ್ಲಿದ್ದೆ ಇಲ್ಲಿತನಕ ಅಂದರು ಅಮ್ಮಂದಿರು!

Previous article

ಬಟರ್‌ಫ್ಲೈ ಪಾರೂಲ್ ಮೂಳೆ ಮುರಿದುಕೊಂಡರು!

Next article

You may also like

Comments

Leave a reply

Your email address will not be published. Required fields are marked *