ತಿಂಗಳುಗಟ್ಟಲೆ ಸ್ಕ್ರಿಪ್ಟು, ಪ್ಲಾನಿಂಗು, ನೂರಾರು ದಿನಗಳ ಚಿತ್ರೀಕರಣ, ವರ್ಷಗಟ್ಟಲೆ ಕೂತು ಸೃಷ್ಟಿಸಿದ ಕೂಸು ಪೈಲ್ವಾನ್! ಕನ್ನಡ ಮಾತ್ರವಲ್ಲದೆ, ಇತರ ಭಾಷೆಗಳಲ್ಲೂ ವ್ಯಾಪಾರ ಮಾಡಿ, ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದೆಂದರೆ ಸುಮ್ಮನೆ ಮಾತಲ್ಲ. ಗಟ್ಟಿ ಗುಂಡಿಗೆ ಇರುವವರು ಮಾತ್ರ ಮಾಡಲು ಸಾಧ್ಯವಾಗುವಂಥಾ ಕೆಲಸ ಇದು. ಯಾವುದೋ ಕಾರ್ಪೊರೇಟ್ ನಿರ್ಮಾಣ ಸಂಸ್ಥೆಯಾದರೆ ಅಲ್ಲಿ ನೂರಾರು ಜನ ಕೆಲಸಗಾರರಿರುತ್ತಾರೆ. ಒಬ್ಬೊಬ್ಬರಿಗೂ ಒಂದೊಂದು ಜವಬ್ದಾರಿ ವಹಿಸಲಾಗಿರುತ್ತದೆ. ಮೇಲಾಗಿ ಅನಾಮತ್ತು ದುಡ್ಡೂ ಇರುತ್ತದೆ.
ಆದರೆ, ಪೈಲ್ವಾನ್ ಥರದ ಸಿನಿಮಾವನ್ನು ನಿರ್ದೇಶಕ ಮತ್ತು ನಿರ್ಮಾಪಕ ಕೃಷ್ಣ ಅವರ ಪತ್ನಿ ಸ್ವಪ್ನ ಕೃಷ್ಣ ಮತ್ತು ಅವರ ಸಹೋದರ ದೇವರಾಜ್ ಮಾತ್ರ ಎಲ್ಲ ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡು ದುಡಿದಿದ್ದರು. ಬೇರೆ ಯಾರಾದರೂ ಆಗಿದ್ದಿದ್ದರೆ ಸೂಪರ್ ಸ್ಟಾರ್ ನಟನ ಕಾಲ್ಶೀಟ್ ಸಿಕ್ಕೇಟಿಗೆ ಸಂತೆ ಹೊತ್ತಿಗೆ ಸೀರೆ ನೇದಂತೆ ಸಿನಿಮಾ ಸುತ್ತಿ ಬಿಸಾಡುತ್ತಿದ್ದರು. “ಹೇಗೂ ಆಗೋ ವ್ಯಾಪಾರ ಆಗೇ ಆಗುತ್ತದೆ. ಸುಮ್ಮನೇ ಯಾಕೆ ಹಣ, ಟೈಮು ಖರ್ಚು ಮಾಡಬೇಕು ಅಂತಾ ಯೋಚಿಸುತ್ತಿದ್ದವರೇ ಹೆಚ್ಚು. ಆದರೆ ಕೃಷ್ಣ ಹಾಗೆ ಯೋಚಿಸುವ ಜಾಯಮಾನದವರಲ್ಲ. ಸಿನಿಮಾವನ್ನು ತುಂಬಾ ಪ್ರೀತಿಸುವ ವ್ಯಕ್ತಿ ಇವರು. ಕೃಷ್ಣ ಸಿನಿಮಾ ವ್ಯಾಮೋಹಿಯಾಗಿರದೇ ಹೋಗಿದ್ದರೆ ಬಹುಶಃ ಮುಂಗಾರು ಮಳೆ ಅಷ್ಟು ಚೆಂದ ಕಾಣುತ್ತಿರಲಿಲ್ಲ. ಗಜಕೇಸರಿ ಜನ್ಮವೆತ್ತುತ್ತಿರಲಿಲ್ಲ. ‘ದುಡ್ಡು, ಸಮಯ ಎಷ್ಟೇ ಆದರೂ ಪರವಾಗಿಲ್ಲ ಪ್ರತೀ ದೃಶ್ಯ ಕೂಡಾ ಅಂದುಕೊಂಡಂತೇ ಬರಬೇಕು ಅನ್ನೋ ಹಠ ಕೃಷ್ಣ ಅವರದ್ದು. ಕೃಷ್ಣರ ಪತ್ನಿ ಸ್ವಪ್ನಾ ಧಾರಾವಾಹಿ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವವರು. ವಾರವಿಡೀ ಅದರ ಸ್ಕ್ರಿಪ್ಟು, ಶೂಟಿಂಗು, ಮೇಮೆಂಟು, ಟಿಆರ್ಪಿ ಅಂಥಾ ಸಾವಿರ ಟೆನ್ಷನ್ ಇರುತ್ತವೆ. ಇದರ ಮಧ್ಯೆ ಪೈಲ್ವಾನ್ಗೂ ಸಮಯ ಕೊಟ್ಟಿದ್ದರು. ಅದೂ ಕೋಟಿಗಟ್ಟಲೇ ಹಣ ಹೊಂದಿಸಿ ತರೋದೆಂದರೆ ತಮಾಷೆಯಾ?
ಇಷ್ಟೆಲ್ಲಾ ಕಷ್ಟಪಟ್ಟು, ಕಟ್ಟಿನಿಲ್ಲಿಸಿದ ಸಿನಿಮಾಗೆ ಪಬ್ಲಿಸಿಟಿ ಮಾಡಿ, ಅದ್ದೂರಿಯಾಗಿ ಬಿಡುಗಡೆಯನ್ನೂ ಮಾಡಿದರು. ಹೊಟ್ಟೆಗೆ ಅನ್ನ ತಿನ್ನದ ತಮಿಳ್ ರಾಕರ್ಸ್ ಮಂದಿ ಒಂದೇ ಏಟಿಗೆ ಅದನ್ನು ಪೈರಸಿ ಮಾಡಿ ಹಂಚಿಬಿಟ್ಟರು. ಆದರೆ ಕಿಚ್ಚನ ಅಭಿಮಾನಿಗಳು, ನಿಯತ್ತಿನ ಸಿನಿಮಾ ಪ್ರೇಕ್ಷಕರು ಕೈ ಬಿಡಲಿಲ್ಲ. ಪೈರಸಿ ಕಾಪಿ ಇಟ್ಟಾಡುತ್ತಿದ್ದರೂ, ಅದರ ಕಡೆ ಗಮನವನ್ನೇ ಕೊಡದೆ ಥಿಯೇಟರಿಗೆ ಬಂದು ಸಿನಿಮಾ ನೋಡಿದರು. ಹಾಗೆಂದು ನಷ್ಟವೇ ಆಗಲಿಲ್ಲ ಅಂತೇನಿಲ್ಲ. ದೊಡ್ಡ ಮಟ್ಟದಲ್ಲಿ ಲಾಭವಾಗಿ ಕೃಷ್ಣ ಮತ್ತವರ ತಂಡದ ಕೈ ಹಿಡಿಯಬೇಕಿದ್ದ ಸಿನಿಮಾ ವ್ಯವಹಾರದ ವಿಚಾರದಲ್ಲಿ ಒಂದಿಷ್ಟು ಹೊಡೆತ ಕೊಟ್ಟಿತು. ಇಷ್ಟೆಲ್ಲಾ ಕಷ್ಟದ ನಡುವೆಯೂ ಪೈಲ್ವಾನ್ ಗೆದ್ದಿದ್ದಾನೆ. ಚಿತ್ರ ಐವತ್ತನೇ ದಿನದತ್ತ ಕಾಲಿಡುತ್ತಿದೆ. ಇವೆಲ್ಲದಕ್ಕೂ ಪ್ರಮುಖ ಕಾರಣವಾದ ಕಿಚ್ಚ ಸುದೀಪ, ಕೃಷ್ಣ, ಸ್ವಪ್ನಾ ಮತ್ತು ಬೆನ್ನಿಗೆ ನಿಂತ ಕಿಚ್ಚನ ಅಭಿಮಾನಿಗಳನ್ನು ನಿಜಕ್ಕೂ ಅಭಿನಂದಿಸಬೇಕು..