ಕಿಚ್ಚಾ ಸುದೀಪ್ ಅಭಿನಯದ ಪೈಲ್ವಾನ್ ಟೀಸರ್ ಈಗ ಟ್ರೆಂಡಿಂಗ್ನಲ್ಲಿದೆ. ಪರಭಾಷಿಗರನ್ನೂ ಸೆಳೆದುಕೊಂಡಿರೋ ಈ ಟೀಸರ್ ನೋಡಿದ ಅನೇಕ ನಟರು ಬೆರಗಾಗಿದ್ದಾರೆ. ಅದಕ್ಕೆ ಕಾರಣವಾಗಿರೋದು ಸುದೀಪ್ ಅವರ ದೇಹ ಸಜ್ಜುಗೊಂಡಿರೋ ರೀತಿ. ಪೈಲ್ವಾನ್ ಚಿತ್ರಕ್ಕಾಗಿ ಸುದೀಪ್ ಎಂಥಾ ಫಿಟ್ನೆಸ್ ವ್ರತ ಕೈಗೊಂಡಿದ್ದರೆಂಬುದಕ್ಕೆ ಟೀಸರ್ನಲ್ಲಿ ಸಾಕ್ಷಿಗಳು ಸಿಕ್ಕಿವೆ. ಇದಕ್ಕಾಗಿ ಎಲ್ಲೆಡೆಯಿಂದ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ.
ಪ್ರತೀ ಚಿತ್ರಗಳಲ್ಲಿಯೂ ಹೇರ್ ಸ್ಟೈಲೂ ಸೇರಿದಂತೆ ಭಿನ್ನವಾದ ಲುಕ್ಕಿನಿಂದ ಕಂಗೊಳಿಸೋದು ಸುದೀಪ್ ಅವರ ಸ್ಪೆಷಾಲಿಟಿ. ಆದರೆ ಈ ವರೆಗೂ ಅವರು ದೇಹವನ್ನು ಹುರಿಗೊಳಿಸಿಕೊಳ್ಳುವಂಥಾ ಸಾಹಸಕ್ಕೆ ಮಾತ್ರ ಕೈ ಹಾಕಿರಲಿಲ್ಲ. ಯಾವತ್ತೂ ಕೂಡಾ ಜಿಮ್ ವರ್ಕೌಟ್ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದ ಸುದೀಪ್ ಕೇವಲ ಒಂಭತ್ತು ತಿಂಗಳಲ್ಲಿ ದೇಹವನ್ನ ಎಲ್ಲರೂ ಅಚ್ಚರಿಗೊಳ್ಳುವಂತೆ ಹುರಿಗೊಳಿಸಿಕೊಂಡಿದ್ದರ ಹಿಂದೆ ನಿಜಕ್ಕೂ ಬೆವರಿನ ಕಥೆಯೊಂದಿದೆ!
ಪೈಲ್ವಾನ್ ಚಿತ್ರಕ್ಕಾಗಿ ಸುದೀಪ್ ಅದು ಹೇಗೆ ದೇಹ ದಂಡನೆ ಮಾಡಿದ್ದರೆಂಬ ವಿಚಾರವನ್ನು ನಿರ್ದೇಶಕ ಕೃಷ್ಣ ಬಿಚ್ಚಿಟ್ಟಿದ್ದಾರೆ. ಈ ಹಿಂದೆ ಹೆಬ್ಬುಲಿ ಮೂಲಕ ಕಿಚ್ಚಾ ಮತ್ತು ಕೃಷ್ಣ ಜೋಡಿ ಗೆದ್ದಿತ್ತು. ಆ ಸಿನಿಮಾದಲ್ಲಿಯೇ ಕೃಷ್ಣ ಸುದೀಪ್ ಅವರನ್ನು ಡಿಫರೆಂಟ್ ಲುಕ್ಕಿನಲ್ಲಿ ಕಂಗೊಳಿಸುವಂತೆ ಮಾಡಿದ್ದರು. ಪೈಲ್ವಾನ್ ಅಚಿತ್ರದ ಕಥೆ ಹೇಳುತ್ತಲೇ ಕೃಷ್ಣ ವರ್ಕೌಟ್ ಮಾಡಲೇ ಬೇಕಾದ ಅನಿವಾರ್ಯತೆಯನ್ನು ಮನವರಿಕೆ ಮಾಡಿದ್ದರಂತೆ. ಅದಕ್ಕೆ ಉತ್ಸಾಹದಿಂದಲೇ ಒಪ್ಪಿಕೊಂಡ ಕಿಚ್ಚ ಖುದ್ದು ನಿರ್ದೇಶಕರೇ ಕಂಗಾಲಾಗುವಂತೆ ದೇಹವನ್ನು ಹುರಿಗೊಳಿಸಿಕೊಂಡಿದ್ದಾರೆ.
ಪೈಲ್ವಾನ್ಗಾಗಿಯೇ ವರ್ಕೌಟ್ ಅಖಾಡಕ್ಕಿಳಿದಿದ್ದ ಸುದೀಪ್ ಅವರಿಗೆ ಜಿಮ್ ಟ್ರೈನರ್ ಆಗಿದ್ದವರು ಜೀತ್. ಒಂಚೂರೂ ಆಚೀಚೆ ಆಗದಂತೆ ಡಯೆಟ್ ಫಾಲೋ ಮಾಡಿದ್ದ ಕಿಚ್ಚ ದಿನಕ್ಕೆ ಇಂತಿಷ್ಟು ಹೊತ್ತು ಅಂತ ನಿರಂತರವಾಗಿ ಬೆವರಿಳಿಸಿದ್ದಾರೆ. ಈ ಹಂತದಲ್ಲಿ ಎಲ್ಲ ಥರದಲ್ಲಿಯೂ ಒತ್ತಡಗಳಿದ್ದರೂ ಕೂಡಾ ಸುದೀಪ್ ಈ ಕಸರತ್ತಿನಿಂದ ಒಂದು ದಿನವೂ ಹಿಂದೆ ಸರಿದಿಲ್ಲವಂತೆ. ಈವತ್ತಿಗೆ ಪೈಲ್ವಾನ್ ಟೀಸರ್ ಈ ಪಾಟಿ ಸದ್ದು ಮಾಡುತ್ತಿರೋದರ ಹಿಂದೆ ಖಂಡಿತವಾಗಿಯೂ ಈ ಬೆವರಿನ ಕಥೆ ಪ್ರಧಾನ ಪಾತ್ರ ವಹಿಸಿದೆ!
#