ಒಂದು ಯಶಸ್ವೀ ಚಿತ್ರ ನೀಡಿದ ಜೋಡಿ ಮತ್ತೆ ಒಂದಾದಾಗ ನಿರೀಕ್ಷೆಗಳು ಗರಿಗೆದರೋದು ಸಹಜ. ಅದರಂತೆಯೇ ರಾಜ ಲವ್ಸ್ ರಾಧೆ ಚಿತ್ರದ ಮೂಲಕ ಗೆಲುವು ದಾಖಲಿಸಿದ್ದ ರಾಜಶೇಖರ್ ಮತ್ತು ವಿಜಯ್ ರಾಘವೇಂದ್ರ ಕಾಂಬಿನೇಷನ್ನಿನ ಎರಡನೇ ಚಿತ್ರ ಪರದೇಸಿ ಕೇರಾಫ್ ಲಂಡನ್ ಬಗ್ಗೆಯೂ ಅಂಥಾದ್ದೇ ಕುತೂಹಲವಿತ್ತು. ಅದೆಲ್ಲವೂ ಈಗ ತಣಿದಿದೆ. ಆರಂಭದಿಂದಲೂ ಸುದ್ದಿಯಲ್ಲಿದ್ದ ಈ ಚಿತ್ರವೀಗ ಅದ್ದೂರಿಯಾಗಿಯೇ ಬಿಡುಗಡೆಗೊಂಡಿದೆ.
ನಿರ್ದೇಶಕ ರಾಜಶೇಖರ್ ಪರದೇಸಿ ಕೇರಾಫ್ ಲಂಡನ್ ಚಿತ್ರವನ್ನು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಆಗಿ ಕಟ್ಟಿ ಕೊಟ್ಟಿದ್ದಾರೆ. ಮಜವಾದೊಂದು ಕಥೆ, ಅದಕ್ಕೆ ತಕ್ಕುದಾದ ಪಾತ್ರಗಳು, ಎಲ್ಲಿಯೂ ಕುತೂಹಲ ಕಳೆದುಕೊಳ್ಳದ ಚುರುಕಿನ ನಿರೂಪಣೆ ಮತ್ತು ಭರ್ಜರಿ ಮನರಂಜನೆ… ಇವಿಷ್ಟೂ ವಿಚಾರಗಳನ್ನು ಹದವಾಗಿ ಬೆರೆಸಿ ಮುದಗೊಳ್ಳುವಂಥಾ ಚಿತ್ರವನ್ನು ರಾಜಶೇಖರ್ ಕಟ್ಟಿ ಕೊಟ್ಟಿದ್ದಾರೆ.
ಜ್ಯೂನಿಯರ್ ಆರ್ಟಿಸ್ಟ್ ರಾಮು ಪಾತ್ರಕ್ಕೆ ವಿಜಯ್ ರಾಘವೇಂದ್ರ ಜೀವ ತುಂಬಿದ್ದಾರೆ. ಅವರ ಗೆಳೆಯನಾಗಿ ಪ್ರಶಾಂತ್ ಸಿದ್ಧಿ ನಟಿಸಿದ್ದಾರೆ. ಈ ರಾಮು ಮತ್ತು ಗೆಳೆಯ ಡಾಬಾದಲ್ಲಿ ಪೊಲಿ ಗ್ಯಾಂಗಿನ ಸೆರೆಯಲ್ಲಿ ನರಳುತ್ತಿರೋ ನಾಯಕಿಯನ್ನು ಬಡಿದಾಡಿ ಬಡಿಸಿಕೊಳ್ಳುವಲ್ಲಿಂದ ಕಥೆ ತೆರೆದುಕೊಳ್ಳುತ್ತೆ. ಆದರೆ ಆ ಬಡಿದಾಟದಲ್ಲಿ ಪೋಲಿಗಳ ಲೀಡರ್‌ಗೆ ಯಾವ ನೆನಪೂ ಉಳಿಯದ ರೇಂಜಿಗೆ ವಾಂಚಿ ಬಿಟ್ಟಿರುತ್ತಾರೆ. ಇದೇ ಹೊತ್ತಲ್ಲಿ ಲಾಯ್ರ್ ಒಬ್ಬನಿಗೂ ಚಮ್ಕಾಯಿಸಿರುತ್ತಾರೆ. ಇದಾದ ನಂತರವೂ ಇವರಿಬ್ಬರು ಅವಕಾಶ ಸಿಕ್ಕಾಗ ಜ್ಯೂನಿಯರ್ ಆರ್ಟಿಸ್ಟ್ ಆಗಿ ಚಿತ್ರೀಕರಣದಲ್ಲಿ ಭಾಗಿಯಾದರೆ ಅತ್ತ ಆ ಪೋಲಿಗಳ ಲೀಡರ್ ಅಣ್ಣ ತನ್ನ ತಮ್ಮನ ನೆನಪಿನ ಶಕ್ತಿಯನ್ನೇ ಕಿತ್ತುಕೊಂಡವರಿಗಾಗಿ ಹುಡುಕಾಟ ಆರಂಭಿಸಿರುತ್ತಾನೆ. ಆ ನಂತರ ಹಲವಾರು ಟ್ವಿಸ್ಟುಗಳೊಂದಿಗೆ ಮುಂದುವರೆಯುತ್ತೆ.
ತಾನು ಹೊಡೆದ ರಾಡಿಯ ಅಣ್ಣ ಅಟ್ಯಾಕ್ ಮಾಡಿದಾಗ ರಾಮು ಮತ್ತವನ ಗೆಳೆಯ ತತ್ತರಿಸಿರುವಾಗಲೇ ತಾವೇ ರಕ್ಷಿಸಿದ ಹುಡುಗಿಯ ಎಂಟ್ರಿ. ಅನಿರೀಕ್ಷಿತ ಭೇಟಿ. ತನ್ನನ್ನು ರಕ್ಷಿಸಿದ ಕೃತಜ್ಞತೆಗಾಗಿ ಆಕೆ ಇವರಿಗೆ ತನ್ನದೇ ಮನೆಯಲ್ಲಿ ಠಾವು ಕೊಡುತ್ತಾಳೆ. ಆದರೆ ಅಲ್ಲೂ ಒಂದು ಫಜೀತಿ. ಅದಾಗಲೇ ಚಮ್ಕಾಯಿಸಿದ್ದ ಲಾಯರ್ ಈ ಹುಡುಗಿಯ ಅಪ್ಪನೆಂಬೋ ಮರ್ಮಾಘಾತ. ಆದರೆ ಲಾಯರ್ ರಾಮುವನ್ನು ಕ್ಷಮಿಸೋದರೊಂದಿಗೆ ಒಂದು ಜವಾಬ್ದಾರಿಯನ್ನೇ ಹೆಗಲಿಗೆ ಹಾಕುತ್ತಾನೆ. ಅದು ಶಿವಪುರ ಗ್ರಾಮ ಪಂಚಾಯ್ತಿ ಸದಸ್ಯ ಕೆಂಚೇಗೌಡನಿಗೆ ಲಂಡನ್ನಿನಿಂದ ಬಂದ ಆತನ ತಂಗಿ ಮಗ ವಿಜಯ್ ಅಂತ ಸುಳ್ಳು ಹೇಳಿ, ಆತನ ಮನೆ ಸೇರಿಕೊಳ್ಳೋ ಟಾಸ್ಕು!
ಲಾಯರ್ ಹಾಗೊಂದು ಜವಾಬ್ದಾರಿಯನ್ನ ರಾಮುಗೆ ವಹಿಸಿದ್ದೇಕೆ? ಅದರ ಹಿಂದಿರೋ ಮರ್ಮವೇನು. ಸುಳ್ಳು ಹೇಳಿದ್ದಲ್ಲದೇ ಕೆಂಚೇಗೌಡನ ಮಗಳೊಂದಿಗೇ ಲವ್ವಲ್ಲಿ ಬಳೋ ನಾಯಕ ಅದೆಲ್ಲವನ್ನು ದಕ್ಕಿಸಿಕೊಳ್ಳುತ್ತಾನಾ ಎಂಬುದೆಲ್ಲ ಅಸಲೀ ಕುತೂಹಲ. ಅದನ್ನು ನಾನಾ ಟ್ವಿಸ್ಟುಗಳೊಂದಿಗೆ ರೋಚಕವಾಗಿಯೇ ರಾಜಶೇಖರ್ ತೆರೆದಿಟ್ಟಿದ್ದಾರೆ.
ವಿಜಯ್ ರಾಘವೇಂದ್ರ ಈ ಪಾತ್ರದಲ್ಲಿ ಬೇರೆಯದ್ದೇ ಶೇಡಿನಲ್ಲಿ ಪ್ರೇಕ್ಷಕರನ್ನು ತಲುಪಿಕೊಂಡಿದ್ದಾರೆ. ಅವರದ್ದು ತನ್ಮಯರಾದಂಥಾ ನಟನೆ. ಇನ್ನುಳಿದಂತೆ ಪ್ರಶಾಂತ್ ಸಿದ್ಧಿ, ರಂಗಾಯಣ ರಘು, ಶೋಭರಾಜ್ ಸೇರಿದಂತೆ ಎಲ್ಲರೂ ತಂತಮ್ಮ ಪಾತ್ರಗಳನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಸಂಗೀತ, ಛಾಯಾಗ್ರಹಣ ಸೇರಿದಂತೆ ಎಲ್ಲವೂ ಕಥೆಗೆ ಪೂರಕವಾಗಿವೆ.
#
No Comment! Be the first one.