ಹಿಂದೆ ನೀರ್ ದೋಸೆ ಸಿನಿಮಾವನ್ನು ನಿರ್ಮಿಸಿದ್ದ ಪ್ರಸನ್ನ ಮತ್ತು ನಿರ್ದೇಶಕ ವಿಜಯ ಪ್ರಸಾದ್ ಮತ್ತೆ ಒಟ್ಟು ಸೇರಿದ್ದಾರೆ. ನೀರ್ ದೋಸೆ ಅನ್ನೋ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಎಬ್ಬಿಸಿದ್ದ ಘಾಟು ಆಗ ಜೋರಾಗೇ ಇತ್ತು. ರಮ್ಯಾ, ಜಗ್ಗೇಶ್, ಹರಿಪ್ರಿಯಾ, ಶೂಟಿಂಗು, ರೀ ಶೂಟು, ಕೋರ್ಟು, ಕೇಸು, ಕಿರಿಕ್ಕು ಹೀಗೆ ವರ್ಷಗಟ್ಟಲೆ ಸುದ್ದಿಯಲ್ಲಿದ್ದ ಸಿನಿಮಾ ನೀರ್ ದೋಸೆ. ಈ ಚಿತ್ರದ ಗೆಲುವಿನ ನಂತರ ಒಂದೆರಡು ವರ್ಷ ಅವರವರ ಪಾಡಿಗಿದ್ದ ಚಿತ್ರತಂಡ ಈಗ ಮತ್ತೆ ಒಂದಾಗಿದೆ.
ನಿರ್ದೇಶಕ ವಿಜಯ ಪ್ರಸಾದ್, ನಿರ್ಮಾಪಕ ಪ್ರಸನ್ನ, ಸಂಗೀತ ನಿರ್ದೇಶಕ ಅನುಪ್ ಸಿಳೀನ್, ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ, ಛಾಯಾಗ್ರಾಹಕ ನಿರಂಜನ್ ಬಾಬು, ಸಂಕಲನಕಾರ ಸುರೇಶ್ ಅರಸ್ ಹೀಗೆ ತಂತ್ರಜ್ಞರು ಮತ್ತು ನಿರ್ಮಾಪಕರು ಒಂದಾಗಿ ‘ಪರಿಮಳ ಲಾಡ್ಜ್-ರೂಂ ನಂಬರ್ 231’ ಎನ್ನುವ ಸಿನಿಮಾ ಆರಂಭಿಸಿದ್ದಾರೆ. ಅಭಿನಯ ಚತುರ ನೀನಾಸಂ ಸತೀಶ್ ಮತ್ತು ಲೂಸ್ ಮಾದ ಯೋಗಿ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
“ಲಾಡ್ಜ್ ಅನ್ನೋ ಪದ ಕಿವಿಗೆ ಬಿದ್ದ ಕೂಡಲೇ ಅದು ‘ಅನೈತಿಕ ತಾಣ’ ಅನ್ನೋ ಭಾವ ಜನರ ಮನಸ್ಸಿನಲ್ಲಿ ಸರಿದುಹೋಗುತ್ತದೆ. ಆದರೆ ಲಾಡ್ಜಿನ ಪ್ರತೀ ಲಾಡ್ಜಿಗೂ ಒಂದು ಕತೆ ಇರುತ್ತದೆ, ಅದಕ್ಕೊಂದು ಬದುಕಿರುತ್ತದೆ. ಅದನ್ನು ಇಲ್ಲಿ ಮನರಂಜನೆಯ ಮೂಲಕ ಹೇಳಹೊರಟಿದ್ದೇನೆ. ಈ ಚಿತ್ರದಲ್ಲಿ ಒಂಭತ್ತು ಪ್ರಮುಖ ಪಾತ್ರಗಳಿವೆ. ದಸರಾಗೆ ಟ್ರೇಲರ್ ಬರಲಿದೆ. ಇನ್ನೂ ಒಂದಿಷ್ಟು ಬರವಣಿಗೆಯ ಕೆಲಸ ಕೂಡಾ ಬಾಕಿ ಇದೆ. ಇಬ್ಬರು ನಾಯಕಿಯರ ಆಯ್ಕೆ ಪ್ರಕ್ರಿಯೆಯಲ್ಲಿದೆ’ ಅನ್ನೋದು ನಿರ್ದೇಶಕ ವಿಜಯ ಪ್ರಸಾದ್ ಅವರ ವಿವರಣೆ.
ಈ ಚಿತ್ರದ ಫಸ್ಟ್ ಲುಕ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು.
ಲಾಡ್ಜ್’ನಲ್ಲಿ ಕಾಚ ತೋರ್ಸಿ ಕತೆ ಮಾಡ್ದವ್ರು-ವಿಜಯ ಪ್ರಕಾಶ್, ಕಾಸ್ ಬದಲು ಕಾಂಡೋಮ್ ಇಡ್ಕಂಡವ್ರು-ಪ್ರಸನ್ನ, ಲಾಡ್ಜ್ ನಲ್ಲಿ ಲಾಡಿ ಜೊತೆ ರಾಗ ಎಳೆದವ್ರು, ತೊಡೆ ನೋಡಿ ತೋಪ್ಡಾ ಹೊಡ್ದವ್ರು, ಬ್ಲೂ ಫಿಲಂ ಕಟ್ ಮಾಡಿದವ್ರು…. ಹೀಗೆ ಚಿತ್ರದ ಟೀಸರ್ ನಲ್ಲಿ ಇದುವರೆಗೂ ಯಾರೂ ಬಳಸದ ಸಾಲುಗಳನ್ನು ಬಳಸಲಾಗಿದೆ. ಸಾಮಾನ್ಯಕ್ಕೆ ನಾವು ಹೊಸ ಥರದ ಸಿನಿಮಾ ಮಾಡ್ತೀವಿ ಅನ್ನೋದು ಸಿನಿಮಾ ಮಂದಿಯ ಮಾತಾಗಿರುತ್ತದೆ. ಈ ಚಿತ್ರದ ಟೀಸರ್ ನೋಡಿದರೆ ಇದು ನಿಜಕ್ಕೂ ಹೊಸ ಬಗೆಯ ಸಿನಿಮಾ ಅನ್ನೋದು ಗೊತ್ತಾಗುವಂತಿದೆ. ಈ ಟೀಸರ್ ಬಿಡುಗಡೆ ಮಾಡಿ, ನಂತರ ಸ್ವತಃ ನೋಡಿ ನಕ್ಕು ನಲಿದ ದರ್ಶನ್ ಮಾತಾಡುತ್ತಾ “ಹೊಸ ಬಗೆಯ ಸಿನಿಮಾಗಳನ್ನು ಮಾಡುತ್ತಿರುವ ನೀನಾಸಂ ಸತೀಶ್ ಮತ್ತು ಯೋಗಿ ಸೇರಿದಂತೆ ಚಿತ್ರತಂಡಕ್ಕೆ ಒಳಿತಾಗಲಿ ” ಎಂದು ಹರಸಿದರು.