ಈಗಷ್ಟೇ ರಿಲೀಸಾಗಿರುವ ಮಾಸ್ಟರ್‌ ಸೇರಿದಂತೆ, ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹೀರೋ ವಿಜಯ್‌ ಸೇತುಪತಿ. ಅವರು ಬೆಳೆದುಬಂದ ಬಗೆ, ಅವರ ಲೈಫ್‌ ಜರ್ನಿಯನ್ನು ಪರಿಚಯಿಸುವ ಪ್ರಯತ್ನ ಇದು…

ವಿಜಯ ಗುರುನಾಥ ಸೇತುಪತಿ. ಇದು ತಮಿಳು ನಾಡಿನ ಇತಿಹಾಸದಲ್ಲಿ ವೈಭವದಿಂದ ಮೆರೆದ ರಾಜನೊಬ್ಬನ ಹೆಸರು. ತಮ್ಮ ಮಗ ಕೂಡಾ ಈ ರಾಜನಂತೆಯೇ ಬದುಕಿಬಾಳಬೇಕು ಅಂತಾ ಬಯಸಿ ಅವರಪ್ಪ ಇಟ್ಟ ಹೆಸರದು. ಆದರೆ ವಿಜಯ್ ಸೇತುಪತಿಗೆ ವೈಭೋಗ ಅಷ್ಟು ಸುಲಭಕ್ಕಾಗಲಿ, ಸಲೀಸಾಗಾಗಲಿ ದಕ್ಕಲಿಲ್ಲ.

1978ರ ಜನವರಿ ಹದಿನಾರರಂದು ತಮಿಳುನಾಡಿನ ವಿರುದನಗರ ಜಿಲ್ಲೆಯ ರಾಜಪಾಳ್ಯಂನಲ್ಲಿ ಹುಟ್ಟಿದವರು ವಿಜಯ್ ಸೇತುಪತಿ. ಆರನೇ ಕ್ಲಾಸಿನಲ್ಲಿ ಓದುವ ಹೊತ್ತಿಗೆ ಹೆತ್ತವರೊಂದಿಗೆ ಚೆನ್ನೈ ಸೇರಿದರು. ಕೋಡಂಬಾಕ್ಕಂನಲ್ಲಿನ ಎಂ.ಜಿ.ಆರ್. ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಯಿತು. ಫಾಸ್ಟ್ ಫುಡ್, ಸೇಲ್ಸ್ ಮನ್, ಕ್ಯಾಷಿಯರ್, ಟೆಲಿಫೋನ್ ಬೂತ್ ಸೇರಿದಂತೆ ಹೈಸ್ಕೂಲಿನಲ್ಲಿರುವಾಗಲೇ ಓದುವುದರ ಜೊತೆಗೆ ಪಾರ್ಟ್ ಟೈಂ ಉದ್ಯೋಗವನ್ನೂ ಮಾಡುತ್ತಾ ಬರುತ್ತಾರೆ. ಓಹೋ ಅನ್ನುವಂತಾ ವಿದ್ಯಾರ್ಥಿಯಲ್ಲದಿದ್ದರೂ ಸುಮಾರಾಗಿ ಓದುತ್ತಿದ್ದ ವಿಜಯ್ ಸೇತುಪತಿ ಜೈನ್ ಯೂನಿವರ್ಸಿಟಿಯಲ್ಲಿ ಬಿಕಾಂ ಮುಗಿಸುತ್ತಾರೆ. ಮನೆಯಲ್ಲಿ ಒಬ್ಬ ಅಣ್ಣ, ಒಬ್ಬ ತಮ್ಮ, ಜೊತೆಗೊಬ್ಬಳು ತಂಗಿ ಇರುತ್ತಾರೆ.

ಓದು ಮುಗಿಸಿದ ವಿಜಯ್ ಸಿಮೆಂಟ್ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರುತ್ತಾರೆ. ಬರೋ ಸಂಬಳ ಯಾವುದಕ್ಕೂ ಎಟಕೋದಿಲ್ಲ ಅಂತಾ ಗೊತ್ತಾಗುವುದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಬದುಕು ಮತ್ತೊಂದು ಹಂತ ಮುಟ್ಟಬೇಕೆಂದರೆ ಈ ಸಂಪಾದನೆಯಿಂದ ಸಾಧ್ಯವೇ ಇಲ್ಲ ಅನ್ನೋದನ್ನು ಅರಿತ ವಿಜಯ್ ದೃಢವಾದ ನಿರ್ಧಾರಕ್ಕೆ ಬರುತ್ತಾರೆ. ಅದೇನೆಂದರೆ, ದೂರದ ದುಬೈ ದೇಶಕ್ಕೆ ಹೋಗಿ ಒಂದಷ್ಟು ವರ್ಷಗಳ ಕಾಲ ಕೆಲಸ ಮಾಡುವುದು. ಕೈತುಂಬ ಕಾಸು ಬಂದು, ಮನೆಯ ಪರಿಸ್ಥಿತಿ ಬದಲಾದಮೇಲೆ ತಾಯ್ನಾಡಿಗೆ ಮರಳೋದು ಅಂತ. ರೂಪಿಸಿದ ಪ್ಲಾನಿನಂತೇ ದುಬೈಗೆ ಹೋಗುತ್ತಾರೆ. ಚೆನ್ನೈನಲ್ಲಿ ಸಿಗುತ್ತಿದ್ದ ಸಿಮೆಂಟ್ ಕಂಪನಿ ಸಂಬಳಕ್ಕಿಂತಾ ನಾಲ್ಕು ಪಟ್ಟು ಹೆಚ್ಚು ಪಗಾರವೂ ಸಿಗುತ್ತದೆ. ದುಡಿದ ದುಡ್ಡನ್ನು ಮನೆಯವರಿಗೆ ಕಳಿಸಿಕೊಂಡು, ಒಂದಿಷ್ಟು ನೆಮ್ಮದಿಯೆನಿಸುವಂತಾ ಬದುಕು ರೂಪಿಸಿಕೊಳ್ಳುತ್ತಾರೆ. ಆ ಹೊತ್ತಿಗೇ ಎದೆಯೊಳಗೆ ಪ್ರೀತಿ ಅರಳಲು ಶುರುವಾಗುತ್ತದೆ.ಜೆಸ್ಸಿಯೊಂದಿಗೆ ಪ್ರೀತಿ ಮೊಳೆಯುತ್ತಿದ್ದ ಹೊತ್ತಿಗೇ ತನ್ನೊಳಗಿದ್ದ ದೈತ್ಯ ಕಲಾವಿದ ಎದ್ದೆದ್ದು ಎದೆಗೆ ಒದೆಯಲು ಶುರು ಮಾಡುತ್ತಾನೆ.

ಬರಿಯ ದುಡ್ಡಿಗೋಸ್ಕರ ತನ್ನವರು, ತನ್ನದು ಅನ್ನೋದೆಲ್ಲವನ್ನೂ ತೊರೆದು ಬಂದಿದ್ದೀಯಲ್ಲಾ? ಕಾಸು ಎಣಿಸೋದೊಂದೇ ಬದುಕಿನಾ ಗುರಿಯಾ ಅಂತಾ ವಿಜಯ್ ಸೇತುಪತಿಯೊಳಗಿನ ಪ್ರತಿಭಾವಂತ ಪ್ರಶ್ನಿಸಲು ಶುರು ಮಾಡುತ್ತಾನೆ.  ಅಂದುಕೊಂಡೇಟಿಗೆ ಹೇಗೆ ದುಬೈಗೆ ಹೊರಟು ನಿಂತರೋ, ಮತ್ತೆ ಗಂಟುಮೂಟೆ ಕಟ್ಟಿಕೊಂಡು ಅದೇ ಸ್ಪೀಡಿನಲ್ಲಿ ಭಾರತಕ್ಕೆ ಬಂದಿಳಿದಿದ್ದರು. ಹಾಗೆ 2003ರಲ್ಲಿ ಬಂದವರು ಮಾಡಿದ ಮೊದಲ ಕೆಲಸ ಪ್ರೀತಿಸಿದ ಹುಡುಗಿಯನ್ನು ವರಿಸಿದ್ದು. ದುಬೈನಲ್ಲಿ ಕೈ ತುಂಬ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟುಬಂದಿದ್ದ ವಿಜಯ್ ಸೇತುಪತಿಗೆ ಅದಾಗಲೇ ಇದ್ದ ದೊಡ್ಡ ಸಂಸಾರದ ಜೊತೆಗೆ ಹೆಂಡತಿಯೂ ಜೊತೆಯಾದಳು. ಜವಾಬ್ದಾರಿ ಮತ್ತೂ ಹೆಚ್ಚಿತ್ತು. ಸಂಪಾದನೆಗಾಗಿ ಏನಾದರೂ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ದುಬೈನಿಂದ ಉಳಿಸಿಕೊಂಡುಬಂದಿದ್ದ ದುಡ್ಡನ್ನು ಜೋಡಿಸಿಟ್ಟುಕೊಂಡು, ಇಂಟೀರಿಯರ್ ಡಿಸೈನರ್ ಕೆಲಸ ಶುರು ಮಾಡುತ್ತಾರೆ. ಅಷ್ಟಿಷ್ಟು ಕೈಹಿಡಿಯುತ್ತದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ರೆಡಿಮೇಡ್ ಕಿಚನ್’ ಎನ್ನುವ ಕಾನ್ಸೆಪ್ಟೊಂದನ್ನು ಆರಂಭಿಸುತ್ತಾರೆ. ಅದೂ ಕೂಡಾ ಒಳ್ಳೆಯ ವರಮಾನವನ್ನೇ ತಂದುಕೊಡುತ್ತದೆ. ಆರಂಭಿಸಿದ ಬ್ಯುಸಿನೆಸ್ಸು ಬದುಕನ್ನು ಹಸನು ಮಾಡುತ್ತದೆ. ಆದರೆ ಮನಸ್ಸಿನಲ್ಲಿದ್ದ ಕಲಾವಿದ ಸುಮ್ಮನೇ ಬಿಡುತ್ತಾನಾ? ಮತ್ತೆ ಒದೆತ ಶುರು ಮಾಡುತ್ತಾನೆ! ‘ಇಷ್ಟೇನಾ ಲೈಫು? ಹಣ ಸಂಪಾದಿಸಿದರೆ ಮುಗಿದುಹೋಯ್ತಾ?’ ಅಂತಾ ಮನಸ್ಸೊಳಗೆ ಹೇಳಿಕೊಳ್ಳಲಾರದಂಥಾ ಚಳುಕು ಶುರುವಾಗುತ್ತದೆ. ಅದೇ ಟೈಮಲ್ಲಿ ಕೂತುಪಟ್ರೈ ಎನ್ನುವ ನಟನಾ ಶಾಲೆಯೊಂದು ವಿಜಯ್ ಸೇತುಪತಿಯ ಕಣ್ಣಿಗೆ ಬೀಳುತ್ತದೆ. ಕರ್ನಾಟಕದಲ್ಲಿ ಅಭಿನಯ ತರಂಗ, ನೀಸಾಸಂಗಳೆಲ್ಲಾ ಇವೆಯಲ್ಲಾ? ಅದೇ ಥರ ಅಲ್ಲಿ ನಟರನ್ನು ರೆಡಿ ಮಾಡಿ ಕಳಿಸುವ ಪುಣ್ಯ ಸ್ಥಳವದು.

ಕೂತುಪಟ್ರೈ ಹೊಸ ಬ್ಯಾಚ್ ಆರಂಭವಾಗುವುದಾಗಿ ಪೋಸ್ಟರ್ ನೋಡಿದ ಸೇತುಪತಿಗೆ ಅದ್ಯಾವತ್ತೋ ಒಂದು ದಿನ ಹಿರಿಯ ನಿರ್ದೇಶಕಲ ಬಾಲು ಮಹೇಂದ್ರ ‘ಲೇ… ನೀನು ಕಪ್ಪಗಿದ್ರೂ ಒಂಥರಾ ಚನಾಗಿದ್ಯಾ ಕಣೋ.. ನಿನ್ನದು ಫೋಟೋ ಜೆನಿಕ್ ಫೇಸು. ಪ್ರಯತ್ನಪಟ್ಟರೆ ನೀನೊಬ್ಬ ನಟನಾಗಬಹುದು’ಅಂದಿದ್ದು ಮತ್ತೆ ನೆನಪಾಗಿಬಿಡುತ್ತದೆ.  ಆಕೂಡಲೇ ವಿಜಯ್ ಸೇತುಪತಿ ಹೋಗಿ ಕೂತುಪಟ್ರೈ ಶಾಲೆಗೆ ಸೇರುತ್ತಾರೆ. ಕೋರ್ಸು ಯಶಸ್ವಿಯಾಗಿ ಮುಗಿಯುತ್ತದೆ. ಅದೇ ಹೊತ್ತಿಗೆ ನಿರ್ದೇಶಕ ಸೆಲ್ವರಾಘವನ್ ಧನುಷ್ ನಟನೆಯ ‘ಪುದುಪೇಟ್ಟೈ’ ಸಿನಿಮಾದ ಆಡಿಷನ್ನು ಕರೆದಿರುತ್ತಾರೆ.

ಆ ಆಡಿಷನ್ ಅಟೆಂಡ್ ಮಾಡಿದ ವಿಜಯ್ ಸೇತುಪತಿಗೆ ತೀರಾ ಸಣ್ಣದೊಂದು ಪಾತ್ರ ಕೂಡಾ ದೊರಕುತ್ತದೆ. ಹೀರೋ ಧನುಷ್ ಹಿಂದೆ ನಿಂತು ಸಣ್ಣಪುಟ್ಟ ಡೈಲಾಗು ಹೇಳುವ ರೋಲದು. ಆ ಸಿನಿಮಾದ ನಂತರ ಧಾರಾವಾಹಿಗಳಲ್ಲಿ ಅಲ್ಲೊಂದು ಇಲ್ಲೊಂದು ಪಾತ್ರಗಳು ಸಿಗಲಾರಂಭಿಸಿದವು. ಸಿಕ್ಕ ಯಾವ ಪಾತ್ರವನ್ನೂ ಬೇಡ ಅನ್ನದ ಈತ ಪಾಲಿಗೆ ಬಂದದ್ದೆಲ್ಲವನ್ನೂ ಕಣ್ಣಿಗೊತ್ತಿಕೊಂಡು ತನ್ಮಯತೆಯಿಂದ ನಟಿಸತ್ತಾ ಬಂದರು.

ನಿರ್ದೇಶಕ ಪ್ರಭು ಸಾಲೋಮನ್ ಪರಿಚಯವಾಯಿತು. ಕನ್ನಡದಲ್ಲಿ ರವಿಚಂದ್ರನ್ ನಟನೆಯ ಉಸಿರೇ ಸಿನಿಮಾವನ್ನು ನಿರ್ದೇಶಿಸಿದ್ದರಲ್ಲಾ ಅದೇ ಪ್ರಭು ಸಾಲೋಮನ್ ಇವರು. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಶೈಲೂ ಸಿನಿಮಾದ ಮೂಲ ಚಿತ್ರವಾದ ಮೈನಾ ಸೇರಿದಂತೆ ಪ್ರಭು ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇಂಥಾ ಪ್ರಭು ನಿರ್ದೇಶನದ ಲೀ ಎನ್ನುವ ಸಿನಿಮಾದಲ್ಲಿ ವಿಜಯ್ ಸೇತುಪತಿಗೆ ಚೆಂದದ್ದೊಂದು ಪಾತ್ರ ಸಿಕ್ಕಿತ್ತು. ಆ ಮೂಲಕ ಕನ್ನಡದಿಂದ ತಮಿಳೆಗೆ ಹೋಗಿ ನಟ ಕಿಶೋರ್ ನಟಿಸಿದ ಮೊದಲ ಸಿನಿಮಾ ವೆನಿಲಾ ಕಬಡಿ ಕುಳು ಚಿತ್ರದಲ್ಲೂ ವಿಜಯ್ ಸೇತುಪತಿಗೆ ಛಾನ್ಸು ಗಿಟ್ಟಿತು. ಆ ನಂತರ ಸುಸೀಂದ್ರನ್ ನಿರ್ದೇಶನದ ಮುಂದಿನ ಸಿನಿಮಾ ನಾನ್ ಮಹಾನ್ ಅಲ್ಲ ಚಿತ್ರದಲ್ಲೂ ನಟಿಸುವ ಅವಕಾಶವಾಯಿತು. ಇಷ್ಟೆಲ್ಲಾ ಆಗುವ ಹೊತ್ತಿಗೆ ಈ ಯುವಕನಲ್ಲಿ ಏನೋ ಶಕ್ತಿ ಇದೆ ಅಂತಾ ತಮಿಳಿನ ಹೊಸ ನಿರ್ದೇಶಕರಿಗೆ ಅನ್ನಿಸಲು ಶುರುವಾಗಿತ್ತು.

2003ರಲ್ಲಿ ದುಬೈನಿಂದ ಬಂದನಂತರ, ಒಂದೆರಡು ವರ್ಷಗಳ ಕಾಲ ಇಂಟೀರಿಯರ್ರು, ಕಿಚನ್ನು ಅಂತಾ ವ್ಯಾಪಾರ ಮಾಡಿ, ಅದಾದ ನಂತರ ಸೀರಿಯಲ್ ಮತ್ತು ಸಿನಿಮಾ ರಂಗದಲ್ಲಿ ಭರ್ತಿ ಐದು ವರ್ಷ ಸೈಕಲ್ಲು ಹೊಡೆದಿದ್ದ ವಿಜಯ್ ಸೇತುಪತಿಗೆ ನಾನೊಬ್ಬ ಹೀರೋ ಆಗಬೇಕು ಅನ್ನೋ ಬಯಕೆಯಿತ್ತು. ಒಂದಷ್ಟು ಜನ ಹೀರೋ ಮಾಡ್ತೀನಿ ಅಂತಾ ಅಲೆಸಿ ಪಾದ ಸವೆಸಿದ್ದರು. ಕಥೆ ಹೇಳೋದಿಲ್ಲ, ಪೇಮೆಂಟೂ ಕೊಡಲ್ಲ ಬಂದು ನಟಿಸೋದಿದ್ದರೆ ಹೇಳು ಅಂದವರೂ ಇದ್ದರು. ಇನ್ನು ಕೆಲವರು ನೀನು ಹೀರೋ ಮೆಟೀರಿಯಲ್ಲೇ ಅಲ್ಲ. ಯಾವುದಾದರೂ ಪೋಷಕಪಾತ್ರಗಳಿಗಷ್ಟೇ ನೀನು ಸೆಟ್ಟಾಗೋದು ಅಂತಲೂ ಅಂದು ಕಳಿಸಿದ್ದರು.

ಬದುಕಿಗಾಗಿ ನಟನೆಯನ್ನು ಆಯ್ಕೆ ಮಾಡಿಕೊಂಡಾಗಿತ್ತಲ್ಲಾ? ಮತ್ತೆ ಹೊಸ ಉದ್ಯೋಗ,  ವ್ಯಾಪಾರ ಅಂತಾ ಚಿಂತಿಸುವ ಮನಸ್ಸೂ ಇರಲಿಲ್ಲ. ವಯಸ್ಸು ಮೂವತ್ತಾಗೋ ಹೊತ್ತಿಗೇ ತಲೆಕೂದಲು, ಕೆನ್ನೆ ತುಂಬಾ ಹರಡಿಕೊಂಡಿದ್ದ ಗಡ್ಡ ಬೆಳ್ಳಗಾಗಿದ್ದವು. ಚನ್ನಾಗಿ ತಿಂದು ದೇಹ ಬೆಳೆಸಿಕೊಂಡರೆ, ಅಣ್ಣ, ಅಪ್ಪ ಅಂತಾ ವಯಸ್ಸಿಗೆ ಮೀರಿದ ಪಾತ್ರಗಳನ್ನು ಪಡೆದು ನಟಿಸಿದರಾಯ್ತು ಅಂತಾ ಮಾನಸಿಕವಾಗಿ ಸಿದ್ದಗೊಂಡಿದ್ದರು ವಿಜಯ್ ಸೇತುಪತಿ. ಆ ಸಂದರ್ಭದಲ್ಲೇ ನಿರ್ದೇಶಕ ಸೀನು ರಾಮಸ್ವಾಮಿ ತಮ್ಮ ಎರಡನೇ ಚಿತ್ರಕ್ಕೆ ಹೊಸ ಮುಖಕ್ಕಾಗಿ ಹುಡುಕಾಟ ನಡೆಸಿದ್ದರು. ಅದೊಂದು ದಿನ ಕರೆ ಮಾಡಿ ನನ್ನ ಸಿನಿಮಾದಲ್ಲಿ ಹಳ್ಳಿ ಹುಡುಗನ ಪಾತ್ರದಲ್ಲಿ ನಟಿಸುತ್ತೀಯಾ ಅಂತಾ ಕೇಳಿದ್ದರು. ತಕ್ಷಣವೇ ಒಪ್ಪಿಕೊಂಡ ವಿಜಯ್ ಪರಿಪೂರ್ಣವಾಗಿ ತೊಡಗಿಸಿಕೊಂಡು ಪಾತ್ರ ನಿರ್ವಹಿಸಿದರು. ‘ತೇನ್ ಮೆರುಕು ಪರ್ವಕಾಟ್ರು’ ಹೆಸರಿನ ಸಿನಿಮಾ ಬಿಡುಗಡೆಯಾಯಿತು. ಅತ್ಯುತ್ತಮ ಚಿತ್ರವೆಂದು ರಾಷ್ಟ್ರಪ್ರಶಸ್ತಿಯ ಸಮೇತ ಸಾಕಷ್ಟು ಅವಾರ್ಡುಗಳನ್ನು ಗೆದ್ದುಕೊಂಡಿತು. ಹೀರೋ ಆಗಿ ನಟಿಸಿದ ಮೊದಲ ಸಿನಿಮಾವೇ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುವಂತಾಯಿತು.

ಆ ಸಂದರ್ಭದಲ್ಲಿ ತಮಿಳಿನ ಈಗಿನ ಸ್ಟಾರ್ ನಿರ್ದೇಶಕರೆಲ್ಲಾ ಶಾರ್ಟ್ ಮೂವಿಗಳನ್ನು ರೂಪಿಸುತ್ತಿದ್ದರು. ಯುವ ನಿರ್ದೇಶಕರಿಗಾಗಿಯೇ ‘ನಾಳೆಯ ಇಯಕ್ಕುನರ್’ (ನಾಳಿನ ನಿರ್ದೇಶಕರು) ಎನ್ನುವ ಕಾರ್ಯಕ್ರಮವೊಂದು ವಿಜಯ್ ಟೀವಿಯಲ್ಲಿ ಪ್ರಸಾರವಾಗುತ್ತಿತ್ತು. ಅಂತಾ ಕಿರು ಚಿತ್ರಗಳಲ್ಲಿ ವಿಜಯ್ ಸೇತುಪತಿ ಸ್ನೇಹಪೂರ್ವಕವಾಗಿ ನಟಿಸಿಬರುತ್ತಿದ್ದರು. ರಜನಿಕಾಂತ್ ನಟನೆಯ ಪೇಟ್ಟಾ, ಜಿಗರ್ ಥಾಂಡಾ ಚಿತ್ರಗಳನ್ನೆಲ್ಲಾ ನಿರ್ದೇಶಿಸಿರುವ ಕಾರ್ತಿಕ್ ಸುಬ್ಬರಾಜ್ ಕೂಡಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿನ್ನರ್ ಆಗಿದ್ದರು. ಅದೇ ತಂಡಕ್ಕೆ ದೊಡ್ಡ ಸಿನಿಮಾವೊಂದನ್ನು ಕಟ್ಟುವ ಛಾನ್ಸು ಲಭಿಸಿತ್ತು. ಹಾಗೆ ಶುರುವಾದ ಸಿನಿಮಾ ಪಿಜ್ಜಾ. ಈ ಚಿತ್ರ ಬಿಡುಗಡೆಯಾದಮೇಲೆ ತಮಿಳುನಾಡು ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲಿ ದಾಖಲೆಯ ಗಳಿಕೆ ಮಾಡಿತು. ಅಲ್ಲಿಗೆ ವಿಜಯ್ ಸೇತುಪತಿ ಅನ್ನೋ ಅಪ್ಪಟ ನಟನ ಬದಕು ಕೂಡಾ ಮಗ್ಗುಲು ಬದಲಿಸಿತ್ತು. ಅಲ್ಲೀತನಕ ಪಟ್ಟ ಕಷ್ಟ, ಅನುಭವಿಸಿದ ಅವಮಾನಗಳಿಗೆಲ್ಲಾ ಪ್ರತಿಫಲ ಸಿಗಲಾರಂಭಿಸಿದವು. ‘ನಿನಗೆ ಹೀರೋ ಪಾತ್ರ ಸಿಗೋದೆಲ್ಲಾ ಕನಸಿನ ಮಾತು’ ಅಂದವರೆಲ್ಲಾ ಕಾಲ್ ಶೀಟ್ ಗಾಗಿ ಕ್ಯೂ ನಿಂತರು.

ನಡುವುಲೆ ಕೊಂಜ ಪಾಕತ್ತಾ ಕಾಣುಂ, ಸೂದು ಕಾವುಂ, ಇದರ್ಕು ತಾನೆ ಆಸೈ ಪಟ್ಟೆ ಬಾಲಕುಮಾರ… ಹೀಗೆ ಒಂದರ ಹಿಂದೊಂದು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸುವ ಅವಕಾಶ ಸಿಕ್ಕವು. ನಟಿಸಿದ ಸಿನಿಮಾಗಳಲ್ಲೇ ಗೆಲುವು ಕಂಡವು. ತಮಿಳಿನಲ್ಲಿ ಹೀರೋ ಆಗಲುವ ಮುಂಚೆಯೇ ಕನ್ನಡದ  ಅಖಾಡ ಹೆಸರಿನ ಸಿನಿಮಾದಲ್ಲಿ ಸೇತುಪತಿ ನಿಟಿಸಿದ್ದರು. ಶಿವಗಣೇಶ್‌ ನಿರ್ದೇಶನದ ಈ ಚಿತ್ರ ಇನ್ನೂ ತೆರೆಗೆ ಬಂದಿಲ್ಲ!