ಆಲ್ಬಂ ಹಾಡನ್ನು ಸಿನಿಮಾ ಹಾಡಿಗೆ ಸರಿಗಟ್ಟುವಂತೆ ರೂಪಿಸುವುದು ಸುಲಭದ ಮಾತಲ್ಲ. ಆಲ್ಬಂಗೆ ಹಾಕಿದ ಬಂಡವಾಳ ಯಾವತ್ತಿಗೆ ವಾಪಾಸು ಬರುತ್ತದೋ ಗೊತ್ತಿಲ್ಲ. ಅದೂ ಹೊಸಾ ಚಾನೆಲ್ಲಿನಲ್ಲಿ ಬಿಡುಗಡೆ ಮಾಡಿದ ಹಾಡು ಜನಕ್ಕೆ ತಲುಪಿ, ಅದರಿಂದ ಹಾಕಿದ ಬಂಡವಾಳ ಮತ್ತೆ ಕೈ ಸೇರೋದು ಸ್ವಲ್ಪ ಲೇಟೇ. ಇಂಥದ್ದರಲ್ಲಿ ಶೆರ್ಟನ್ ಹೋಟೇಲನ್ನು ಬಾಡಿಗೆ ಪಡೆದು ನೂರಾರು ಜನರನ್ನು ಭಾಗಿಯಾಗಿಸಿ ʻಪಾರ್ಟಿ ಫ್ರೀಕ್ʼ ಹಾಡನ್ನು ರೂಪಿಸಿದ್ದಾರೆ. ಚಂದನ್ ಶೆಟ್ಟಿ ಮ್ಯೂಸಿಕ್ ಮತ್ತು ಲಿರಿಕ್ಕಿನ ಜೊತೆ ಕಿಕ್ಕೇರುವಂತೆ ಕುಣಿದಿದಿದ್ದಾರೆ…
ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೂಡಿಬಂದ ಪಾರ್ಟಿ ಫ್ರೀಕ್ ಹಾಡು ಇತ್ತೀಚೆಗೆ ಯೂನೈಟೆಡ್ ಆಡಿಯೋಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿದೆ. ಹಾಡಿನ ಬಗ್ಗೆ ಮಾಹಿತಿ ನೀಡುವ ಉದ್ದೇಶಕ್ಕೆ ಸುದ್ದಿಗೋಷ್ಟಿ ಕರೆದಿದ್ದ ತಂಡ, ಹಾಡಿನ ಹುಟ್ಟು ಮತ್ತು ಅದರ ಹಿನ್ನೆಲೆಯನ್ನು ಬಿಚ್ಚಿಟ್ಟಿತು. ಚೈತನ್ಯ ಲಕಂಸಾನಿ ಈ ಹಾಡಿಗೆ ಬಂಡವಾಳ ಹೂಡಿದ್ದಾರೆ. ಮೂಲತಃ ಆಂಧ್ರದವರಾದ ಚೈತನ್ಯ, ಸಿನಿಮಾ ಕ್ಷೇತ್ರದಲ್ಲಿ ನೆಲೆಯೂರಬೇಕೆಂದು ಯೂನೈಟೆಡ್ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಮೊದಲಾರ್ಥವಾಗಿ ಕನ್ನಡ ಮತ್ತು ತೆಲುಗಿನಲ್ಲಿ ಹೊಸ ವರ್ಷಾಚರಣೆಗೆ ಉಡುಗೊರೆ ರೂಪದಲ್ಲಿ ಮತ್ತು ಬ್ಯಾನರ್ ಲಾಂಚ್ ಮಾಡುವ ಉದ್ದೇಶಕ್ಕೆ ಪಾರ್ಟಿ ಫ್ರೀಕ್ ಎಂಬ ಹಾಡನ್ನು ನಿರ್ಮಾಣ ಮಾಡಿದ್ದಾರೆ.
ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ನೀಡಿ ಧ್ವನಿಯನ್ನೂ ನೀಡಿರುವ ಚಂದನ್ ಶೆಟ್ಟಿ ಮಾತನಾಡಿ, ಒಂದು ವಾರದ ಹಿಂದಷ್ಟೇ ಈ ಆಡಿಯೋ ಸಂಸ್ಥೆ ಲಾಂಚ್ ಆಗಿದೆ. ಒಂದೇ ವಾರದಲ್ಲಿ ಯೂಟ್ಯೂಬ್ನಲ್ಲಿ ಒಳ್ಳೇ ರೀಚ್ ಸಿಕ್ಕಿದೆ. ಹೊಸಹೊಸ ಪ್ರತಿಭೆಗಳಿಗೋಸ್ಕರ ಈ ಚಾನೆಲ್ ತೆರೆಯಲಾಗಿದೆ. ಇನ್ನು ಹಾಡಿನ ಬಗ್ಗೆ ಹೇಳುವುದಾದರೆ, 3 ದಿನಗಳ ಕಾಲ ಶೆರ್ಟನ್ ಹೊಟೇಲ್ನಲ್ಲಿ ಶೂಟಿಂಗ್ ಮಾಡಲಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಹಾಡು ಮೂಡಿಬಂದಿದ್ದು, ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂಸ್ಥೆ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ. ಇದರಿಂದ ನಮ್ಮ ಬೆಳವಣಿಗೆ ಜತೆಗೆ ಇಂಡಸ್ಟ್ರಿಯ ಬೆಳವಣಿಗೆಗೂ ಸಹಕಾರಿ. ಈ ಥರದ ನಿರ್ಮಾಪಕರು ಇಂಡಸ್ಟ್ರಿಗೆ ಬೇಕು ಎಂದರು.
ಇನ್ನು ಈ ಹಾಡಿಗೆ ಬಂಡವಾಳ ಹೂಡಿರುವ ಚೈತನ್ಯ ಲಕಂಸಾನಿ ಮಾತನಾಡಿ, ತುಂಬ ಕಿರು ಅವಧಿಯಲ್ಲಿ ಈ ಹಾಡನ್ನು ಸೃಷ್ಟಿ ಮಾಡಿದ್ದೇವೆ. ನಮ್ಮ ತಾಂತ್ರಿಕ ತಂಡಕ್ಕೆ ಧನ್ಯವಾದ. ಈ ಆಡಿಯೋ ಸಂಸ್ಥೆ ತೆರೆಯಲು ಮೂಲ ಉದ್ದೇಶ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರ ಸಲುವಾಗಿ. ಯಾರಿಗೆ ಸಂಗೀತ ಮತ್ತು ಸಿನಿಮಾ ಆಸಕ್ತಿ ಇದೆಯೋ ಅವರಿಗೆ ನಮ್ಮ ಸಂಸ್ಥೆಯಿಂದ ಸ್ವಾಗತ ಎಂದರು.
ಇನ್ನು ಈ ಹಾಡಿನ ನಿರ್ಮಾಣದಲ್ಲಿ ಭಾಗವಾಗಿರುವ ನಟ ಧರ್ಮ ಸಹ ಹಾಡು ಮತ್ತು ಈ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು. ‘ಸಿನಿಮಾ ಬಗ್ಗೆ ಮಾತನಾಡುತ್ತ ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ ರಿಜಿಸ್ಟರ್ ಆಯ್ತು. ಅದನ್ನು ರೀಚ್ ಮಾಡಿಸುವ ಸಲುವಾಗಿ ಚಂದನ್ ಶೆಟ್ಟಿ ಅವರಿಂದ ಆಲ್ಬಂ ಮಾಡುವ ಬಗ್ಗೆ ನಿರ್ಧಾರವಾಯ್ತು. ಆಗ ಯುನೈಟೆಡ್ ಆಡಿಯೋ ಕಂಪನಿ ತೆರೆದೆವು. ಈ ಸಂಸ್ಥೆಯಲ್ಲಿ ನಾನೂ ಸಹ ಪಾಲುದಾರನಾಗಿದ್ದೇನೆ. ಅಂದುಕೊಂಡಿದ್ದಕ್ಕಿಂತ ಚೆಂದವಾಗಿ ಹಾಡು ಮೂಡಿಬಂದಿದೆ. ಮುಂದಿನ ದಿನಗಳಲ್ಲಿ ಇದೇ ಸಂಸ್ಥೆಯಿಂದ ಸಿನಿಮಾ ಸಹ ನಿರ್ಮಾಣವಾಗಲಿದೆ ಎಂದರು.
ಪಾರ್ಟಿ ಫ್ರೀಕ್ ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 36 ಲಕ್ಷ ಮೊತ್ತವನ್ನು ಖರ್ಚು ಮಾಡಲಾಗಿದೆ. ಮೂರು ದಿನದಲ್ಲಿ ಚಿತ್ರೀಕರಣ ಮುಗಿಸಿಕೊಂಡ ಈ ಹಾಡಿನಲ್ಲಿ 80ಕ್ಕೂ ಅಧಿಕ ರಷ್ಯನ್ ಡಾನ್ಸರ್ಗಳಿದ್ದಾರೆ. 100ಕ್ಕೂ ಅಧಿಕ ಇಲ್ಲಿನ ನೃತ್ಯಗಾರರಿದ್ದಾರೆ. ಟಾಲಿವುಡ್ ನೃತ್ಯ ನಿರ್ದೇಶಕಿ ಅನ್ನಿ ಮಾಸ್ಟರ್ ಜತೆಗೆ ನಿಶ್ವಿಕಾ ನಾಯ್ಡು, ನಿವೇದಿತಾ ಗೌಡ ಸಹ ಈ ಹಾಡಿನಲ್ಲಿದ್ದಾರೆ. ಛಾಯಾಗ್ರಹಣ ಶ್ರೀಶ ಕುದುವಳ್ಳಿ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ರಂಜಿತ್ ಸಂಕಲನ ಮಾಡಿದ್ದಾರೆ.
No Comment! Be the first one.