EIGHTEEN THIRTY SIX ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಮನಾಥ್ ಅವರು ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದಲ್ಲಿ “ಬಿಗ್ ಬಾಸ್” ಖ್ಯಾತಿಯ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ “#ಪಾರು ಪಾರ್ವತಿ” ಚಿತ್ರದ ಶೀರ್ಷಿಕೆ ಅನಾವರಣ ಹಾಗೂ EIGHTEEN THIRTY SIX ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಉದ್ಘಾಟನೆ ಇತ್ತೀಚೆಗೆ ನೆರವೇರಿತು. ಆನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ಮೊದಲು ಮಾತನಾಡಿದ ನಿರ್ಮಾಪಕ ಪ್ರೇಮನಾಥ್ ಅವರು, ನಾನು ಮೂಲತಃ ಐಟಿ ಉದ್ಯೋಗಿ. ಚಿಕ್ಕವಯಸ್ಸಿನಿಂದಲೂ ಸಿನಿಮಾ ನೋಡುತ್ತಿದ್ದ ನನಗೆ, ಸಿನಿಮಾ ನಿರ್ಮಾಣ ಮಾಡುವ ಕನಸ್ಸಿತ್ತು. ಅದು ಈಗ ನೆರವೇರಿದೆ. ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ನಾನು ಕೆಲಸದ ಮೇಲೆ ಅನೇಕ ಊರುಗಳಲ್ಲಿ ವಾಸವಾಗಿದ್ದೆ. ಇದು ಕೂಡ ಒಂದು ಪ್ರವಾಸದ ಕಥೆಯಾಗಿರುವುದರಿಂದ ಇಷ್ಟವಾಯಿತು. ಇನ್ನು ನಮ್ಮ EIGHTEEN THIRTY SIX ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಉದ್ಘಾಟನೆಯಾಗಿದೆ. EIGHTEEN THIRTY SIX ಕೂಡಿದಾಗ 9 ಬರುತ್ತದೆ. ಅದು ನನ್ನ ಲಕ್ಕಿ ನಂಬರ್ ಎಂದರು.
ಹತ್ತು ವರ್ಷಗಳಿಂದ ಪಿ.ವಾಸು, ಎಂ ಮನೋನ್, ಅರವಿಂದ್ ಶಾಸ್ತ್ರಿ, ಸುನಿ ಮುಂತಾದ ನಿರ್ದೇಶಕರ ಸಿನಿಮಾಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ನನಗೆ ಇದು ಮೊದಲ ನಿರ್ದೇಶನದ ಚಿತ್ರ. ಇದೊಂದು ಅಡ್ವೆಂಚರ್ಸ್ ಮತ್ತು ಪ್ರವಾಸ ಕಥನ. ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರ ಕಾಂಡ್ ನಲ್ಲಿ ಚಿತ್ರೀಕರಣ ನಡೆದಿದೆ. ಮೂರು ಮುಖ್ಯಪಾತ್ರಗಳ ಸುತ್ತ ಸಿನಿಮಾ ಕಥೆ ಸಾಗುತ್ತದೆ. ಪಾಯಲ್ ಎಂಬ ಪಾತ್ರದಲ್ಲಿ ದೀಪಿಕಾ ದಾಸ್ ಕಾಣಿಸಿಕೊಂಡಿದ್ದಾರೆ. ನಿಜಜೀವನದಲ್ಲೂ ಅಡ್ವೆಂಚರ್ಸ್ ಹಾಗೂ ಜರ್ನಿಯಲ್ಲಿ ಆಸಕ್ತಿಯಿರುವ ದೀಪಿಕಾ ದಾಸ್ ಅವರಿಗೆ ಇದು ಹೇಳಿ ಮಾಡಿಸಿದ ಪಾತ್ರ. ಈವರೆಗೂ ನೀವು ನೋಡಿರದ ದೀಪಿಕಾ ದಾಸ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಇನ್ನೆರಡು ಪ್ರಮುಖ ಪಾತ್ರಗಳ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಚಿತ್ರೀಕರಣ ಮುಗಿಸಿರುವ ನಮ್ಮ ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ ಎಂದು ನಿರ್ದೇಶಕ ರೋಹಿತ್ ಕೀರ್ತಿ ತಿಳಿಸಿದರು.
ನನಗೆ ಮೊದಲಿನಿಂದಲೂ ಪ್ರವಾಸ ಹಾಗೂ ಅಡ್ವೆಂಚರ್ಸ್ ನಲ್ಲಿ ಆಸಕ್ತಿ. ಈ ಚಿತ್ರದಲ್ಲಿ ನಾನು ಏಕಾಂಗಿ ಸಂಚಾರಿ. ಪಾಯಲ್ ನನ್ನ ಪಾತ್ರದ ಹೆಸರು. ಪ್ರಯಾಣದಲ್ಲೇ ಚಿತ್ರದ ಹೆಚ್ಚು ಕಥೆ ನಡೆಯುತ್ತದೆ. ಈ ಚಿತ್ರಕ್ಕಾಗಿ ನಾನು ಒಂದು ತಿಂಗಳಲ್ಲಿ ಹತ್ತು ಕೆಜಿ ತೂಕ ಇಳಿಸಿಕೊಂಡಿದ್ದೇನೆ ಹಾಗೂ ಉದ್ದವಾದ ಕೂದಲನ್ನು ಗಿಡ್ಡ ಕೂದಲು ಮಾಡಿಕೊಂಡಿದ್ದೇನೆ. ನನ್ನ ಪಾತ್ರ ಕೇಳಿದ್ದನ್ನು ಮಾಡಿದ್ದೇನೆ. ಈ ಚಿತ್ರದಲ್ಲಿ ನಮ್ಮಷ್ಟೇ ಮುಖ್ಯ ಪಾತ್ರ ವಹಿಸಿರುವುದು ಚಿತ್ರದಲ್ಲಿ ನಾವು ಸಂಚಾರಿಸಿರುವ ಕಾರು ಎಂದರು ದೀಪಿಕಾದಾಸ್.
ಚಿತ್ರದಲ್ಲಿ ನಟಿಸಿರುವ ಪೂನಂ ಸರ್ ನಾಯಕ್ ಮತ್ತು ಫವಾಜ್ ಅಶ್ರಫ್ ಮಾತನಾಡಿ ಈ ಚಿತ್ರದಲ್ಲಿ ಅಭಿನಯಿಸಿದ್ದು ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕರು ನಮ್ಮ ಪಾತ್ರಗಳನ್ನು ಪರಿಚಯಿಸುವ ಯೋಜನೆ ಹಾಕಿಕೊಂಡಿದ್ದಾರೆ ಎಂದರು. ಛಾಯಾಗ್ರಾಹಕ ಅಬಿನ್ ರಾಜೇಶ್, ಸಂಗೀತ ನಿರ್ದೇಶಕ ಅರ್ ಹರಿ, ಸಂಕಲನಕಾರ ಸಿ.ಕೆ.ಕುಮಾರ್, ಗೀತರಚನೆಕಾರ ನಾಗಾರ್ಜುನ ಶರ್ಮ ಹಾಗೂ ಕಲಾ ನಿರ್ದೇಶಕ ರಾಘು ಮೈಸೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚೇತನ್ ಡಿಸೋಜ ಸಾಹಸ ನಿರ್ದೇಶನ ಹಾಗೂ ರಾಜಾಕೃಷ್ಣನ್ ಆಡಿಯೋಗ್ರಫಿ ಇರುವ ಈ ಚಿತ್ರದ ಡಿಸೈನರ್ ಆಗಿ ಮಹಮ್ಮದ್ ಹಮ್ಜ ಕಾರ್ಯ ನಿರ್ವಹಿಸಿದ್ದಾರೆ.
No Comment! Be the first one.