ಪಾರೂಲ್ ಯಾದವ್ ಸಹ ನಿರ್ಮಾಣ ಮಾಡಿ ಜೊತೆಗೆ ನಟನೆಯನ್ನೂ ಮಾಡಿರುವ, ರಮೇಶ್ ಅರವಿಂದ್ ನಿರ್ದೇಶನದ ಸಿನಿಮಾ ಬಟರ್ ಫ್ಲೈ. ಈ ಸಿನಿಮಾಗಾಗಿ ಬಿಗ್ ಬಿ ಹಾಡೊಂದನ್ನು ಹಾಡಿದ್ದಾರೆ. ಮಾಸ್ಟರ್ ಹಿರಣ್ಣಯ್ಯ ಅವರ ದೇವದಾಸಿ ನಾಟಕದ ಒಂದು ಹಾಡನ್ನು ರ್ಯಾಪ್ ಶೈಲಿಯಲ್ಲಿ ಅಮಿತಾಬ್ ಹಾಡಿದ್ದಾರೆ. ಸಿನಿಮಾಗೇ ಕುಡಿತದ ಕುರಿತಾದ ಹಾಡೊಂದು ಬೇಕಾಗಿತ್ತು. ಹೀಗಾಗಿ ಮಾಸ್ಟರ್ ಹಿರಣ್ಣಯ್ಯ ಅವರ ನಾಟಕದ ಹಾಡನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಾಡನ್ನು ಈಗಾಗಲೇ ಅಮಿತಾಬ್ ಹಾಡಿದ್ದು, ಮುಂಬೈನ ಸ್ಟುಡಿಯೋವೊಂದರಲ್ಲಿ ರೆಕಾರ್ಡಿಂಗ್ ಸಹಾ ಮಾಡಲಾಗಿದೆ. ಅಮೃತಧಾರೆ ಸಿನಿಮಾದಲ್ಲಿ ಸಣ್ಣದೊಂದು ದೃಶ್ಯದಲ್ಲಿ ಅಮಿತಾಬ್ ಕಾಣಿಸಿಕೊಂಡಿದ್ದರು. ಈಗ ಈ ಹಾಡನ್ನು ಹಾಡುವ ಮೂಲಕ ಕನ್ನಡದ ಗಾಯಕರೂ ಆಗಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಈ ಸಿನಿಮಾವನ್ನು ತೆರೆಗೆ ತರಲು ಸಂಪೂರ್ಣ ತಯಾರಿ ನಡೆಸಲಾಗುತ್ತಿದೆ.
ಈ ಸಿನಿಮಾಗೆ ಪಾರೂಲ್ ಚಿತ್ರಕತೆಯನ್ನೂ ರಚಿಸಿದ್ದಾರಂತೆ. ರಮೇಶ್ ಅರವಿಂದ್ ನಿರ್ದೇಶನ ಆರಂಭಿಸಿದ ಈ ಸಿನಿಮಾವನ್ನು ಪಾರೂಲ್ ಯಾದವ್ ಮುಂದುವರೆಸುತ್ತಿದ್ದಾರೆ ಎನ್ನುವ ಗಾಳಿಸುದ್ದಿ ಹಬ್ಬಿತ್ತು. ಇದರ ಬಗ್ಗೆ ಸ್ವತಃ ಪಾರೂಲ್ ಮಾತಾಡಿ, ಒಂದಿಷ್ಟು ಚಿತ್ರಕತೆಯನ್ನು ನಾನು ಬರೆದಿದ್ದೇನೆ ಹೊರತು ನಿರ್ದೇಶನದ ಜವಾಬ್ದಾರಿ ಏನಿದ್ದರೂ ರಮೇಶ್ ಅರವಿಂದ್ ಅವರದ್ದೇ ಎಂದು ‘ಸಿನಿಬಜ಼್’ಗೆ ತಿಳಿಸಿದ್ದಾರೆ. ಅಲ್ಲದೇ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ನೆಟ್ಫ್ಲಿಕ್ಸ್ ನವರು ಅತಿ ಹೆಚ್ಚು ಹಣ ನೀಡಿ ಖರೀದಿಸಿದ್ದಾರಂತೆ. ಡಿಜಿಟಲ್ ಮತ್ತು ಆಡಿಯೋ ಹಕ್ಕುಗಳಿಂದಲೇ ಸಿನಿಮಾದ ಐವತ್ತು ಪರ್ಸೆಂಟ್ ಬಂಡವಾಳ ವಾಪಾಸು ಬಂದಿದೆ ಅನ್ನೋದು ಪಾರೂಲ್ ಅಭಿಪ್ರಾಯ.