ಇಷ್ಟಪಟ್ಟ ಹುಡುಗಿಯ ಹಿಂದೆ ಬೀಳೋದು, ಅವಳ ಮನೆ ಮುಂದೆ ನಿಲ್ಲೋದು, ಆಕೆಯ ತಂಟೆಗೆ ಬಂದವರಿಗೆ ಗೂಸಾ ಕೊಡೋದು… ಇದು ಮಾಮೂಲಿಯಾಗಿ ಬಹುತೇಕ ಸಿನಿಮಾಗಳಲ್ಲಿ ಕಂಡು ಬರುವ ದೃಶ್ಯ. ಆದರೆ ಡಾಟರ್ ಆಫ್ ಪಾರ್ವತಮ್ಮ ಹಾಗಲ್ಲ. ಯಾವ ಹುಡುಗನಿಗೂ ಕಡಿಮೆಯಿಲ್ಲದ ಪಾರ್ವತಮ್ಮನ ಮಗಳು ವೈದೇಹಿ ಬಿಂದಾಸಾಗಿ ಬೈಕು ಏರಿ ಹೊರಟಳೆಂದರೆ ಯಾವ ಹುಡುಗನಿಗೂ ಕಡಿಮೆಯಿಲ್ಲ. ತನಗಿಷ್ಟವಾದ ಹುಡುಗರನ್ನು ಯಾವ ಅಂಜಿಕೆ, ಮುಜುಗರವನ್ನೂ ತೋರದೆ ನೇರವಾಗಿ ಪ್ರಪೋಸು ಮಾಡಿಬಿಡುವ ದಿಟ್ಟ ಹೆಣ್ಣುಮಗಳು.
ಇಂಥ ಧೈರ್ಯವಂತೆಯ ಬಾಳಲ್ಲೂ ಬಯಸಿದ್ದೆಲ್ಲಾ ಸಿಕ್ಕಿರೋದಿಲ್ಲ. ಸಿಕ್ಕಿತು ಅನ್ನುವಷ್ಟರಲ್ಲಿ ಕೈತಪ್ಪಿರುತ್ತದೆ. ಕಾಲ ಕಳೆದಂತೆ ಈಕೆ ದೊಡ್ಡ ಪೊಲೀಸ್ ಅಧಿಕಾರಿಯಾಗಿರುತ್ತಾಳೆ. ಎಂಥ ಕ್ಲಿಷ್ಟಕರ ಕೇಸಾದರೂ ತನ್ನ ಚಾಣಾಕ್ಷತೆಯಿಂದ ಭೇದಿಸುವ ತನಿಖಾಧಿಕಾರಿ ಈಕೆ. ಇಂಥಾ ಆಫೀಸರ್ ಕೈಗೆ ಅದೊಂದು ಫೈಲು ಸೇರುತ್ತದೆ. ಅದು ವೈದ್ಯೆಯೊಬ್ಬಳ ಅಸಹಜ ಸಾವು. ವೈದ್ಯಕೀಯ ವರದಿ ಒಂದು ಬಗೆಯಲ್ಲಿದ್ದರೆ ಅದಕ್ಕೆ ವಿರುದ್ಧವಾದ ರೀತಿಯಲ್ಲಿ ಸಾವು ಸಂಭವಿಸಿರುತ್ತದೆ. ಸಾಕ್ಷಿಗಳು ಮತ್ತೇನನ್ನೇ ಹೇಳುತ್ತಿರುತ್ತವೆ. ಅಸಲಿಗೆ ಅದು ಆತ್ಮಹತ್ಯೆಯಾ? ಕೊಲೆಯಾ? ಅನ್ನೋದೇ ಗೊಂದಲವಾಗಿಬಿಟ್ಟಿರುತ್ತದೆ. ಒಟ್ಟಾರೆ ಗೋಜಲು ಗೋಜಲಾದ ಅಪರಾಧ ಪ್ರಕರಣವೊಂದನ್ನು ವೈದೇಹಿ ಹೇಗೆ ಇನ್ವೆಸ್ಟಿಗೇಟ್ ಮಾಡುತ್ತಾಳೆ ಅನ್ನೋದು ಕಥೆಯ ಪ್ರಧಾನ ಅಂಶ.
ಸುಮಲತಾ ಅಂಬರೀಶ್ ಮಗಳನ್ನು ಅಪಾರವಾಗಿ ಪ್ರೀತಿಸುವ ಮತ್ತು ಹೇಗಾದರೂ ಮಾಡಿ ಆಕೆಗೊಂದು ಮದುವೆ ಮಾಡಬೇಕೆನ್ನುವ ವಾತ್ಸಲ್ಯಮಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹರಿಪ್ರಿಯಾ ಇಲ್ಲಿ ತನಿಖೆಯನ್ನಷ್ಟೇ ಮಾಡುವುದಿಲ್ಲ, ತನ್ನ ಹುಡುಗನಿಗೆ ಕಾಟ ಕೊಟ್ಟವರನ್ನು ಹುಡುಕೊಕೊಂಡು ಹೋಗಿ ಬ್ಯಾಟು ಬ್ಯಾಟಲ್ಲೇ ಬಾರಿಸಿಬರುತ್ತಾರೆ. ಪ್ರೀತಿಯನ್ನು ಹಂಚುವ ಹುಡುಗ ಸಿಕ್ಕಾಗ ಪಟಕ್ಕನೆ `ನನ್ನ ಮದುವೆಯಾಗ್ತೀಯಾ’ ಅಂತಾ ಕೇಳಿಬಿಡುತ್ತಾರೆ. ಒಳ್ಳೇದನ್ನು ತಕ್ಷಣ ಸ್ವೀಕರಿಸಬೇಕು, ಕೆಟ್ಟದನ್ನು ಅಟ್ಟಾಡಿಸಿ ಕೆಡವಬೇಕು ಅನ್ನೋ ಫಾರ್ಮುಲಾ ಪಾರ್ವತಮ್ಮನ ಮಗಳದ್ದು.
ಹರಿಪ್ರಿಯಾ ಬಿಟ್ಟರೆ ಚಿತ್ರದಲ್ಲಿ ಹೆಚ್ಚು ಖುಷಿ ಕೊಡುವುದು ನಟ ತರಂಗ ವಿಶ್ವ ಪಾತ್ರ. ಹೆಚ್ಚು ಡೈಲಾಗಿಲ್ಲದೆಯೂ ತಮ್ಮ ಆಂಗಿಕ ಅಭಿನಯ, ಹಾವ ಭಾವದಿಂದಲೂ ನೋಡುಗರನ್ನು ನಗಿಸುವ ಶಕ್ತಿ ತರಂಗ ವಿಶ್ವ ಅವರ ನಟನೆಗಿದೆ. ನಿರ್ದೇಶಕ ಶಂಕರ್ ಎಲ್ಲೂ ಅಬ್ಬರಕ್ಕೆ ಜಾಗ ಕೊಡದೆ ಸರಾಗವಾಗಿ ಸಾಗುವಂತೆ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಇನ್ನೊಂದಿಷ್ಟು ಟ್ವಿಸ್ಟು ಟರ್ನುಗಳಿದ್ದಿದ್ದರೆ ಡಾಟರ್ ಆಫ್ ಪಾರ್ವತಮ್ಮನ ರೇಂಜೇ ಬೇರೆಯಾಗಿರುತ್ತಿತ್ತು. ಸಿನಿಮಾವನ್ನು ಅತಿರಂಜಕಗೊಳಿಸಬಾರದು ಎನ್ನುವ ಕಾರಣಕ್ಕೋ ಏನೋ ನಿರ್ದೇಶಕರು ಸ್ವಲ್ಪ ಉಪ್ಪು ಖಾರ ಕಡಿಮೆ ಮಾಡಿದಂತೆ ಕಾಣುತ್ತದೆ. ಆದರೆ ಇದೊಂದು ಪಕ್ಕಾ ಕಮರ್ಷಿಯಲ್ ಸಬ್ಜೆಕ್ಟ್ ಆಗಿದ್ದರಿಂದ ಒಂಚೂರು ಏರಿಳಿತಗಳಿರಬೇಕಿತ್ತು. ಅದೆಲ್ಲಾ ಏನೇ ಆಗಲಿ ಹರಿಪ್ರಿಯಾ ಅವರ ಸಹಜ ನಟನೆ ಎಲ್ಲವನ್ನೂ ಬ್ಯಾಲೆನ್ಸ್ ಮಾಡಿಬಿಡುತ್ತದೆ. ಒಟ್ಟಾರೆಯಾಗಿ ಆಡಂಭರಗಳಿಲ್ಲದ, ಮನೆಮಂದಿಯೆಲ್ಲಾ ಕೂತು ನೋಡಬಹುದಾದ ಸರಳ, ಸುಂದರ ಸಿನಿಮಾ ಡಾಟರ್ ಆಫ್ ಪಾರ್ವತಮ್ಮ.
One Comment