ನಡುವಯಸ್ಸು ದಾಟಿದ ಹೆಣ್ಣುಮಗಳಿಗೆ ಮದುವೆ ಮಾಡೋ ಸರ್ಕಸ್ಸು ನಡೆಸೋ ಹೆತ್ತವರೆಲ್ಲರ ಆತ್ಮಕಥೆಯಂತಾ ಚಿತ್ರ ಪತಿಬೇಕು ಡಾಟ್ ಕಾಮ್… ಹೀಗಂತ ಸಾರಾಸಗಟಾಗಿ ಹೇಳಿಬಿಡುವಂಥಾ ಕಥಾ ಹಂದರ ಹೊಂದಿರುವ ಈ ಚಿತ್ರದುದ್ದಕ್ಕೂ ಸಂಕಟ ಹೊದ್ದ ಪಾತ್ರಗಳಿವೆ. ಆದರೆ ನಿರ್ದೇಶಕರು ಅವುಗಳಿಗೆಲ್ಲ ಮುಗುಳುನಗೆಯ ಪೋಷಾಕು ತೊಡಿಸಿದ್ದಾರೆ. ಧಾರಾಕಾರವಾಗಿ ಕಣ್ಣೀರು ಹರಿಸೋ ಇರಾದೆ ಇದ್ದಿದ್ದರೆ ಎಲ್ಲರ ಮನಸುಗಳನ್ನೂ ಕೋಡಿ ಬೀಳಿಸುವಂಥಾ ಅವಕಾಶಗಳಿದ್ದವು. ಆದರೆ ಇಲ್ಲಿ ಎಲ್ಲ ನೋವುಗಳಿಗೂ ಆಹ್ಲಾದದ ಪನ್ನೀರು ಚಿಮುಕಿಸಿ ಇಡೀ ಕಥೆಯನ್ನು ದಡ ಮುಟ್ಟಿಸುವ ಪ್ರಯತ್ನವನ್ನು ನಿರ್ದೇಶಕ ರಾಕೇಶ್ ಮಾಡಿದ್ದಾರೆ. ಅದು ಪ್ರೇಕ್ಷಕರನ್ನು ಮುಟ್ಟಿದೆ ಎಂಬುದೇ ಇಡೀ ಚಿತ್ರದ ಪ್ಲಸ್ ಪಾಯಿಂಟ್!
ಮೂವತ್ತು ವರ್ಷ ದಾಟಿದ ಮಗಳಿಗೆ ಅರವತ್ತೊಂದು ಗಂಡು ಹುಡುಕಿ ಸುಸ್ತಾದ ತಂದೆ ತಾಯಿ, ಅರವತ್ತೊಂದರಾಚೆಗೂ ಇದೇ ಮುಂದುವರೆದರೆ ಕಷ್ಟ ಅಂದುಕೊಂಡು ತಾನೇ ಅಖಾಡಕ್ಕಿಳಿಯುವ ಮಗಳು, ಇನ್ನೇನು ಸಂಬಂಧವೊಂದು ಕುದುರಿಕೊಂಡು ಗಟ್ಟಿಮೇಳ ಮೊಳಗುತ್ತದೆ ಅಂದುಕೊಂಡಾಗಲೇ ಎದುರಾಗೋ ವರದಕ್ಷಿಣೆಯೆಂಬ ಪಿಡುಗಿನ ಅಪಸ್ವರ… ಇಷ್ಟರ ಸುತ್ತಾ ಕಥೆ ಮಜವಾಗಿಯೇ ಸುತ್ತುತ್ತದೆ. ಹೆತ್ತವರ ಪರದಾಟಕ್ಕಿಂತಲೂ ಇಡೀ ಕಥಾ ನಾಯಕಿ ಭಾಗ್ಯಳ ಸುತ್ತಲೇ ಪ್ರದಕ್ಷಿಣೆ ಹಾಕುತ್ತದೆ. ಈ ಪಾತ್ರದಲ್ಲಿ ಶೀತಲ್ ಶೆಟ್ಟಿ ಸಂಪೂರ್ಣವಾಗಿ ಸಮರ್ಪಿಸಿಕೊಂಡಂತೆ ನಟಿಸಿದ್ದಾರೆ.
ತಂದೆ ತಾಯಿ ನೋಡಿದ ಪ್ರತೀ ಸಂಬಂಧವೂ ನಾನಾ ಕಾರಣಗಳಿಂದಾಗಿ ಗೋತಾ ಹೊಡೆಯುತ್ತಿರುತ್ತದೆ. ಇದಕ್ಕೆ ಪ್ರಧಾನ ಕಾರಣ ವರದಕ್ಷಿಣೆಯೇ ಅಂದುಕೊಂಡ ನಾಯಕಿ ತಾನೇ ಮದುವೆ ಬ್ರೋಕರ್ ಕೆಲಸಕ್ಕಿಳಿಯುತ್ತಾಳೆ. ಅಲ್ಲಿಂದ ಹುಟ್ಟಿದ ಕಾಸನ್ನು ವರದಕ್ಷಿಣೆಗೆ ಸುರಿದಾದರೂ ಕಂಕಣ ಭಾಗ್ಯ ಕುದುರಿಸಿಕೊಳ್ಳೋ ಇರಾದೆ ಭಾಗ್ಯಾಳದ್ದು. ಇದ್ಯಾವುದೂ ಫಲ ನೀಡದಿದ್ದಾಗ ಪ್ರೀತಿಸಿ ಮದುವೆಯಾಗೋ ನಿರ್ಧಾರ. ಅದಕ್ಕೆ ಹೆತ್ತವರ ಸಪೋರ್ಟು. ಸಾವಿರ ಸುಳ್ಳು ಹೇಳಿ ಒಂದು ಮಾದುವೆ ಮಾಡುವ ಗಾದೆಗೆ ತಕ್ಕುದಾದ ನವರಂಗೀ ನಾಟಕ… ಕಡೆಗೂ ಭಾಗ್ಯಾಳಿಗೆ ಮದುವೆಯ ಯೋಗ ಕೂಡಿ ಬರುತ್ತದಾ? ಆಕೆ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾಳಾ? ಈ ನಡುವೆ ಎದುರಾಗೋ ಟ್ವಿಸ್ಟುಗಳೇನು ಎಂಬ ಕುತೂಹಲವನ್ನೆಲ್ಲ ಚಿತ್ರಮಂದಿರದಲ್ಲಿಯೇ ತಣಿಸಿಕೊಳ್ಳೋದೊಳಿತು.
ಎಲ್ಲ ಪಾತ್ರಗಳನ್ನೂ ಕೂಡಾ ಕಥೆಯ ಓಘಕ್ಕೆ, ತಮ್ಮ ಉದ್ದೇಶಕ್ಕೆ ತಕ್ಕುದಾಗಿ ನಿರ್ದೇಶಕ ರಾಕೇಶ್ ಪಳಗಿಸಿಕೊಂಡಿದ್ದಾರೆ. ಭಾಗ್ಯ ಎಂಬ ನಟನೆ ಬೇಡುವ ಕಥಾ ನಾಯಕಿಯ ಪಾತ್ರವನ್ನು ಶೀತಲ್ ಶೆಟ್ಟಿ ಸಲೀಸಾಗಿ ಅಭಿನಯಿಸಿದ್ದಾರೆ. ಇಷ್ಟೂ ಚಿತ್ರಗಳಿಗೆ ಹೋಲಿಸಿ ನೋಡಿದರೆ ನಟಿಯಾಗಿ ಶೀತಲ್ ಮತ್ತಷ್ಟು ಪ್ರಬುದ್ಧವಾಗಿ ರೂಪುಗೊಂಡಿದ್ದಾರೆ. ಪೋಷಕ ಪಾತ್ರಗಳಲ್ಲಿ ಕೃಷ್ಣ ಅಡಿಗ ಮತ್ತು ಹರಿಣಿಯವರ ಅಭಿನಯ ಮನಸು ಮುಟ್ಟುವಂತಿದೆ. ಎಲ್ಲ ಪರಿಸ್ಥಿತಿಗಳನ್ನೂ ನಗುವಿನ ಮೂಲಕವೇ ನಿಭಾಯಿಸಬೇಕೆಂಬ ನಿರ್ದೇಶಕರ ನಿರ್ಧಾರ ಅಲ್ಲಲ್ಲಿ ದೃಷ್ಯಗಳ ಪರಿಣಾಮಗಳನ್ನು ತುಸು ತಗ್ಗಿಸಿವೆಯಾದರೂ ಪತಿಬೇಕು ಡಾಟ್ ಕಾಮ್ ಚಿತ್ರ ಆಹ್ಲಾದಕಾರಿ ಅನುಭವವೊಂದನ್ನು ಪ್ರತೀ ಪ್ರೇಕ್ಷಕರಲ್ಲಿಯೂ ಹುಟ್ಟಿಸುತ್ತದೆ.
ಹಾಡುಗಳು, ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಸೇರಿದಂತೆ ಎಲ್ಲವೂ ಒಂದಕ್ಕೊಂದು ಪೂರಕವಾಗಿವೆ. ಕಥೆ ಮಧ್ಯಮ ವರ್ಗದ್ದೇ ಆದರೂ ಅದರ ಭಾವಗಳು ಎಲ್ಲರನ್ನೂ ಸೆಳೆಯುವಂತಿವೆ.
#