ತೆಲುಗು ನಟ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ? ಇಂಥದ್ದೊಂದು ವದಂತಿ ಪವನ್ ಅಭಿಮಾನಿ ವಲಯದಲ್ಲಿ ಓಡಾಡುತ್ತಿದೆ. ಇದಕ್ಕೆ ಇಂಬು ನೀಡುವಂತಹ ಬೆಳವಣಿಗೆಗಳೂ ನಡೆದಿವೆ. ರೇಣು ದೇಸಾಯಿ ಇತ್ತೀಚೆಗೆ ಸಾಕ್ಷಿ ಟೀವಿ ವರದಿಗಾರ್ತಿಯೊಬ್ಬರ ಜೊತೆ ಕರ್ನೂಲ್ ಜಿಲ್ಲೆಯಲ್ಲಿ ಓಡಾಡಿದ್ದಾರೆ. ಇದು ಚುನಾವಣಾ ತಯಾರಿ ಇರಬಹುದು ಎಂದೆಲ್ಲಾ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಮತ್ತೊಂದು ಹೆಜ್ಜೆ ಮುಂದೆ ಹೋಗಿ, ರೇಣು ದೇಸಾಯಿ ಅವರು ವೈಎಸ್ಆರ್ ಪಕ್ಷದಿಂದ ಪತಿ ಪವನ್ ವಿರುದ್ಧ ಚುನಾವಣೆ ನಿಲ್ಲುತ್ತಾರೆ ಎಂದೂ ಹೇಳಲಾಗುತ್ತಿದೆ.
ರೇಣು ದೇಸಾಯಿ ಈ ವದಂತಿಗಳನ್ನು ಅಲ್ಲಗಳೆದಿದ್ದಾರೆ. ತಾವು ರೈತರ ಬಗ್ಗೆ ಸಾಕ್ಷ್ಯಚಿತ್ರವೊಂದನ್ನು ತಯಾರಿಸುತ್ತಿರುವುದಾಗಿ ಅವರು ಬಹು ಹಿಂದೆಯೇ ಹೇಳಿಕೊಂಡಿದ್ದರು. ಈ ಸಾಕ್ಷ್ಯಚಿತ್ರದ ಕೆಲಸಕ್ಕಾಗಿ ಕರ್ನೂಲ್ ಮತ್ತು ರಾಯಲ್ ಸೀಮೆಯ ಕೆಲ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಟೀವಿ ವರದಿಗಾರ್ತಿ ಅವರ ಆಪ್ತ ಸ್ನೇಹಿತೆ ಎನ್ನುವ ಮಾಹಿತಿಯೂ ಸಿಗುತ್ತದೆ. ಮಹಾರಾಷ್ಟ್ರ ಮೂಲದ ರೇಣು ದೇಸಾಯಿ ತೆಲುಗು ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದರು. ಪವನ್ ಕಲ್ಯಾಣ್ ಅವರೊಂದಿಗೆ ‘ಭದ್ರಿ’ ಮತ್ತು ‘ಜಾನಿ’ ತೆಲುಗು ಚಿತ್ರಗಳಲ್ಲಿ ನಟಿಸಿದ್ದರು. ಮುಂದೆ 2009ರಲ್ಲಿ ಪವನ್ ಮತ್ತು ರೇಣು ದೇಸಾಯಿ ವಿವಾಹ ನೆರವೇರಿತ್ತು. 2012ರಲ್ಲಿ ಈ ದಾಂಪತ್ಯ ವಿಚ್ಛೇದನದಲ್ಲಿ ಕೊನೆಗೊಂಡಿತು.
No Comment! Be the first one.