ಡೀಲ್ ರಾಜ ನಿರ್ದೇಶಕ ಈಗ ಪಯಣಿಗರ ಸಾರಥಿ!

ನಟ ಕೋಮಲ್ ಅವರಿಗೆ ಭರ್ಜರಿ ಗೆಲುವು ತಂದುಕೊಟ್ಟಿದ್ದ ಡೀಲ್ ರಾಜಾ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಯುವ ನಿರ್ದೇಶಕ ರಾಜ್ ಗೋಪಿ ಸೂರ್ಯ. ಪಕ್ಕಾ ಕಮರ್ಶಿಯಲ್ ಕಾಮಿಡಿ ಜಾನರಿನ ಈ ಚಿತ್ರದ ಮೂಲಕವೇ ಒಂದು ಭರಪೂರವಾದ ಗೆಲುವು ದಕ್ಕಿಸಿಕೊಂಡ ಮೇಲೂ ರಾಜ್ ಗೋಪಿ ಇದೀಗ ತಮ್ಮ ಆಸಕ್ತಿಗೆ ತಕ್ಕುದಾದ, ಬದುಕಿಗೆ ಹತ್ತಿರವಾದ ಪಯಣಿಗರು ಎಂಬ ಆಪ್ತ ಶೀರ್ಷಿಕೆಯ ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ. ಟ್ರೇಲರ್ ಮತ್ತು ಸೊಗಸಾದ ಹಾಡಿನ ಮೂಲಕ ಪ್ರೇಕ್ಷಕರನ್ನು ತಲುಪಿಕೊಂಡಿದ್ದಾರೆ.

ರಾಜ್ ಗೋಪಿ ಸೂರ್ಯ ಅವರು ಸಡಗರ ಎಂಬ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪದಾರ್ಪಣೆ ಮಾಡಿರುವವರು. ಬದುಕಿನ ಬಿಡಿ ಬಿಡಿ ಸಂತಸಗಳ ತಳಹದಿಯ ಸೂಕ್ಷ್ಮ ಕಥಾ ಹಂದರ ಹೊಂದಿದ್ದ ಈ ಚಿತ್ರ ಸೋಲು ಗೆಲುವಿನಾಚೆಗೆ ಭಿನ್ನ ಬಗೆಯದ್ದಾಗಿ ದಾಖಲಾಗಿದೆ. ಅದಾದ ನಂತರ ಡೀಲ್ ರಾಜ ಚಿತ್ರ ಮಾಡಿದ್ದ ರಾಜ್ ಗೋಪಿ ಅವರೀಗ ಒಂದಷ್ಟು ಗ್ಯಾಪ್ ನ ನಂತರ ಪಯಣಿಗರು ಚಿತ್ರದ ಸಾರಥಿಯಾಗಿದ್ದಾರೆ.

ಅಷ್ಟಕ್ಕೂ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಪಯಣಿಗರೇ. ಅಂಥಾದ್ದೇ ಒಂದು ಪಯಣ ಹೊರಡುವ ನಡುವಯಸ್ಕ ಸ್ನೇಹಿತರ ಕಥೆಯನ್ನು ಈ ಚಿತ್ರ ಒಳಗೊಂಡಿದೆಯಂತೆ. ಮಡದಿಯರ ವಿರೋಧದ ನಡುವೆಯೂ ಗೋವಾದತ್ತ ಟ್ರಿಪ್ಪು ಹೊರಡೋ ಗೆಳೆಯರ ಸುತ್ತ ಈ ಕಥೆ ಸುತ್ತುತ್ತೆ. ಬೆಂಗಳೂರಿಂದ ಗೋವಾದತ್ತ ಹೊರಡೋ ಪಯಣ, ಸಡನ್ನಾಗಿ ಸಿಕ್ಕ ಸ್ವಾತಂತ್ರ್ಯದ ಹ್ಞೂಂಕಾರದ ನಡುವೆಯೇ ಟ್ರಿಪ್ಪು ಹೊರಟ ಆ ಸ್ನೇಹಿತರಿಗೆ ಅನಿರೀಕ್ಷಿತ ಆಘಾತವೊಂದು ಎದುರಾಗುತ್ತೆ. ಅದರಾಚೆಗೆ ಏನೇನಾಗುತ್ತೆಂಬ ಸೂಕ್ಷ್ಮವಾದ ಕಥೆಯೊಂದನ್ನು ರಾಜ್ ಗೋಪಿ ಪಯಣಿಗರು ಮೂಲಕ ಹೇಳ ಹೊರಟಿದ್ದಾರಂತೆ.

ಇದುವರೆಗೂ ಜರ್ನಿಗೆ ಸಂಬಂಧಿಸಿದ ಸಾಕಷ್ಟು ಕಥೆಗಳು ಬಂದಿವೆ. ಆದರೆ ಈ ಪಯಣಿಗರದ್ದು ಮಾತ್ರ ವಿಭಿನ್ನವಾದ ಪಯಣ. ಶೇಖಡಾ ಎಂಭತ್ತರಷ್ಟು ಚಿತ್ರೀಕರಣವನ್ನ ಕಾರಿನಲ್ಲಿಯೇ ನಡೆಸಲಾಗಿದೆಯಂತೆ. ಇದು ನಿಜಕ್ಕೂ ಬಲು ರಿಸ್ಕೀ ಕೆಲಸ. ಅದೆಲ್ಲವನ್ನೂ ಅಚ್ಚುಕಟ್ಟಾಗಿ ಮುಗಿಸಿಕೊಂಡಿರೋ ರಾಜ್ ಗೋಪಿ ಸೂರ್ಯ ಇದೇ ಏಪ್ರಿಲ್ 17ರಂದು ಪಯಣಿಗರನ್ನು ಪ್ರೇಕ್ಷಕರ ಮುಂದೆ ತರಲು ತೀರ್ಮಾನಿಸಿದ್ದಾರೆ.

ಸಮಾನ ಮನಸ್ಕ ಗೆಳೆಯರೇ ಸೇರಿಕೊಂಡು ಕೊಳನ್ ಕಲ್ ಮಹಾಗಣಪತಿ ಬ್ಯಾನರ್ ನಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಕಥೆಯೇ ಹೀರೋ. ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ರಾಘವೇಂದ್ರ ನಾಯಕ್, ನಾಗರಾಜ್ ರಾವ್, ರಾಘವೇಂದ್ರ ಬೂದನೂರು ಮತ್ತು ಸುಧೀರ್ ನಟಿಸಿದ್ದಾರೆ. ವಿನು ಮನಸು ಸಂಗೀತ ನಿರ್ದೇಶನ ಮತ್ತು ಹಿನ್ನೆಲೆ ಸಂಗೀತ ನೀಡಿದ್ದಾರೆ.


Posted

in

by

Tags:

Comments

Leave a Reply