pepe kannada movie review

ಪೆಪೆಯ ಪ್ರಪಂಚದಲ್ಲಿ ಹರಿದದ್ದು ಎಷ್ಟೊಂದು ನೆತ್ತರು!

ಅದು ಅರಣ್ಯವೊಂದಕ್ಕೆ ಅಂಟಿಕೊಂಡಂತಾ ಊರು. ಹೆಸರು ಬದನಾಳು. ಆ ಊರಿನಲ್ಲೇ ಇರುವ ನಾಲ್ಕಾರು ಪ್ರಮುಖರಲ್ಲಿ ಒಬ್ಬೊಬ್ಬರದ್ದು ಒಂದೊಂದು ಪಂಗಡ, ಜಾತಿ… ಮೇಲು ಕೀಳುಗಳ ತಾರತಮ್ಯ, ವ್ಯಾಜ್ಯಗಳು ಅಲ್ಲಿ ತಲೆಮಾರುಗಳಿಂದಲೂ ಚಾಲ್ತಿಯಲ್ಲಿರುತ್ತವೆ. ಅದರ ಕಟ್ಟಕಡೆಯ ಕೊಂಡಿಯಂತೆ ನಿಂತವನು ಪೆಪೆ. ತಾತ ರಾಯಪ್ಪ, ತಂದೆ ತಿಮ್ಮಪ್ಪ, ಮಾವ ಗುಣ.. ಹೀಗೆ ತನ್ನ ವಂಶದ ಒಬ್ಬೊಬ್ಬರನ್ನೇ ಬಲಿ ತೆಗೆದುಕೊಳ್ಳಲು ನಿಂತ ಮಲಬಾರಿ ಫ್ಯಾಮಿಲಿ. ರಾಯಪ್ಪ ಮತ್ತು ಮಲಬಾರಿ ಫ್ಯಾಮಿಲಿಯ ನಡುವೆ ಕಡ್ಡಿ ಗೀರುವ ಬ್ರಾಹ್ಮಣ್ಯ ಇತ್ಯಾದಿಗಳ್ನು ಸೇರಿಸಿ ಇಡೀ ಸಿನಿಮಾವನ್ನು ಅನೇಕ ರೂಪಕಗಳ ಮೂಲಕವೇ ಹೇಳಲಾಗಿದೆ.

pepe kannada movie review
pepe kannada movie review

ಒಂದು ಊರು, ಅಲ್ಲಿ ಹರಿಯುವ ತೊರೆ, ಅದರಲ್ಲಿ ನಡೆಯುವ ಮರಳು ವ್ಯಾಪಾರ, ಆ ತೊರೆಯನ್ನು ಅವಲಂಭಿಸಿದ ಕಾಲೋನಿಯೊಂದರ ತಳಸಮುದಾಯ, ಆ ತೊರೆಗೆ ಬೇಲಿ ಹಾಕಿಕೊಂಡ ನೀಚರು… ಇವೆಲ್ಲದರ ನಟ್ಟನಡುವೆ ನಿಂತು ತನ್ನವರಿಗಾಗಿ ಬಡಿದಾಡುವವನು ಪೆಪೆ!

ನಿರ್ದೇಶಕ ಶ್ರೀಲೇಶ್ ನಾಯರ್ ತೀರಾ ಗಂಭೀರ ವಿಚಾರಗಳಿಗೆ ಯಾವುದೇ ಅತಿರಂಜಕತೆಯನ್ನು ಬೆರೆಸದೆ ಹೇಳಿದ್ದಾರೆ. ಅದನ್ನು ಹೇಳುವ ಧಾಟಿ ಮಾತ್ರ ಕ್ಲಿಷ್ಟಕರವಾಗಿದೆ. ಮಲಯಾಳಂ ಸಿನಿಮಾಗಳಲ್ಲಿ ಕಥೆ ಹೇಳುವ ರೀತಿಯನ್ನು ಇಲ್ಲಿ ಅನುಸರಿಸಿದ್ದಾರೆ. ʻʻಕಮರ್ಷಿಯಲ್  ಸಿನಿಮಾಗಳನ್ನು ನೋಡುವ ಕನ್ನಡದ ಪ್ರೇಕ್ಷಕರಿಗೆ ಇದು ಸಲೀಸಾಗಿ ಅರ್ಥವಾಗೋದು ಕಷ್ಟʼʼ ಅಂತಾ ಅನ್ನಿಸಿದರೂ, ತುಂಬಾ ಸೂಕ್ಷ್ಮವಾಗಿ ನೋಡಿದರೆ ಎಲ್ಲವೂ ಅರ್ಥವಾಗುತ್ತದೆ.

ಯಾರನ್ನೂ ನೆಮ್ಮದಿಯಾಗಿ ಬದುಕಲು ಬಿಡದೆ, ಕಡೆಗೆ ತಾವೂ ಬದುಕದ ಜನ. ಅನಾದಿಕಾಲದಿಂದಲೂ ಜಾತಿಯೆನ್ನುವ ವಿಷದ ಬೀಜ ಬಿತ್ತಿ, ಕಾಲಕಾಲಕ್ಕೆ ಅದಕ್ಕೆ ನೀರು, ಗೊಬ್ಬರ ಇತ್ಯಾದಿಗಳನ್ನು ನೀಡಿ, ಹೆಮ್ಮರದಂತೆ ಪೋಷಿಸುವ ಪುರೋಹಿತಶಾಹಿ ವ್ಯವಸ್ಥೆಗೆ ವಿಷ ಹಾಕಿ ಕೊಲ್ಲೋದು ಚಿತ್ರದ ಅತ್ಯಂತ ಕಾಡುವ ಮೆಟಫರ್ ಗಳಲ್ಲೊಂದು.

Vinay Rajkumar's 'Pepe' Gets 'A' Certificate from Censor Board | Times Now

ವಿನಯ್ ರಾಜ್ ಕುಮಾರ್ ಈ ಹಿಂದೆ ಅನಂತು ವರ್ಸಸ್ ನುಸ್ರತ್ ಮತ್ತು ಒಂದು ಸರಳ ಪ್ರೇಮಕತೆ ಸಿನಿಮಾಗಳ ಮೂಲಕ ಹೀಗೂ ಅಭಿನಯಿಸಬಲ್ಲೆ ಅನ್ನೋದನ್ನು ತೋರಿಸಿಕೊಟ್ಟಿದ್ದರು. ಪೆಪೆಯಲ್ಲಿ ವಿನಯ್ ಕಾಣಿಸಿಕೊಂಡಿರುವ ರೀತಿ ನಿಜಕ್ಕೂ ರೋಚಕ. ಅಬ್ಬರದ ಮಾತುಗಳಿಲ್ಲದೆ, ಆಡಂಬರ ತೋರದೆ ಕಣ್ಣುಗಳಲ್ಲೇ ಅಭಿನಯಿಸಿದ್ದಾರೆ. ಹೈ ವೋಲ್ಟೇಜ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ವಿನಯ್ ಎಂಥಾ ಪಾತ್ರ ಕೂಡಾ ಮಾಡಬಲ್ಲ ಕಲಾವಿದ ಅನ್ನೋದು ರುಜುವಾತಾಗಿದೆ. ತಮಿಳಿನ ಧನುಷ್, ತೆಲುಗಿನ ನಾನಿ ಮುಂತಾದವರ ಸಾಲಿನಲ್ಲಿ ಸಲೀಸಾಗಿ ನಿಲ್ಲಬಲ್ಲ ನಟ ವಿನಯ್ ರಾಜ್ ಕುಮಾರ್ ಅನ್ನೋದರಲ್ಲಿ ಯಾವ ಡೌಟೂ ಇಲ್ಲ!

ನಾಯಕಿ ಕಾಜಲ್‌ ಕುಂದರ್‌ ಕೂಡಾ ಸಹಜವಾಗಿ ಅಭಿನಯಿಸಿ ಸಿನಿಮಾದ ಶಕ್ತಿ ಹೆಚ್ಚಿಸಿದ್ದಾರೆ. ಮೇದಿನಿ ಕೆಳಮನೆಯ ನಟನೆ ಕೂಡಾ ಬೆಂಕಿ. ಅನೇಕ ವರ್ಷಗಳಿಂದ ಹಿರಿ ತೆರೆಯಿಂದ ದೂರವೇ ಉಳಿದಿದ್ದ ಹಿರಿ ನಟ ಕಿಟ್ಟಿ ಪಾತ್ರ ಮತ್ತು ನಟನೆ ಎರಡೂ ತೂಕವಾಗಿದೆ. ಮಯೂರ್‌ ಮಟೇಲ್‌ ಮತ್ತೆ ಮೇಲೆದ್ದು ಬರೋದು ಖಚಿತ!

ನಿರ್ದೇಶಕ ಶ್ರೀಲೇಶ್ ನಾಯರ್ ತುಂಬಾನೇ ಬುದ್ದಿವಂತ ನಿರ್ದೇಶಕ. ಕಥೆ ಹೇಳುವ ವಿಧಾನ ಜನಪ್ರಿಯ ಶೈಲಿಯಲ್ಲಿದ್ದಿದ್ದರೆ ಬಹುಶಃ ಶ್ರೀಲೇಶ್ ಕನ್ನಡದ ವೆಟ್ರಿಮಾರನ್ ಅನ್ನಿಸಿಕೊಳ್ಳುತ್ತಿದ್ದರು. ಮೊದಲ ಚಿತ್ರಕ್ಕೇ ಇಂಥದ್ದೊಂದು ಪ್ರಯೋಗಕ್ಕೆ ಕೈ ಹಾಕಿರುವ ಇವರ ಧೈರ್ಯ ನಿಜಕ್ಕೂ ಮೆಚ್ಚಬೇಕು. ವಿಷಯಾಧಾರಿತ ಕಥಾವಸ್ತುಗಳನ್ನು ಶ್ರೀಲೇಶ್‌ ಮನಮುಟ್ಟುವಂತೆ ಹೇಳಬಲ್ಲರು.

ಪೆಪೆಯಲ್ಲಿ ಶ್ರೀಲೇಶ್‌ ನಿರ್ದೇಶನ, ವಿನಯ್‌ ನಟನೆಯ ಜೊತೆಗೆ ಇನ್ನೂ ಮೂರು ಜನ ತಂತ್ರಜ್ಞರು ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಛಾಯಾಗ್ರಾಹಕ ಅಭಿಷೇಕ್‌ ಕಾಸರಗೋಡು ಇಟ್ಟಿರುವ ಒಂದೊಂದು ಫ್ರೇಮು ಕೂಡಾ ಬ್ಯೂಟಿಫುಲ್.‌ ಹಿನ್ನೆಲೆ ಸಂಗೀತದಲ್ಲಿ ಪೂರ್ಣಚಂದ್ರ ತೇಜಸ್ವಿ ಹೊಸ ಶಬ್ದಗಳನ್ನು ಕೇಳಿಸಿ ಬೇರೆಯದ್ದೇ ಜಗತ್ತಿಗೆ ಕರೆದೊಯ್ದಿದ್ದಾರೆ. ಹಾಗೆಯೇ ಇಂಥದ್ದೊಂದು ಪ್ಯಾಟ್ರನ್ನಿನ ಸಿನಿಮಾವನ್ನು ಎಡಿಟ್‌ ಮಾಡಿರುವ ಸಂಕಲನಕಾರ ಮನು ಶೆಡ್ಗಾರ್‌ ಕೌಶಲ್ಯತೆ ದೊಡ್ಡದು. ಡಿಫರೆಂಟ್‌ ಡ್ಯಾನಿ ಕಂಪೋಸ್‌ ಮಾಡಿರುವ ಫೈರ್‌ ಫೈಟ್‌, ನರಸಿಂಹ ಸೃಷ್ಟಿಸಿರುವ ಸ್ಟ್ರೀಟ್‌ ಫೈಟ್‌ ಮತ್ತು ರವಿವರ್ಮ ಸಂಯೋಜಿಸಿರುವ ಕ್ಲೈಮ್ಯಾಕ್ಸ್‌ ಸಾಹಸ ದೃಶ್ಯಗಳಂತೂ ಒಂದಕ್ಕಿಂತಾ ಒಂದು ರೋಚಕವಾಗಿ ಮೂಡಿಬಂದಿವೆ. ಒಂದೇ ಆಂಗಲ್ಲಿನಲ್ಲಿ ಟ್ರ್ಯಾಲಿ ಶಾಟ್‌ ಮೂಲಕ ಕಂಪೋಸ್‌ ಮಾಡಿರುವ ಸಾಹಸದ ದೃಶ್ಯ ಹೊಸತನದಿಂದ ಕೂಡಿದೆ.

Kannada Movies Review Archives - cinesparsh.com

ವೈಲೆನ್ಸು ಜಾಸ್ತಿ ಅನ್ನಿಸಿದರೂ, ಕೆಲವೊಂದು ನೆಲದ ಕಥೆಗಳನ್ನು, ನಡೆದ ಘಟನಾವಳಿಗಳನ್ನು ಆ ಹಿಂಸೆಯ ಮರುಸೃಷ್ಟಿಯ ಮೂಲಕ ಹೇಳಿದರೇನೆ ನೋಡುಗರೆದೆಗೆ ದಾಟೋದು. ಇವೆಲ್ಲ ಏನೇ ಆಗಲಿ, ಪೆಪೆ ಕನ್ನಡದ ಮಟ್ಟಿಗೆ ಹೊಸತು ಅನ್ನೋದು ಸತ್ಯ!


Posted

in

by

Tags:

Comments

Leave a Reply