ಸೆನ್ಸಾರ್ ಪಾಸಾದ ‘ಪೆಪೆ’..ವಿನಯ್ ರಾಜ್ ಕುಮಾರ್ ಸಿನಿಮಾಗೆ ‘A’ ಸರ್ಟಿಫಿಕೇಟ್

ಒಂದು ಸರಳ ಪ್ರೇಮಕಥೆ ಅಭೂತಪೂರ್ವ ಯಶಸ್ಸಿನ ಬಳಿಕ ವಿನಯ್ ರಾಜ್ ಕುಮಾರ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ಪೆಪೆ. ಟೈಟಲ್ ಹಾಗೂ ಟೀಸರ್ ನಿಂದಲೇ ಕುತೂಹಲ ಹೆಚ್ಚಿಸಿರುವ ಈ ಸಿನಿಮಾ ಈಗ ಸೆನ್ಸಾರ್ ಪಾಸಾಗಿದೆ. ಸೆನ್ಸಾರ್ ಮಂಡಳಿಯಿಂದ ಪೆಪೆಗೆ ಎ ಸರ್ಟಿಫಿಕೇಟ್ ಸಿಕ್ಕಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ಕ್ಲಾಸ್ ಸಿನಿಮಾಗಳ ಮೂಲಕ ಕನ್ನಡ ಸಿನಿಪ್ರೇಮಿಗಳನ್ನು ರಂಜಿಸಿದ್ದ ವಿನಯ್ ರಾಜ್ ಕುಮಾರ್ ಪೆಪೆಗಾಗಿ ಮಾಸ್ ಅವತಾರ ತಾಳಿದ್ದಾರೆ. ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದಲ್ಲಿ ವಿನಯ್ ರಗಡ್‌ ಲುಕ್‌ ಅಬ್ಬರಿಸಿದ್ದಾರೆ. ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಚಿತ್ರ ಇದಾಗಿದ್ದು, ಇದುವರೆಗೂ ಈ ರೀತಿಯ ಪಾತ್ರದಲ್ಲಿ ವಿನಯ್ ಕಾಣಿಸಿಕೊಂಡಿಲ್ಲ.

ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್‌ ಜಿ. ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ.

ಡಾ. ರವಿವರ್ಮ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್‌ ಸಿನಿ ವೆಂಚರ್‌, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Comments

Leave a Reply