ಕಿಚ್ಚ ಸುದೀಪ ಅಂದರೇನೆ ಒಂದು ಗತ್ತು, ಗೈರತ್ತು. ಇವರ ಮಾತಿನ ತಾಕತ್ತು ಜಗತ್ತಿಗೇ ಗೊತ್ತು. ಇತ್ತೀಚೆಗೆ ನಮ್ಮ ಕನ್ನಡ ಚಿತ್ರರಂಗ, ಮೀಡಿಯಾದವರ ಆದಿಯಾಗಿ ಎಲ್ಲರ ಬಾಯಲ್ಲೂ ʻಕನ್ನಡ ಚಿತ್ರರಂಗ ಸೋಲುತ್ತಿದೆ. ಏನಾದರೂ ಮಾಡಿ ಗೆಲ್ಲಿಸಬೇಕುʼ ಅನ್ನೋ ಮಾತೇ ಕೇಳಿಬರುತ್ತಿದೆ. ಕಿಚ್ಚ ಸುದೀಪ ಅವರು ʼಪೆಪೆʼ ಚಿತ್ರದ ಸಮಾರಂಭದಲ್ಲಿ ಹೇಳಿದ ಮಾತನ್ನು ಕೇಳಿದರೆ ಯಾರಿಗಾದರೂ ʻಹೌದಲ್ವಾ?ʼ ಅಂತಾ ಅನ್ನಿಸದೇ ಇರೋದಿಲ್ಲ. ಕನ್ನಡ ಚಿತ್ರರಂಗಕ್ಕೆ ಭರ್ತಿ ತೊಂಭತ್ತು ವರ್ಷಗಳ ಇತಿಹಾಸವಿದೆ. ಇನ್ನು ಹತ್ತು ವರ್ಷಗಳನ್ನು ಪೂರೈಸಿದರೆ ಸ್ಯಾಂಡಲ್ವುಡ್ಗೆ ನೂರು ತುಂಬಲಿದೆ. ಇಷ್ಟು ಸುದೀರ್ಘ ಅವಧಿಯಲ್ಲಿ ಸಾವಿರಾರು ಸಿನಿಮಾಗಳು ತೆರೆಗೆ ಬಂದಿವೆ. ಹಾಗೆ ನೋಡಿದರೆ, ಗೆಲುವಿಗಿಂತಾ ಸೋಲಿನ ಪ್ರಮಾಣ ಹೆಚ್ಚು. ಈ ಸೋಲು-ಗೆಲುವಿನ ಆಚೆಗೆ ಚಿತ್ರರಂಗ ಇನ್ನೂ ಜೀವಂತವಾಗಿ ಉಳಿದಿದೆ; ಅದ್ಭುತವಾಗಿ ಬೆಳೆದಿದೆ. ಚೆಂದದ ಸಿನಿಮಾಗಳು ಬಂದಾಗ ಪ್ರೇಕ್ಷಕರು ಕೊಂಡಾಡಿದ್ದಾರೆ, ಇಲ್ಲಿನ ಕಲಾವಿದರನ್ನು ದೇವರಂತೆ ಮೆರೆಸಿದ್ದಾರೆ. ಹೀಗಿರುವಾಗ ʻಸೋಲುತ್ತಿದ್ದೀವಿ, ಗೆಲ್ಲಿಸಿʼ ಅಂತಾ ಅಂಗಲಾಚುವುದು ಪ್ರಮಾದವೇ. ಕಿಚ್ಚ ಹೇಳಿರುವ ಮಾತಿನಲ್ಲಿ ಕಿಂಚಿತ್ತೂ ತಪ್ಪಿಲ್ಲ. ʻʻನಮ್ಮ ಜನರನ್ನ, ನಮ್ಮ ಭಾಷೆಯನ್ನು ನಂಬಿ ಸಿನಿಮಾ ಮಾಡಿ. ನೋಡಕ್ಕಾಗದೇ ಇರೋರು ನೋಡೋದು ಬೇಡ! ನೋಡೋರಿಗಾಗಿ ಸಿನಿಮಾ ಮಾಡಿ!!ʼʼ ಅಂತಾ ಅಭಿನಯ ಚಕ್ರವರ್ತಿ ಮಾರ್ಮಿಕವಾಗೇ ತಿವಿದಿದ್ದಾರೆ. ಶುದ್ಧ ಸ್ವಾಭಿಮಾನದ ಮಾತುಗಳನ್ನಾಡಿದ್ದಾರೆ…
ಸಿಕ್ಕಸಿಕ್ಕವರನ್ನು ಸೊಂಡಿಲಿನಲ್ಲಿ ಬಡಿದು, ತುಳಿದು ಪುಂಡಾಟ ಮಾಡುತ್ತಿದ್ದ ಅನಾಹುತಕಾರಿ ಮನಸ್ಸಿನ ಆನೆಯೊಂದು ʻಕೊಲೆಗಾರʼ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿತು. ಪ್ರತೀ ಸಲ ತಪ್ಪಿಸಿಕೊಳ್ಳುತ್ತಿದ್ದ ಆನೆ ಈಸಲ ತನ್ನ ಖೆಡ್ಡಾವನ್ನು ತಾನೇ ತೋಡಿಕೊಂಡಿತ್ತು. ಈ ಜೀವವಿರೋಧಿ ಕೃತ್ಯವನ್ನು ನೀತಿ ಮರೆತ ʻಕೆಲವುʼ ಮನಸ್ಸುಗಳು ಸಮರ್ಥಿಸಿಕೊಳ್ಳುತ್ತಿವೆ. ಯಾವುದೋ ಒಂದು ಆನೆ ಮಾಡಿದ ತಪ್ಪಿಗೆ ʻಅಂಬಾರಿ ಮೆರವಣಿಗೆಯನ್ನೇ ನಿಲ್ಲಿಸಬೇಕುʼ ಎನ್ನುವಂತಾ ಪೋಸ್ಟುಗಳನ್ನು ಹಾಕಿ ತಮ್ಮಷ್ಟಕ್ಕೆ ತಾವು ಸಮಾಧಾನ ಮಾಡಿಕೊಳ್ಳುತ್ತಿವೆ. ಆದರೆ ದುಷ್ಟ ಸಂಹಾರಿಣಿ, ಶಕ್ತಿದೇವತೆ ತಾಯಿ ಚಾಮುಂಡಿಗೆ ಗೊತ್ತಿಲ್ಲವಾ? ಯಾರನ್ನು ಗೆಲ್ಲಿಸಬೇಕು? ಯಾರನ್ನು ಸೋಲಿಸಬೇಕು ಅಂತಾ… ಭೀಮನನ್ನು ಭರ್ಜರಿಯಾಗಿ ಗೆಲ್ಲಿಸಿದ್ದಾಳೆ. ಗಣೇಶನ ತಲೆಮೇಲಿದ್ದ ಚಿನ್ನದ ಕಿರೀಟದ ಭಾರ ಮತ್ತಷ್ಟು ಹೆಚ್ಚಾಗಿದೆ… ಇದನ್ನೆಲ್ಲಾ ಕಂಡು ʻಯಾವ ಸಿನಿಮಾಗಳನ್ನೂ ನೋಡಬೇಡಿʼ ಅಂದಿದ್ದ ಮತಿಗೇಡಿಗಳ ಬುಡಕ್ಕೆ ಬಗ್ಗಿಸಿಕೊಂಡು ಬಿರಡೆ ಬಿಗಿದಂತಾಗಿದೆ.
ಎಂತೆಂಥಾ ಮಹಾನುಭಾವರು ಹುಟ್ಟಿ, ಬೆಳೆದು, ಬೆಳೆಸಿದ ಶ್ರೇಷ್ಠ ಕ್ಷೇತ್ರ ಚಿತ್ರರಂಗ. ಯಾರೋ ಒಬ್ಬರಿಂದ ಬೆಳೆದದ್ದೂ ಅಲ್ಲ, ಬಗ್ಗಿಸುವ ಮಾತೇ ಇಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಕಿಚ್ಚ ಸುದೀಪ ಅವರು ಆಡಿರುವ ಮಾತುಗಳು ನಿಜಕ್ಕೂ ಕನ್ನಡಿಗರ, ಕನ್ನಡ ಚಿತ್ರರಂಗದ ಗತ್ತನ್ನು ಹೆಚ್ಚಿಸಿದೆ. ಕಿಚ್ಚ ಕನ್ನಡ ಚಿತ್ರರಂಗದ ದೀಪವನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿದವರು; ಪ್ರತಿಫಲವೆನ್ನುವಂತೆ ಬೆಳೆಯುತ್ತಲೇ ಇರುವವರು. ಗುಂಪುಗಾರಿಕೆ, ಸೇಡು, ದ್ವೇಶ ಯಾವುದಕ್ಕೂ ಆಸ್ಪದ ಕೊಡದೆ ʻಎಲ್ಲರೂ ನಮ್ಮವರುʼ ಎನ್ನುವ ಮನೋಭಾವ ಬೆಳೆಸಿಕೊಂಡವರು. ಹೊಸಬರನ್ನು ಸದಾ ಪೊರೆಯುವವರು. ಸದ್ಯ ಶ್ರೀಲೇಶ್ ನಾಯರ್ ನಿರ್ದೇಶನದ, ವಿನಯ್ ರಾಜ್ಕುಮಾರ್ ಅವರ ʻಪೆಪೆʼಗೆ ಸುದೀಪ್ ಸಾಥ್ ಸಿಕ್ಕಿದೆ. ಟ್ರೇಲರಿನಲ್ಲೇ ಕಾಡುವ ಗುಣ ಹೊಂದಿರುವ ಪೆಪೆ ಕೂಡಾ ಗೆಲ್ಲಲಿ…
No Comment! Be the first one.