” ನೀನು ಚಂದಿರನ ಭಾಷೆಯಲ್ಲಿ ಹಾಡು ಗುನುಗಿದರೆ ನಾನು ಭೂಮಿಯ ಭಾಷೆಯಲ್ಲಿ ಹಾಡಲೇ ಮಗಳೇ..?”
ಅಮ್ಮನಿಲ್ಲದ 14 ವರ್ಷದ ಬುದ್ಧಿಮಾಂದ್ಯ ಮಗಳಿಗೆ ಅಪ್ಪ ಲಾಲಿ ಹಾಡು ಹೇಳುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಮಾತು ಬಾರದ, ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲದ ದೇವರ ಮಗುವನ್ನು ಪೋಷಿಸುವ ಅಕಾಲಿಕ ಹೊಣೆ ಅಪ್ಪನ ಹೆಗಲಿಗೆ ಬೀಳುತ್ತದೆ. ಅದಕ್ಕಾಗಿ ದುಬೈನಿಂದ ಭಾರತಕ್ಕೆ ಬಂದು ಮಗಳನ್ನು ಸೇರಿಕೊಳ್ಳುತ್ತಾನೆ. ಎಲ್ಲರಿಂದಲೂ ತಿರಸ್ಕಾರಕ್ಕೊಳಗಾದ ಮಗುವನ್ನು ಪ್ರಪಂಚದ ಪರಿವೆಗೆ ತಾಕದಂತೆ ಪ್ರಕೃತಿಯ ನಡುವೆ ಕರೆದುಕೊಂಡು ಹೊರಡುತ್ತಾನೆ.
ಮಲೆನಾಡಿನ ನಡುವಿನ ಸರೋವರದ ಅಂಚಿನಲ್ಲೊಂದು ಪುಟ್ಟ ಮನೆ. ಕಿವಿಗಿಚ್ಚುವ ಚಿಲಿಪಿಲಿ ಹಕ್ಕಿಗಳ ಹಾಡು. ಅಪ್ಪ ತನ್ನ ಮಗಳನ್ನು ಪೊರೆಯುವುದರಲ್ಲೇ ತನ್ನೆಲ್ಲ ಸಂತಸವನ್ನು ಕಂಡುಕೊಳ್ಳುತ್ತಾನೆ. ಸುಂದರ, ಮುಗ್ಧ ಲೋಕದಲ್ಲಿ ಎರಡು ಜೀವಗಳು ಉರಿಯುವಾಗ ಅಪ್ಪನಿಗೆ ವಿಕಲಚೇತನ ಮಗುವಿನ ‘ದೇಹ ಪ್ರಕೃತಿ’ ಅನೇಕ ಸವಾಲುಗಳನ್ನು ತಂದು ನಿಲ್ಲಿಸಿಬಿಡುತ್ತದೆ. ಅಪ್ಪ ಹೈರಾಣಾಗಿ ಹೋಗುತ್ತಾನೆ. ಸಿನಿಮಾ ಆರಂಭದಲ್ಲಿ..
” ಸಮುದ್ರದಲ್ಲಿ ದಾರಿ ಕಾಣದೆ ಮುಳುಗುವಾಗ
ದ್ವೀಪದಂತೆ ನೀ ಬಂದೆ..” ಎಂದು ಲಾಲಿಪದ ಹಾಡುವ ಅಪ್ಪ ಕೊನೆಯಲ್ಲಿ ಮಗಳೊಂದಿಗೆ ತಾನೂ ಆತ್ಮಾಹುತಿ ಮಾಡಿಕೊಳ್ಳಲು ಸಮುದ್ರದ ಮುಂದೆ ನಿಂತು ಬಿಡುತ್ತಾನೆ.!
ನಂತರ..?
ಒಂದು ಸುಂದರ, ಸಂಕೀರ್ಣ ಸಿನಿಮಾ perenbu ನೀವು ಅನುಭವಿಸಲೇಬೇಕಾದ ದೃಶ್ಯ ಕಾವ್ಯ . ಅಪ್ಪ- ಮಗಳು ಎಂಬ ಭಾವುಕ ಲೋಕದ ಕುರಿತು ಪ್ರಪಂಚಕ್ಕೆ ಹೇಳಿಕೊಡಬೇಕೇ..! ಮೋಹನ್ ಲಾಲ್ ಅಭಿಮಾನಿಯಾದ ನನಗೆ ಮುಮ್ಮುಟ್ಟಿ ಮೊದಲ ಸಲ ಶ್ರೇಷ್ಠ ನಟರಾಗಿ ಇಷ್ಟವಾಗಿದ್ದಾರೆ. ಮುಮ್ಮುಟ್ಟಿ ಸಿನೆಮಾದಲ್ಲಿ ನಟಿಸಿಲ್ಲ.. ಬದಲಾಗಿ ಅಪ್ಪನ ಪಾತ್ರವಾಗಿ ಹೋಗಿದ್ದಾರೆ..! ಸಿನಿಮಾದಲ್ಲಿನ ಪಾತ್ರಗಳು ಸ್ವಾಭಾವಿಕವಾಗಿ ಕಾಣುವಂತೆ ಚಿತ್ರಿಸಿದ್ದಾರೆ ನಿರ್ದೇಶಕ ರಾಮ್. ಯುವನ್ ಶಂಕರ್ ಸಂಗೀತ ಈ ಸಿನೆಮಾದಲ್ಲಿ ಕಾಡಿನೊಳಗಿನ ಚಿಲಿಪಿಲಿ..! ತೇನಿ ಈಶ್ವರ್ ಕಲಾತ್ಮಕ ಕುಸುರಿ ಕ್ಯಾಮರಾದಲ್ಲಿ ಹೆಣೆದಿದ್ದಾರೆ. ” ಅನ್ಬೇ ಅನ್ಬಿನ್ …” ಹಾಡು ವಿಜಯ್ ಜೇಸುದಾಸ್ ದನಿಯಲ್ಲಿ ಪದೇಪದೇ ಕೇಳಿಸಿಕೊಳ್ಳುವಂತೆ ಇದೆ. ಚಿತ್ರದ ಆರಂಭದಿಂದ ಅಂತ್ಯದವರೆಗೆ ‘ ಪ್ರಕೃತಿ’ ಯನ್ನು adjective ಆಗಿ ತನ್ನ ಹಾಗೂ ಮಗಳ ಕತೆ ಹೇಳುವ ನಾಯಕ, ಮಗಳ ದೇಹ ಪ್ರಕೃತಿಯ ಜಂಜಾಟದಿಂದ ನರಳುವ ವಿಷಯ ನಮಗೆ ಅರ್ಥವಾಗಿ ಹೋಗುತ್ತದೆ. ತಾಯಿಯೊಂದಿಗೆ ಹೇಳಿಕೊಳ್ಳ ಬಹುದಾದ ಖಾಸಗಿತನದ ವಿಷಯಗಳನ್ನು ಹೇಳಿಕೊಳ್ಳಲಾಗದ, ಮಾತು ಬಾರದ ಮಗುವಿನ ಸಂಕಟವನ್ನು ಅಪ್ಪ ಅರ್ಥ ಮಾಡಿಕೊಳ್ಳಲು ಹೊರಡುವ ಜರ್ನಿ ಕಠಿಣವಾಗುತ್ತದೆ.
ಇಂತಹ ಸಂಕೀರ್ಣ ವಿಷಯವನ್ನು ಹೇಳುವ perenbu ಕಮಲ್ ರ ‘ಮಹಾನದಿ’, ಅಂಬರೀಶರ ‘ಮೌನರಾಗ’, ವಿಷ್ಣುರ ‘ಲಾಲಿ’, ರೈ ರ ‘ನಾನು ನನ್ನ ಕನಸು’, ವಿಕ್ರಮ್ ರ ‘ದೈವ ತಿರುಮಗನ್’ ಸಾಲಿನಲ್ಲಿ ನಿಲ್ಲುವ ದೃಶ್ಯ ಕಾವ್ಯ. Oscar ಚರಿತ್ರೆಯಲ್ಲಿ ಸೇರ ಬಹುದಾದಂತಹ masterpiece. Must watch movie.
No Comment! Be the first one.