ಸದ್ಯ ವಿಜಯಪ್ರಸಾದ್ ನಿರ್ದೇಶಿಸುತ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ಅರುಣ್ʼಗೆ ಒಂದೊಳ್ಳೆ ಪಾತ್ರ ನೀಡಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಸೀರಿಯಸ್ಸಾದ ರೋಲುಗಳನ್ನು ನಿಭಾಯಿಸಿದ್ದ ಅರುಣ್ ಮೊದಲ ಬಾರಿಗೆ ಕಾಮಿಡಿ ಪಾತ್ರವನ್ನು ನಿರ್ವಹಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸಹಜವಾಗಿ ನಟಿಸುವ ನಟರು ವಿರಳ. ಗೊಂಬೆಗಳ ಲವ್ ಸಿನಿಮಾದ ಮೂಲಕ ಚಿತ್ರಜಗತ್ತಿಗೆ ಪರಿಚಯಗೊಂಡವರು ಅರುಣ್. ತೆರೆಯಮೇಲೆ ಇವರನ್ನು ನೋಡಿದರೆ ನಟಿಸುತ್ತಿದ್ದಾರೆ ಎನ್ನುವ ಯಾವ ಫೀಲೂ ಹುಟ್ಟುವುದಿಲ್ಲ. ಬದಲಿಗೆ, ನಮ್ಮ ನಡುವೆಯೇ ಇರುವ ಪಾತ್ರವೊಂದು ಎದುರು ಬಂದು ನಿಂತಂತೆ ಕಾಣುತ್ತದೆ. ಗೊಂಬೆಗಳ ಲವ್ ನಂತರ ದಾದಾ ಈಸ್ ಬ್ಯಾಕ್ ಸಿನಿಮಾದಲ್ಲೂ ಹೀರೋ ಆಗಿ ನಟಿಸಿದ ಅರುಣ್ ನಟನೆಯ ಹಾದಿಬೀದಿ ಲವ್ ಸ್ಟೋರಿ ಎನ್ನುವ ಚಿತ್ರವೊಂದು ರೆಡಿಯಾಗಿ ಬಹಳ ಕಾಲವೇ ಆಗಿದೆ.
ಅರುಣ್ ರಂಥಾ ಪ್ರತಿಭಾವಂತ ನಟನತ್ತ ದೊಡ್ಡ ನಿರ್ದೇಶಕರೆನಿಸಿಕೊಂಡವರು ತಿರುಗಿ ನೋಡುವ ಜರೂರತ್ತಿತ್ತು. ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದ ಟ್ಯಾಲೆಂಟೆಡ್ ಡೈರೆಕ್ಟರ್ ಅಂತಲೇ ಅನ್ನಿಸಿಕೊಂಡಿರುವ ವಿಜಯ ಪ್ರಸಾದ್ ತಮ್ಮ ತಂಡಕ್ಕೆ ಅರುಣ್ʼರನ್ನೂ ಸೇರಿಸಿಕೊಂಡಿದ್ದಾರೆ. ನಟ ನೀನಾಸಂ ಸತೀಶ್ ಅವರನ್ನು ಅರುಣ್ ಸ್ವಂತ ಅಣ್ಣನಂತೆ ಭಾವಿಸುತ್ತಾರೆ. ಸತೀಶ್ ಅವರಿಗೂ ಅರುಣ್ ಅಂದರೆ ಅದೆಂಥದ್ದೋ ಕಕ್ಕುಲಾತಿ. ʻಅರಣನಿಗೆ ಒಳ್ಳೇದಾಗಬೇಕುʼ ಅಂತಷ್ಟೇ ಬಯಸುವ ಸತೀಶ್ ಅವರ ಕಾರಣದಿಂದಲೇ ವಿಜಯಪ್ರಸಾದ್ ಸಾಹಚರ್ಯ ಅರುಣ್ ಪಾಲಿಗೆ ದಕ್ಕಿದೆ.
ಸದ್ಯ ವಿಜಯಪ್ರಸಾದ್ ನಿರ್ದೇಶಿಸುತ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ಅರುಣ್ʼಗೆ ಒಂದೊಳ್ಳೆ ಪಾತ್ರ ನೀಡಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಸೀರಿಯಸ್ಸಾದ ರೋಲುಗಳನ್ನು ನಿಭಾಯಿಸಿದ್ದ ಅರುಣ್ ಮೊದಲ ಬಾರಿಗೆ ಕಾಮಿಡಿ ಪಾತ್ರವನ್ನು ನಿರ್ವಹಿಸಿದ್ದಾರೆ. ಲೌಕ್ ಡೌನ್ ಸಂದರ್ಭದಲ್ಲಿ ತೀರಾ ಕಡಿಮೆ ಅವಧಿಯಲ್ಲಿ ಸಿದ್ದಗೊಂಡ ಕಥೆ ಪೆಟ್ರೋಮ್ಯಾಕ್ಸ್ ಚಿತ್ರದ್ದು. ಕಥೆ ಬರೆಯುವ ಹಂತದಲ್ಲಿಯೇ ʻನಮ್ಮ ಅರುಣನಿಗಾಗಿ ಒಳ್ಳೆ ಕ್ಯಾರೆಕ್ಟರ್ ಬರೀರಿʼ ಅಂತಾ ಸತೀಶ್ ಹೇಳಿದ್ದರಂತೆ. ಆದರೆ, ಇಷ್ಟು ಮುಖ್ಯವಾದ ಪಾತ್ರ ತಮಗೆ ದಕ್ಕುತ್ತದೆ ಅಂತಾ ಸ್ವತಃ ಅರುಣ್ ಅಂದುಕೊಂಡಿರಲಿಲ್ಲವಂತೆ.
ಗಂಭೀರ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಎಂಥಾ ಅದ್ಭುತ ನಟ ಕೂಡಾ ಕಾಮಿಡಿ ಅಂದಾಗ ಒಂದು ಕ್ಷಣ ಕಂಗಾಲಾಗುವುದು ಸಹಜ. ನಟಿಸಿ ನಗಿಸುವುದು ತೀರಾ ಕಷ್ಟದ ಕೆಲಸ. ಮೊದಲ ದಿನದ ಚಿತ್ರೀಕರಣದಲ್ಲಿ ಅರುಣ್ ಕೂಡಾ ಸ್ವಲ್ಪ ಕಕ್ಕಾಬಿಕ್ಕಿಯಾಗಿದ್ದರಂತೆ. ಎರಡನೇ ದಿನದೊತ್ತಿಗೆ ಸ್ವತಃ ಡೈರೆಕ್ಟರ್ ವಿಜಯ ಪ್ರಸಾದ್ ಅವರೇ ಬಂದು ʻನಿಮ್ಮ ಕ್ಯಾರೆಕ್ಟನ್ನು ಟೇಕಾಫ್ ಮಾಡಿದ್ದೀರ. ಹೀಗೇ ಮುಂದುವರೆಸಿ ಸಾಕುʼ ಅಂದರಂತೆ. ಈಗ ಚಿತ್ರೀಕರಣಗೊಂಡ ಭಾಗವನ್ನು ನೋಡಿದವರೂ ಖುಷಿಯಾಗಿದ್ದಾರಂತೆ.
ಪೆಟ್ರೋಮ್ಯಾಕ್ಸ್ ಶೂಟಿಂಗ್ ಮುಗಿಯುತ್ತಿದ್ದಂತೇ ಅರುಣ್ ʻಗಿಪ್ಸಿʼ ಎನ್ನುವ ಸಿನಿಮಾದಲ್ಲಿ ನಟಿಸಲಿದ್ದಾರೆ. ಉದಯ್ ಕುಮಾರ್ ಮತ್ತು ನಿಜಗುಣ ನಿರ್ಮಿಸಿ ಶ್ರೀಲೇಶ್ ನಾಯರ್ ನಿರ್ದೇಶಿಸುತ್ತಿರುವ ಈ ಚಿತ್ರ ತೀರಾ ಭಿನ್ನ ಎನ್ನಿಸಿಕೊಳ್ಳುವ ಕಥಾವಸ್ತುವನ್ನು ಹೊಂದಿದೆ. ಶಿವಮೊಗ್ಗದ ಪರಿಸರ, ಅಲ್ಲಿನ ಭಾಷೆ, ಬಣ್ಣ ಎಲ್ಲವನ್ನೂ ಬಳಸಿಕೊಂಡು ರೂಪುಗೊಳ್ಳಲಿರುವ ಈ ಚಿತ್ರ ಜನವರಿ ನಂತರ ಆರಂಭಗೊಳ್ಳಲಿದೆ. ʻಪೆಟ್ರೋಮ್ಯಾಕ್ಸ್ʼ ಸಿನಿಮಾದಿಂದ ಅರುಣ್ ಸಾಮಾನ್ಯ ಜನರಿಗೂ ಪರಿಚಯಗೊಳ್ಳುವುದು ಗ್ಯಾರೆಂಟಿ. ʻಪೆಟ್ರೋಮ್ಯಾಕ್ಸ್ʼ ಅರುಣ್ ವೃತ್ತಿಬದುಕಿಗೆ ಭರವಸೆಯ ಹೊಸ ಬೆಳಕು ನೀಡಲಿ!
No Comment! Be the first one.