’ಪಿಂಕ್’ ಹಿಂದಿ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಮಿತಾಭ್ ಬಚ್ಚನ್ ಮತ್ತು ತಾಪ್ಸಿ ಪನ್ನು ನಟನೆಯ ಕೋರ್ಟ್ ಡ್ರಾಮಾ ಇದೀಗ ತಮಿಳಿನಲ್ಲಿ ಸಿದ್ಧವಾಗುತ್ತಿದೆ. ಅಮಿತಾಭ್ ನಿರ್ವಹಿಸಿದ್ದ ಲಾಯರ್ ಪಾತ್ರದಲ್ಲಿ ಅಜಿತ್ ನಟಿಸುತ್ತಿದ್ದು, ತಾಪ್ಸಿ ಜಾಗದಲ್ಲಿ ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ಇದ್ದಾರೆ. ಈಗಾಗಲೇ ಅರ್ಧದಷ್ಟು ಚಿತ್ರೀಕರಣ ನಡೆದಿದ್ದು, ಚಿತ್ರದ ಶೀರ್ಷಿಕೆಯಿನ್ನೂ ನಿಗಧಿಯಾಗಿರಲಿಲ್ಲ. ಚಿತ್ರಕ್ಕೆ ’ನೇರ್ಕೊಂಡ ಪಾರ್ವೈ’ ಎಂದು ನಾಮಕರಣವಾಗಿದ್ದು, ಫಸ್ಟ್ ಲುಕ್ ಬಿಡುಗಡೆಯಾಗಿದೆ. ’ವಿಶ್ವಾಸಂ’ ಬ್ಲಾಕ್ಬಸ್ಟರ್ ತಮಿಳು ಚಿತ್ರದ ನಂತರ ಅಜಿತ್ ನಟಿಸುತ್ತಿರುವ ಚಿತ್ರವಿದು. ಬ್ಲಾಕ್ಬಸ್ಟರ್ ’ವಿಶ್ವಾಸಂ’ ನಂತರ ತೆರೆಕಾಣಲಿರುವ ಈ ಚಿತ್ರವನ್ನು ಅಜಿತ್ ಅಭಿಮಾನಿಗಳು ಕುತೂಹಲದಿಂದ ಎದುರುನೋಡುತ್ತಿದ್ದಾರೆ.
ಬಾಲಿವುಡ್ನ ಬೋನಿ ಕಪೂರ್ ನಿರ್ಮಿಸುತ್ತಿರುವ ಚಿತ್ರವನ್ನು ವಿನೋದ್ ನಿರ್ದೇಶಿಸುತ್ತಿದ್ದಾರೆ. ಸಂಗೀತ ಸಂಯೋಜನೆ ಯುವನ್ ಶಂಕರ್ ರಾಜಾ ಅವರದು. ಕನ್ನಡ ಮೂಲದ ನಟಿ ಶ್ರದ್ಧಾ ಶ್ರೀನಾಥ್ ಅವರಿಗೆ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ. ಮಣಿರತ್ನಂ ನಿರ್ದೇಶನದ ’ಕಾಟ್ರು ವೆಳಿಯಿದೈ’ ಚಿತ್ರದ ಅತಿಥಿ ಪಾತ್ರದೊಂದಿಗೆ ಕಾಲಿವುಡ್ ಪ್ರವೇಶಿಸಿದ ನಟಿ ಬ್ಲಾಕ್ ಬಸ್ಟರ್ ’ವಿಕ್ರಂ ವೇದ’ ಚಿತ್ರದೊಂದಿಗೆ ಹೆಸರು ಮಾಡಿದರು. ನಿವಿನ್ ಪೌಲಿ ಅವರ ’ರಿಚ್ಚಿ’ ಮತ್ತು ಗೌತಮ್ ಕಾರ್ತಿಕ್ ನಿರ್ದೇಶನದ ’ಇವನ್ ತಾಂತಿರನ್’ ಚಿತ್ರಗಳ ನಂತರ ಅವರಿಗೀಗ ’ನೇರ್ಕೊಂಡ ಪಾರ್ವೈ’ನಲ್ಲಿ ಗಮನಾರ್ಹ ಪಾತ್ರ ಸಿಕ್ಕಿದೆ. ಇದೇ ವರ್ಷ ಮೇ ೧ರಂದು ನಟ ಅಜಿತ್ ಜನ್ಮದಿನದಂದು ಸಿನಿಮಾ ತೆರೆಕಾಣಲಿದೆ.