ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಘೋಷಣೆಯಾಗಿ ಎರಡೂವರೆ ವರ್ಷವಾಗುತ್ತಾ ಬಂದಿದೆ. ಧ್ರುವ ಅಭಿಮಾನಿಗಳೆಲ್ಲಾ ಬರುವ ಮಾರ್ಚ್‌ಗೆ ಸಿನಿಮಾ ತೆರೆಗೆ ಬರುತ್ತದೆ ಅಂತಾ ನಂಬಿಕೊಂಡಿದ್ದಾರೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಅದು ಮೇ-ಜೂನ್ ಆದರೂ ಆಗಬಹುದು ಎನ್ನುವಂತಿದೆ. ನಾಲ್ಕು ಹಾಡುಗಳ ಚಿತ್ರೀಕರಣ, ಉಳಿದಿರುವ ಟಾಕಿ ಭಾಗದ ಶೂಟಿಂಗು ಅಂತಾ ಏನಿಲ್ಲವೆಂದರೂ ಇನ್ನೂ ಮೂವತ್ತು ದಿನಗಳ ಚಿತ್ರೀಕರಣವೇ ಉಳಿದುಕೊಂಡಿದೆ. ಈ ನಡುವೆ ಸ್ವತಃ ಧ್ರುವಾ ಚಿತ್ರೀಕರಣಗೊಂಡಿರುವ ದೃಶ್ಯಗಳನ್ನು ಮತ್ತೊಮ್ಮೆ ಸಿ.ಜಿ.ಗೆ ಕಳಿಸಿದ್ದಾರೆ ಅನ್ನೋ ಮಾತೂ ಕೇಳಿಬರುತ್ತಿದೆ. ನಿರ್ಮಾಪಕರ ಬಳಿ ಯಾರಾದರೂ ಪೊಗರು ಯಾವಾಗ ರಿಲೀಸು? ಅಂತಾ ಪ್ರಶ್ನಿಸಿದರೆ, ಹೀರೋ ನಂಬರ್ ಕೊಡ್ತೀನಿ, ಅವರನ್ನೇ ಒಂದ್ಸಲ ಕೇಳಿಬಿಡಿ ಅನ್ನುತ್ತಿದ್ದಾರಂತೆ!

ಪೊಗರು ಚಿತ್ರ ಆರಂಭಕ್ಕೂ ಮುಂಚಿನಿಂದ ಹಿಡಿದು ಈಗಿನ ತನಕ ನಾನಾ ಕಾರಣಗಳಿಗಾಗಿ ಎಳೆದಾಡುತ್ತಲೇ ಇದೆ. ಸಾಮಾನ್ಯಕ್ಕೆ ನಿರ್ದೇಶಕ ನಂದಕಿಶೋರ್ ಶುರುಮಾಡಿದ ಸಿನಿಮಾಗಳು ಪಟಾಪಟ್ ಅಂತಾ ಮುಗಿದುಬಿಡುತ್ತವೆ. ಇದೊಂದು ಸಿನಿಮಾ ಮಾತ್ರ ಸುದೀರ್ಘ ಸಮಯ ತೆಗೆದುಕೊಂಡಿದೆ.

ಪೊಗರು ಚಿತ್ರ ಆರಂಭವಾದಾಗ ನಿರ್ದೇಶಕ ನಂದ ಕಿಶೋರ್ ಅವರ ಬಯಕೆಯಂತೆಯೇ ಅದಕ್ಕೆ ಬೇಕಿರೋ ತಯಾರಿಯನ್ನು ಧ್ರುವ ಆರಂಭಿಸಿದ್ದರು. ಈ ಚಿತ್ರದಲ್ಲಿ ಹದಿನೈದು ವರ್ಷದ ಹುಡುಗನಾಗಿಯೂ ಕಾಣಿಸಿಕೊಳ್ಳಬೇಕಿದ್ದುದರಿಂದ ಅದಕ್ಕೂ ರೆಡಿಯಾಗಲಾರಂಭಿಸಿದ್ದರು. ಆದರೆ ಇನ್ನೇನು ಟೇಕಾಫ್ ಆಗಬೇಕೆಂಬಷ್ಟರಲ್ಲಿ ಧ್ರುವ ಅವರ ತಾಯಿ ಅನಾರೋಗ್ಯಕ್ಕೀಡಾಗಿದ್ದರು. ಬಹಳಷ್ಟು ಕಾಲ ಖುದ್ದಾಗಿ ಅವರೇ ತಾಯಿಯ ದೇಖಾರೇಕಿ ನೋಡಿಕೊಂಡ ನಂತರ ಒಂದಷ್ಟು ಚೇತರಿಕೆ ಕಂಡು ಬಂದಿತ್ತು. ಆನಂತರವೇ ಧ್ರುವ ಚಿತ್ರೀಕರಣಕ್ಕೆ ಹಾಜರಾಗಿದ್ದರು. ಈ ನಡುವೆ ಮಾವ ಅರ್ಜುನ್ ಸರ್ಜಾ ಮೇಲೆ ಶೃತಿ ಹರಿಹರನ್ ಆರೋಪ ಮಾಡಿದಳು. ಅದೂ ಸಹ ಒಂದಷ್ಟು ದಿನ ಧೃವಾರನ್ನು ಡಿಸ್ಟರ್ಬ್ ಮಾಡಿಹಾಕಿತ್ತು. ನಂತರ ಅಣ್ಣನ ಮದುವೆ, ತಮ್ಮ ಎಂಗೇಜ್‌ಮೆಂಟು, ಮ್ಯಾರೇಜು ಮತ್ತು ಈಗ ಹನಿಮೂನಿಗೆ ಹೊರಟು ನಿಂತಿದ್ದಾರಂತೆ. ಇದೆಲ್ಲದರ ಮಧ್ಯೆ ಸಿನಿಮಾ ಲೇಟಾಗುತ್ತಲೇ ಇದೆ.

ಹೀಗೆ ಎದುರಾದ ಸರಣಿ ಕಾರಣಗಳಿಗಾಗಿ ಪೊಗರು ಚಿತ್ರ ನಿಧಾನವಾಗಿದೆ.   ಸಾಕಷ್ಟು ಸಣ್ಣ ಪುಟ್ಟ ಚಿತ್ರಗಳು, ಹೊಸಬರ ಸಿನಿಮಾಗಳು ಪೊಗರು ಮಾರ್ಚ್‌ಗೆ ಬಂದುಬಿಟ್ಟರೆ ನಮ್ಮ ಕತೆಯೇನು ಅಂತಾ ಯೋಚಿಸುತ್ತಿದ್ದಾರೆ. ಹಾಗೊಂದು ವೇಳೆ ಎಲ್ಲರೂ ಅಂದುಕೊಂಡಂತೆ ಮಾರ್ಚ್ ತಿಂಗಳಲ್ಲಿ ಪೊಗರು ರಿಲೀಸಾದರೆ ಅದು ಪವಾಡವಷ್ಟೇ. ಪ್ರಾಕ್ಟಿಕಲ್ಲಾಗಿ ಥಿಂಕ್ ಮಾಡಿದರೆ ಈ ಸಿನಿಮಾ ಬಿಡುಗಡೆಯೇನಿದ್ದರೂ ಮೇ-ಜೂನಿನಲ್ಲಷ್ಟೇ!

CG ARUN

ಕಾಲಾಂತಕನ ಕತೆ ಏನಿರಬಹುದು?

Previous article

You may also like

Comments

Leave a reply

Your email address will not be published. Required fields are marked *