ನಿರ್ಮಾಪಕನ ಸಂಕಟವನ್ನು ಕೇಳೋರು ಯಾರು?

ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡಿದ – ಇದು ತೀರಾ ಓಲ್ಡ್ ಗಾದೆ. ಆದರೆ ಈ ರಶ್ಮಿಕಾ ಮಂದಣ್ಣಳಂತಾ ನಟಿಯರು ಈ ಮಾತನ್ನು ಇವತ್ತಿಗೂ ಜೀವಂತವಾಗಿಟ್ಟಿದ್ದಾರೆ!

ಹೆಚ್ಚೇನಲ್ಲ… ಜಸ್ಟ್ ನಾಲ್ಕು ವರ್ಷಗಳ ಹಿಂದೆ ಅವಕಾಶಕ್ಕಾಗಿ ಕಂಡ ಕಂಡಲ್ಲೆಲ್ಲಾ ಅಲೆದು ಆಡಿಷನ್ ಕೊಡುತ್ತಿದ್ದ ಈಕೆ ಎಷ್ಟು ಬೇಗ ಬೆಳೆದಳು, ಏನೆಲ್ಲಾ ಮಾಡಿದಳು ಅನ್ನೋದನ್ನೊಮ್ಮೆ ತಿರುಗಿ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಕಿರಿಕ್ ಪಾರ್ಟಿ ಎನ್ನುವ ಒಂದೇ ಒಂದು ಚಿತ್ರದ ಮಹಾ ಗೆಲುವು ರಶ್ಮಿಕಾಳನ್ನು ಎಲ್ಲೆಲ್ಲಿಗೋ ಕರೆದೊಯ್ದು ನಿಲ್ಲಿಸಿತು. ಆ ನಂತರ ಈಕೆ ನಂಬಿದವರನ್ನು ಒದ್ದು ನಡೆದದ್ದು, ಅವಕಾಶ ಕೊಟ್ಟ ಕನ್ನಡ ಚಿತ್ರರಂಗವನ್ನು ಇಷ್ಟು ಬೇಗ ಕಡೆಗಣಿಸಿದ್ದೆಲ್ಲವೂ ಭಯಾನಕ ಸತ್ಯಗಳೇ…

ಪೊಗರು ಸಿನಿಮಾ ರಿಲೀಸ್ ಆಗುತ್ತಿದೆಯಲ್ಲಾ? ಈ ಕಾರಣಕ್ಕಾಗಿ ಅಲ್ಲೆಲ್ಲೋ ಹೈದ್ರಾಬಾದಿನಲ್ಲಿದ್ದ ಚಿತ್ರದ ಹೀರೋಯಿನ್ ರಶ್ಮಿಕಾಳನ್ನು ಕರೆಸಿಕೊಳ್ಳಲಾಗಿತ್ತು. ಮೊದಲ ಚಿತ್ರದ ಪ್ರೆಸ್ ಮೀಟ್ ದಿನ ಬನಶಂಕರಿಯ ಧರ್ಮಸ್ಥಳ ಮಂಜುನಾಥ ದೇವಾಲಯದ ಮರದ ಕೆಳಗೆ ಕೂತ ಮಂದಣ್ಣ ಮುಗ್ದವಾಗಿ ಮಾತಾಡಿದ್ದು ಪತ್ರಕರ್ತರ ಕಣ್ಣಲ್ಲಿ ಹಾಗೇ ಇದೆ. ಈಗ ಇದೇ ಹುಡುಗಿ ಸ್ಟಾರ್ ಹೊಟೇಲಲ್ಲಿ ಕೂತು ಬಿನ್ನಾಣದ ಭಾಷಣ ಮಾಡುತ್ತಿದ್ದಾಳೆ. ಸೌತ್ ಇಂಡಿಯಾದ ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಳ್ಳುತ್ತಿರುವ ಹುಡುಗಿ, ಸ್ಟಾರ್ ಹೊಟೇಲಲ್ಲಿ ಕೂತು ಮಾತಾಡೋದನ್ನು ಯಾಕೆ ತಪ್ಪು ಅನ್ನಬೇಕು? ಆದರೆ, ತನ್ನ ವರ್ಚಸ್ಸನ್ನು ಮುಂದಿಟ್ಟುಕೊಂಡು ರಶ್ಮಿಕಾ ಮಂದಣ್ಣ ನಡೆದುಕೊಳ್ಳುತ್ತಿರುವ ರೀತಿ, ನಿರ್ಮಾಪಕರನ್ನು ಸುಲಿಯುತ್ತಿರುವ ಪರಿ ಇದೆಯಲ್ಲಾ? ಅದು ಅಕ್ಷಮ್ಯ ಅಪರಾಧವಲ್ಲದೇ ಬೇರೇನೂ ಅಲ್ಲ!

ಪೊಗರು ಸಿನಿಮಾದ ಪ್ರೆಸ್ ಮೀಟ್ ಗಾಗಿ ರಶ್ಮಿಕಾ ಬೆಂಗಳೂರಿಗೆ ಬಂದಿದ್ದಳು. ಜೊತೆಗೆ ಮೂರು ಜನ ಅಸಿಸ್ಟೆಂಟುಗಳು, ಜೊತೆಗೊಬ್ಬ ಮ್ಯಾನೇಜರು. ರಶ್ಮಿಕಾ ಸೇರಿದಂತೆ ಎಲ್ಲರಿಗೂ ಶೆರ್ಟನ್ ಹೊಟೇಲಿನಲ್ಲಿ ಸೂಟ್ ರೂಮು, ಬಂದು ಹೋಗಲು ಬ್ಯುಸಿನೆಸ್ ಕ್ಲಾಸ್ ಫ್ಲೈಟ್ ಟಿಕೆಟ್, ಪತ್ರಿಕಾಗೋಷ್ಟಿ ಇತ್ಯಾದಿಗಳೆಲ್ಲಾ ಸೇರಿ ಬರೋಬ್ಬರಿ ಆರು ಲಕ್ಷ ರುಪಾಯಿಗಳ ದೊಡ್ಡ ಮೊತ್ತ ನಿರ್ಮಾಪಕರಿಗೆ ಖರ್ಚಾಗಿದೆ. ಪ್ರೆಸ್‌ ಮೀಟಲ್ಲಿ ಧರಿಸಲು ರಶ್ಮಿಕಾ ಕೊಂಡುಬಂದ ಮೂರು ಡ್ರೆಸ್ ರೇಟು ಲಕ್ಷ ಮೀರಿದೆಯಂತೆ… ಹೋದರೆ ಹೋಗಲಿ, ಇಷ್ಟೆಲ್ಲಾ ಖರ್ಚು ಮಾಡಿದ ಮೇಲಾದರೂ ಈಕೆಯಿಂದ ಪೊಗರು ಸಿನಿಮಾಗೆ ಪ್ರಚಾರ ಸಿಕ್ಕಿತಾ? ಪ್ರೆಸ್ ಮೀಟಲ್ಲಿ ಕೂತು ಈಕೆ ಮಾತಾಡಿದ್ದಾದರೂ ಏನು? ‘ಆಗ ಕರ್ನಾಟಕದ ಕ್ರಷ್ ಆಗಿತ್ತು. ಈಗ ನ್ಯಾಷನಲ್ ಕ್ರಷ್ ಆಗಿದೆ. ತನಗೆ ಯಾವ ಊರು ಇಷ್ಟ? ಏನು ತಿಂದರೆ ಕಷ್ಟ’ ಎಂಬಿತ್ಯಾದಿ ಕೆಲಸಕ್ಕೆ ಬಾರದ ವಿಚಾರಗಳ ಬಗ್ಗೆ ವಿವರ ನೀಡಿ ನುಲಿದಿದ್ದಾಳೆ.

ಸಾಮಾನ್ಯವಾಗಿ ಯಾವುದೇ ಪ್ರಜ್ಞಾವಂತ ಸ್ಟಾರ್ ಗಳು ಅಫಿಷಿಯಲ್ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಖಾಸಗಿ ವಿವರಗಳ ಬಗ್ಗೆಯಾಗಲಿ, ಬೇರೆ ಸಿನಿಮಾಗಳ ಕುರಿತ ಮಾಹಿತಿಯನ್ನಾಗಲಿ ನೀಡೋದಿಲ್ಲ. ದುಡ್ಡು ಖರ್ಚು ಮಾಡಿ ಕರೆಸಿಕೊಂಡ ನಿರ್ಮಾಪಕರ ಸಿನಿಮಾ ಕುರಿತಾಗಿ ವಿವರ ನೀಡಿ ಎದ್ದುಹೋಗಿತ್ತಾರೆ. ಆದರೆ ರಶ್ಮಿಕಾಗೆ ಇಂಥ ಕನಿಷ್ಠ ಜ್ಞಾನವೂ ಇದ್ದಂತಿಲ್ಲ. ಈಕೆಯ ನಡೆ ಹೀಗೇ ಮುಂದುವರೆದರೆ ಮತ್ತೆ ಹಳೇ ಮರದ ಕೆಳಗೆ ಕೂತು ಮಾತಾಡುವ ಸಂದರ್ಭ ಸೃಷ್ಟಿಯಾಗಲು ಹೆಚ್ಚು ಕಾಲ ಬೇಕಾಗಿಲ್ಲ…


Posted

in

by

Tags:

Comments

Leave a Reply