ಪೊಲೀಸರೆಂದರೆ ಬರೀ ಖಾಕಿ, ಲಾಠಿ, ಬೂಟು, ದರ್ಪವಷ್ಟೇ ನೆನಪಿಗೆ ಬರೋದಾ? ಅಥವಾ  ಶಿಸ್ತು, ತನಿಖೆ, ವಿಚಾರಣೆಗಳಷ್ಟೇ ಕಣ್ಣಮುಂದೆ ಸುಳಿದಾಡುತ್ತದಾ? ಪೊಲೀಸರಿಗೂ ಭಾವನೆಗಳಿವೆ, ಸಂವೇದನೆಯಿದೆ, ಕ್ರಿಯಾಶೀಲತೆ ಇದೆ ಅನ್ನೋದರ ಬಗ್ಗೆ ಸಾಮಾನ್ಯಕ್ಕೆ ಯಾರೂ ಗಮನಹರಿಸೋದೇ ಇಲ್ಲ.

ಸಿನಿಮಾಗಳಲ್ಲಿ ಪೊಲೀಸರನ್ನು ತೀರಾ ವಿಜೃಂಭಿಸಿ ಸೂಪರ್‌ ಹೀರೋಗಳನ್ನಾಗಿಸಿರುತ್ತಾರೆ. ಅಥವಾ ವಿಲನ್ನುಗಳನ್ನಾಗಿಸಿ ಜನರ ಮನಸ್ಸಿನಲ್ಲಿ ಭಯ ಬಿತ್ತಿರುತ್ತಾರೆ. ಈ ಕಾರಣಕ್ಕೇ ಬಹುಶಃ ಸಮಾಜ ಇಡೀ ಪೊಲೀಸ್‌ ಸಮೂಹವನ್ನು  ಸಿದ್ಧ ನೋಟದಲ್ಲಿ, ಒಂದೇ ಚೌಕಟ್ಟಿನಲ್ಲಿ ಬಂಧಿಸಿ ಕೂರಿಸಿದೆ. ಇತ್ತೀಚಿನ ದಶಕದಲ್ಲಿ ಪೊಲೀಸರ ನಡೆ, ನುಡಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಜನಸ್ನೇಹಿ ಕಾರ್ಯಕ್ರಮಗಳ ಮೂಲಕ ಅಧಿಕಾರಿಗಳು ನಾಗರಿಕರ ಮನಸ್ಸಿಗೆ ಹತ್ತಿರರಾಗುತ್ತಿದ್ದಾರೆ. ಸ್ನೇಹಯುತವಾಗಿ ಬೆರೆಯುತ್ತಿದ್ದಾರೆ. ಅತಿಮಾನುಷರಂತೆ ವರ್ತಿಸುವ ಪೊಲೀಸರು ಅಲ್ಲೊಬ್ಬರು ಇಲ್ಲೊಬ್ಬರು ಸಿಗಬಹುದು. ಹಾಗಂತ ಎಲ್ಲರೂ ಅದೇ ರೀತಿ ಇರಲು ಸಾಧ್ಯವಿಲ್ಲವಲ್ಲಾ?

ಮಾನವೀಯ ಮೌಲ್ಯಗಳನ್ನೇ ಉಸಿರಾಗಿಸಿಕೊಂಡು, ಪ್ರಾಮಾಣಿಕತೆ, ಕೆಲಸದ ನಿಷ್ಠೆಯೊಂದಿಗೆ, ಸಾಹಿತ್ಯ ಸಾಂಗತ್ಯವನ್ನು ಹೊಂದಿರುವ ಅನೇಕ ಅಧಿಕಾರಿಗಳಿದ್ದಾರೆ. ಕನ್ನಡದ ಮೇರು ಸಾಹಿತಿಗಳ ಮಕ್ಕಳು ಇಂದು ಪೊಲೀಸ್‌ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಾ ದಕ್ಷತೆಗೆ ಹೆಸರಾಗಿದ್ದಾರೆ. ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಡಿಐಜಿಪಿಯಾಗಿದ್ದು ಇತ್ತೀಚೆಗಷ್ಟೇ ನಿವೃತ್ತಿ ಹೊಂದಿರುವ ಡಾ. ಡಿ.ರಾಜಪ್ಪನವರು ಹಲವಾರು ವರ್ಷಗಳಿಂದ ಅಕ್ಷರಗಳ ನಂಟಿನಲ್ಲಿದ್ದಾರೆ. ಖಾಕಿಯ ಖದರಿನ ಜೊತೆಗೇ ಕಾವ್ಯದ ಗುಂಗು ಹತ್ತಿಸಿಕೊಂಡಿದ್ದಾರೆ.

ಚಿತ್ರದುರ್ಗದ ಹಿರೇಎಮ್ಮಿಗನೂರಿನಲ್ಲಿ ಹುಟ್ಟಿ ಬೆಳೆದ  ಡಿ.ಸಿ. ರಾಜಪ್ಪನವರು 1986ರಲ್ಲಿ ಹೊಳಲ್ಕೆರೆ ಬಿ.ಪಿ. ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಗೆ ಸೇರಿದ್ದರು. ನಂತರ ದೊಡ್ಡಬಳ್ಳಾಪುರದಲ್ಲಿ ಬಿ.ಡಿ.ಓ. ಕಛೇರಿಯ ಪ್ರಥಮ ದರ್ಜೆ ಸಹಾಯಕರಾಗಿಯೂ ಒಂದೆರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. 1990ರಲ್ಲಿ ಪೊಲೀಸ್‌ ಇಲಾಖೆ ಸೇರಿದ ಡಾ. ಡಿ.ಸಿ ರಾಜಪ್ಪನವರು ಉಪಾಧೀಕ್ಷಕರಾಗಿ ಕೆಲಸ ಆರಂಭಿಸಿದವರು. ನಂತರ ಗುಲ್ಬರ್ಗಾದಲ್ಲಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾಗಿ, ಬಳ್ಳಾರಿಯಲ್ಲಿ ಅಪರ ಮತ್ತು ಪೊಲೀಸ್‌ ಅಧೀಕ್ಷಕರಾಗಿ, ಬೆಂಗಳೂರು ನಗರದ ಪಶ್ಚಿಮ ವಿಭಾಗದ ಡಿಸಿಪಿ, ಸೈಬರ್‌ ಕ್ರೈಂ ಎಸ್ಪಿ, ಸಿಐಡಿ ಪೊಲೀಸ್‌ ಅಧೀಕ್ಷಕ ಹುದ್ದೆ ಸೇರಿದಂತೆ ಪೊಲೀಸ್‌ ಇಲಾಖೆಯ ಉನ್ನತ ಹುದ್ದೆಗಳಲ್ಲಿದ್ದು ಬೆಳಗಾವಿ ಪೊಲೀಸ್‌ ಕಮಿಷನರ್‌ ಆಗಿ ನಿವೃತ್ತರಾದವರು ಡಾ. ಡಿ.ಸಿ.ರಾಜಪ್ಪ.

ಹೆಣ್ಣುಮಕ್ಕಳನ್ನು ಅಕ್ಷರಶಃ ನರರಾಕ್ಷಸನಂತೆ ಕಾಡುತ್ತಿದ್ದ ವಿಕೃತ ಕಾಮಿ ಉಮೇಶ್‌ ರೆಡ್ಡಿಯನ್ನು ಬಂಧಿಸಿದ್ದು, ಗುಲ್ಬರ್ಗಾ ಅಪರ ಎಸ್ಪಿಯಾಗಿದ್ದಾಗ ಸುಪಾರಿ ಕಿಲ್ಲರ್‌ ಚಂದಪ್ಪ ಹರಿಜನ ಹಾಗೂ ಕುಖ್ಯಾತ ಡಕಾಯಿತ ಅನಿಲ್‌ ಜವ್ಹಾಣ್‌ ಮತ್ತು ಅಶೋಕ್‌ ಪಾಟೀಲ್‌ ಜೊತೆ ನಡೆದ ಎನ್‌ ಕೌಂಟರ್‌ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿಕೊಂಡಿದ್ದು, ಸಾಹಿತಿ ಎಂ.ಎಂ.ಕಲಬುರ್ಗಿ ಹತ್ಯೆಯ ತನಿಖೆ, ವಿಕೃತ ಕಾಮಿ ಸೈಕೋ ಜಯಶಂಕರನನ್ನು ಅರೆಸ್ಟ್‌ ಮಾಡಿದ್ದರಿಂದ ಹಿಡಿದು, ಬೆಂಗಳೂರಿನ ಜನರ ನಿದ್ರೆಗೆಡಿಸಿದ್ದ ಇರಾನಿ ಸರಗಳ್ಳರನ್ನು ಹಿಡಿದು ಮಟ್ಟ ಹಾಕಿದ್ದು ಕೂಡಾ ಇದೇ ರಾಜಪ್ಪನವರು. ತಾವು ಕಾರ್ಯ ನಿರ್ವಹಿಸಿದ ವ್ಯಾಪ್ತಿಗಳಲ್ಲಿ ಸರಗಳ್ಳತನ ನಿಯಂತ್ರಣಕ್ಕೆ ತಂದು, ವಿಜಾಪುರದ ಅಕ್ರಮ ಮರಳು ಗಣಿಗಾರಿಕೆ ನಡೆಸುವವರಿಗೆ ಸಿಂಹ ಸ್ವಪ್ನವಾಗಿದ್ದ ಡಾ. ಡಿ.ಸಿ ರಾಜಪ್ಪನವರು ಬಳ್ಳಾರಿಯಲ್ಲಿ ನಡೆಯುತ್ತಿದ್ದ ಅಕ್ರಮ ಕಬ್ಬಿಣದ ಅದಿರು ಗಣಿಗಾರಿಕೆಯ ವಿರುದ್ಧ ಅಕ್ಷರಶಃ ಹೋರಾಟ ನಡೆಸಿದವರು. ಹೀಗೆ ಖಡಕ್‌ ಪೊಲೀಸ್‌ ಅಧಿಕಾರಿಯಾಗಿದ್ದುಕೊಂಡೇ ಕಥೆ, ಕಾದಂಬರಿ, ಕಾವ್ಯ, ಕೃತಿಗಳನ್ನು ರಚಿಸುತ್ತಾ, ಪೊಲೀಸ್‌ ವಲಯದಲ್ಲಿ ಕವಿಗೋಷ್ಟಿ, ಕಮ್ಮಟಗಳನ್ನು ಏರ್ಪಡಿಸುತ್ತಾ, ತಮ್ಮಂತೆ ಸೃಜನಶೀಲ ತುಡಿತವಿರುವ ಖಾಕಿಗಳ ಪಾಲಿನ ಒಲವು ಗಳಿಸಿಕೊಂಡಿದ್ದವರು ಡಾ. ಡಿ.ಸಿ. ರಾಜಪ್ಪ. ಪೊಲೀಸ್‌ ಸಾಹಿತ್ಯ ವೇದಿಕೆಯನ್ನು ಆರಂಭಿಸಿ ಕ್ರಿಯಾಶೀಲ ಮನಸ್ಸುಗಳನ್ನು ಒಗ್ಗೂಡಿಸಿದ್ದಾರೆ.

ಇಂಥ ರಾಜಪ್ಪ ಸಾಹೇಬರು ನಿವೃತ್ತಿಯ ನಂತರ ಮತ್ತಷ್ಟು ಕ್ರಿಯಾಶೀಲರಾಗಿದ್ದಾರೆ. ತಮ್ಮದೇ ಸಂಪಾದಕತ್ವಲ್ಲಿ ʻಪೊಲೀಸ್‌ ಲಹರಿʼ ಎನ್ನುವ ಚೆಂದನೆಯ ಮಾಸಪತ್ರಿಕೆಯನ್ನು ಆರಂಭಿಸಿದ್ದಾರೆ. ಆರಕ್ಷಕರು ಇಲ್ಲಿ ಅಕ್ಷರ ಹೊಸೆಯಲಿದ್ದಾರೆ.  ಇಂದು ಮಾನ್ಯ ಗೃಹ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಪತ್ರಿಕೆಯನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದಾರೆ. ಪೊಲೀಸ್‌ ಲಹರಿ ಕರ್ನಾಟಕದ ಪೊಲೀಸ್‌ ಇಲಾಖೆಯ ಮುಖವಾಣಿಯಂತಾಗಲಿ. ಬಂದೂಕಿನ ನಳಿಕೆಯೊಳಗೆ ಅಕ್ಷರಗಳು ಜೀವ ಪಡೆಯಲಿ…!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಅನುಭವೀ ಪತ್ರಕರ್ತರ ಹೊಸ ಹೆಜ್ಜೆ…

Previous article

ಗುಳ್ಟು ನವೀನ್‌ ಅಭಿನಯದ ನೋಡಿದವರು ಏನಂತಾರೆ!

Next article

You may also like

Comments

Leave a reply

Your email address will not be published. Required fields are marked *